ಸಾರಾಂಶ
ಕನ್ನಡಪ್ರಭ ವಾರ್ತೆ ಹಿರಿಯೂರು
ಉದ್ಯೋಗ ಖಾತ್ರಿ, ವಸತಿ ಯೋಜನೆ ಮತ್ತು ವಾಣಿಜ್ಯ ಕಂಪನಿಗಳ ತೆರಿಗೆ ವಸೂಲಾತಿಯಲ್ಲಿ ಕರ್ತವ್ಯ ಲೋಪವೆಸಗಿದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ತಾಲೂಕು ಪಂಚಾಯಿತಿ ಕಾರ್ಯಾಲಯ ಮುಂಭಾಗ ಧರಣಿ ಹಮ್ಮಿಕೊಂಡಿದ್ದರು.ಪ್ರತಿಭಟನೆ ಉದ್ದೇಶಿಸಿ ತಾಲೂಕು ರೈತ ಸಂಘದ ಅಧ್ಯಕ್ಷ ಕೆ.ಟಿ.ತಿಪ್ಪೇಸ್ವಾಮಿ ಮಾತನಾಡಿ ತಾಲೂಕು ಬರ ಪಟ್ಟಿಗೆ ಸೇರಿದ್ದರೂ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೂಲಿ ಕಾರ್ಮಿಕರಿಗೆ ಕೆಲಸ ನೀಡುವ ಬದಲು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು (ಪಿಡಿಒ) ಮತ್ತು ಗುತ್ತಿಗೆದಾರರು ನಿಯಮಗಳ ಮೀರಿ ಅಕ್ರಮವಾಗಿ ಕಾಮಗಾರಿ ಮಾಡಿರುವ ಪ್ರಕರಣಗಳು ವರದಿಯಾಗಿವೆ.
ನಿಯಮಗಳ ಪ್ರಕಾರ ಶೇ.60 ಕೂಲಿ ಕೆಲಸ, ಶೇ.40ರಷ್ಟು ಸಾಮಗ್ರಿ ವೆಚ್ಚ ಬಳಸಬೇಕೆಂಬ ನಿಯಮವಿದ್ದರೂ ಕಣಜನಹಳ್ಳಿ, ಮರಡಿಹಳ್ಳಿ, ಗೌಡನಹಳ್ಳಿ, ಧರ್ಮಪುರ, ಹರಿಯಬ್ಬೆ, ಇಕ್ಕನೂರು, ಪಿಡಿಕೋಟೆ, ರಂಗನಾಥಪುರ, ಈಶ್ವರಗೆರೆ, ಯಲ್ಲದಕೆರೆ, ಯರಬಳ್ಳಿ, ಉಡುವಳ್ಳಿ, ಬಬ್ಬೂರು ಗ್ರಾಮ ಪಂಚಾಯಿತಿಗಳಲ್ಲಿ ನಿಯಮ ಉಲ್ಲಂಘಿಸಿದ್ದಾರೆ. ಇದನ್ನು ಗಮನಿಸದೆ ತಾಲೂಕು ಕಾರ್ಯನಿರ್ವಾಹಕಾಧಿಕಾರಿಗಳು, ಎಂಐಎಸ್ ಕೋ ಆರ್ಡಿನೇಟರ್ ಬಿಲ್ ದಾಖಲು ಮಾಡಿರುತ್ತಾರೆ. ಆದ್ದರಿಂದ ಈ ಎಲ್ಲಾ ಅಧಿಕಾರಿಗಳ ಕೂಡಲೇ ಅಮಾನತುಗೊಳಿಸಬೇಕು.ಫೆ.17ರಂದು ಜಿಲ್ಲಾ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ಮನವಿ ಸಲ್ಲಿಸಿದ್ದರೂ ಈ ವರೆಗೂ ಕ್ರಮ ವಹಿಸಿಲ್ಲ. ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ಪಿಡಿಒ ರೈತ ಮುಖಂಡರೊಂದಿಗೆ ಸಭೆ ನಡೆಸಿದಾಗ ಗ್ರಾಪಂ ವ್ಯಾಪ್ತಿಯಲ್ಲಿನ ವಾಣಿಜ್ಯ ಕಂಪನಿಗಳು, ಕೈಗಾರಿಕೆಗಳು ಪರವಾನಗಿ ತೆಗೆದುಕೊಳ್ಳದೆ ಹಾಗೂ ಪಂಚಾಯಿತಿಗೆ ತೆರಿಗೆ ಕಟ್ಟದೆ ಕಾರ್ಯನಿರ್ವಹಿಸುವ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಸಭೆಯಲ್ಲಿ ಸೂಚಿಸಿತ್ತು. ಜೊತೆಗೆ ವಿವಿಧ ವಸತಿ ಯೋಜನೆಯಲ್ಲಿ ಬಡವರಿಗೆ ದೀನ ದಲಿತರಿಗೆ ಸೂರು ಕಲ್ಪಿಸುವ ಉದ್ದೇಶ ಸರ್ಕಾರದಾಗಿದ್ದು ಅದನ್ನು ಗಾಳಿಗೆ ತೂರಿ ಅಕ್ರಮವಾಗಿ ಬೋಗಸ್ ಬಿಲ್ ಸೃಷ್ಟಿಸಿ ಲಕ್ಷಾಂತರ ರುಪಾಯಿ ಲಪಟಾಯಿಸಿದ್ದು, ಈ ಬಗ್ಗೆ ತನಿಖೆ ನಡೆಸಿ ಅಕ್ರಮದ ಹಣ ಮರುಪಾವತಿಸಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸೂಚಿಸಲಾಗಿತ್ತು.
ಇ ಸ್ವತ್ತುಗಳ ಗ್ರಾಮ ಪಂಚಾಯ್ತಿಯಲ್ಲೇ ಮಾಡಿಕೊಡಬೇಕು. ಖಾಸಗಿ ಕಂಪ್ಯೂಟರಲ್ಲಿ ಇ ಸ್ವತ್ತು ಮಾಡಿ ನಾಗರಿಕರಿಂದ ಸಾವಿರಾರು ರುಪಾಯಿ ಹಣ ಪಡೆಯಲಾಗುತ್ತಿದೆ. ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕಾಮಗಾರಿ ನಡೆಸದೆ ಬಿಲ್ ಪಾವತಿಸಿರುವ ಪ್ರಕರಣಗಳ ಬಗ್ಗೆಯೂ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಭೆಯಲ್ಲಿ ಸೂಚಿಸಲಾಗಿತ್ತು. ಆದರೆ ಈ ವರೆಗೂ ಕ್ರಮ ವಹಿಸಿಲ್ಲ. ಆದ್ದರಿಂದ ತಾಲೂಕಿಗೆ ವಿಶೇಷಾಧಿಕಾರಿಗಳ ತಂಡ ರಚಿಸಿ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಸ್ಥಳಕ್ಕೆ ಆಗಮಿಸಿದ್ದ ಜಿಲ್ಲಾ ಉಪ ಕಾರ್ಯದರ್ಶಿ ತಿಮ್ಮಪ್ಪರಿಗೆ ಮನವಿ ಸಲ್ಲಿಸಿದರು.ಮನವಿ ಸ್ವೀಕರಿಸಿ ಮಾತನಾಡಿದ ತಿಮ್ಮಪ್ಪ ನಿಮ್ಮ ಈ ಎಲ್ಲಾ ಬೇಡಿಕೆಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಗಮನಕ್ಕೆ ತಂದು ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲು ಮುಂದಾಗುತ್ತೇವೆ ಎಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ತಾಲೂಕು ರೈತ ಸಂಘದ ಕಾರ್ಯದರ್ಶಿ ಸಿದ್ದರಾಮಣ್ಣ, ನಂದಿಹಳ್ಳಿ ರಂಗಸ್ವಾಮಿ, ವೈ ಶಿವಣ್ಣ, ತಿಮ್ಮಾರೆಡ್ಡಿ, ಜಯಣ್ಣ, ಜಗದೀಶ್, ಜಗನ್ನಾಥ್, ಬಾಲಕೃಷ್ಣ, ರಾಮಕೃಷ್ಣ, ತಿಪ್ಪೇಸ್ವಾಮಿ, ಪೂಜಾರಿ ದಾಸಪ್ಪ, ಮೀಸೆ ರಾಮಣ್ಣ, ಗೋಪಾಲಪ್ಪ, ನಿಂಗಪ್ಪ ಮುಂತಾದವರಿದ್ದರು.