ಕಾನೂನು ಬಾಹಿರ ಕಟ್ಟಡಗಳ ವಿರುದ್ಧ ಕ್ರಮ ಕೈಗೊಳ್ಳಿ

| Published : Apr 28 2025, 11:49 PM IST

ಸಾರಾಂಶ

ಶಿರಾ ನಗರದಲ್ಲಿ ನಿಯಬಾಹಿರವಾಗಿ ಕಟ್ಟಡಗಳನ್ನು ಕಟ್ಟಲಾಗುತ್ತಿದೆ. ಕಟ್ಟಡ ಕಟ್ಟುವಾಗ ಪಾರ್ಕಿಂಗ್ ಬಿಡದೆ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ, ನಗರದಲ್ಲಿ ಈಗಾಗಲೇ ಹಲವಾರು ಕಟ್ಟಡಗಳು ನಿಯಮ ಬಾಹಿರವಾಗಿ ಕಟ್ಟಿದ್ದು, ಇದಕ್ಕೆ ನಗರಸಭೆ ಅಧಿಕಾರಿಗಳು ಯಾವುದೇ ರೀತಿಯ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸದಸ್ಯೆ ಉಮಾ ವಿಜಯರಾಜ್ ಆರೋಪಿಸಿದರು.

ಕನ್ನಡಪ್ರಭ ವಾರ್ತೆ ಶಿರಾ ಶಿರಾ ನಗರದಲ್ಲಿ ನಿಯಬಾಹಿರವಾಗಿ ಕಟ್ಟಡಗಳನ್ನು ಕಟ್ಟಲಾಗುತ್ತಿದೆ. ಕಟ್ಟಡ ಕಟ್ಟುವಾಗ ಪಾರ್ಕಿಂಗ್ ಬಿಡದೆ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ, ನಗರದಲ್ಲಿ ಈಗಾಗಲೇ ಹಲವಾರು ಕಟ್ಟಡಗಳು ನಿಯಮ ಬಾಹಿರವಾಗಿ ಕಟ್ಟಿದ್ದು, ಇದಕ್ಕೆ ನಗರಸಭೆ ಅಧಿಕಾರಿಗಳು ಯಾವುದೇ ರೀತಿಯ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸದಸ್ಯೆ ಉಮಾ ವಿಜಯರಾಜ್ ಆರೋಪಿಸಿದರು. ನಗರಸಭೆ ಸಭಾಂಗಣದಲ್ಲಿ ಸೋಮವಾರ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ನಗರದಲ್ಲಿ ನಡೆಯುತ್ತಿರುವ ಕಟ್ಟಡದ ನಿರ್ಮಾಣದ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಸ್ಥಳ ಪರಿಶೀಲಿಸಿ ಅನುಮತಿ ನೀಡಬೇಕು ಎಂದರು. ಇದಕ್ಕೆ ಉತ್ತರಿಸಿದ ನಗರಸಭೆ ಪೌರಾಯುಕ್ತ ಇಂತಹ ಕಟ್ಟಡಗಳಿಗೆ ಈಗಾಗಲೇ ಹಲವು ನೋಟಿಸ್‌ ನೀಡಿದ್ದೇವೆ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದರು. ಶಿರಾ ನಗರಸಭೆ ಅಂಗಡಿ ಮಳಿಗೆಗಳ ಬಾಡಿಗೆ ಸುಮಾರು ೩.೫೦ ಕೋಟಿ ಬಾಕಿ ಇದ್ದು, ೨ ವರ್ಷಗಳಿಂದಲೂ ಬಾಡಿಗೆ ವಸೂಲಾತಿ ಮಾಡಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಶಾಸಕರು ಸೂಕ್ರ ಕ್ರಮ ಕೈಗೊಳ್ಳಬೇಕು ಎಂದು ನಗರಸಭೆ ಸದಸ್ಯರಾದ ಎಸ್.ಎಲ್.ರಂಗನಾಥ್, ಪೂಜಾ ಪೆದ್ದರಾಜು ಸೇರಿದಂತೆ ಹಲವು ಸದಸ್ಯರು ಒತ್ತಾಯಿಸಿದರು. ಕಳೆದ ಎರಡು ವರ್ಷಗಳಿಂದಲೂ ಅಂಗಡಿ ಮಳಿಗೆಗಳ ಬಾಡಿಗೆ ವಸೂಲಾತಿ ಮಾಡಲು ನಗರಸಭೆ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದರು. ಇದಕ್ಕೆ ಉತ್ತರಿಸಿದ ಪೌರಾಯುಕ್ತ ರುದ್ರೇಶ್ ಅವರು ಸುಮಾರು ೫ ಕೋಟಿ ಬಾಕಿ ಇದ್ದ ಅಂಗಡಿ ಮಳಿಗೆಗಳ ಬಾಡಿಗೆಯನ್ನು ಸುಮಾರು ೧.೫೦ ಕೋಟಿ ವಸೂಲಾತಿ ಮಾಡಿದ್ದೇವೆ. ಉಳಿಕೆ ೩.೫೦ ಕೋಟಿ ಬಾಡಿಗೆ ಹಣವನ್ನು ವಸೂಲು ಮಾಡಲು ಕ್ರಮ ಕೈಗೊಳ್ಳುತ್ತೇವೆ ಎಂದರು. ನಗರಸಭೆಯಲ್ಲಿ ಪ್ರಸ್ತುತ ಇ ಖಾತಾ ಆಂದೋಲನ ನಡೆಯುತ್ತಿದ್ದು, ಮಾಲೀಕರು ಕಂದಾಯವನ್ನು ಕಟ್ಟಲು ನಗರಸಭೆ ಸಮರ್ಪಕವಾಗಿ ವಿವರಣೆ ನೀಡಬೇಕು. ಕೆಲವರು ಎರಡುಪಟ್ಟು ಕಟ್ಟಿ ಎನ್ನುತ್ತಾರೆ ಇದಕ್ಕೆ ಸಮರ್ಪಕ ಸಲಹೆ ಸೂಚನೆಗಳನ್ನು ನಗರದ ಆಸ್ತಿ ಮಾಲೀಕರಿಗೆ ನೀಡಬೇಕು ಹಾಗೂ ಇ ಖಾತಾ ವ್ಯವಸ್ಥೆಯನ್ನು ಸರಳೀಕರಣಗೊಳಿಸಬೇಕು ಎಂದು ನಗರಸಭಾ ಸದಸ್ಯ ಆರ್.ರಾಮು ಒತ್ತಾಯಿಸಿದರು. ಶಿರಾ ನಗರದ ಅಂಬೇಡ್ಕರ್ ಸರ್ಕಲ್‌ ನಿಂದ ರಾಹೆ ೪೮ರವರೆಗೆ ಸಂಪರ್ಕಿಸುವ ರಸ್ತೆಯನ್ನು ಸುಮಾರು ೭೩ ಕೋಟಿ ರು.ಗಳಲ್ಲಿ ಅಭಿವೃದ್ಧಿಪಡಿಸಲಾಗುವುದು. ಶಿರಾದಲ್ಲಿ ರಸ್ತೆ ಒತ್ತುವರಿ ಮಾಡುವವರಿಗೆ ಯಾರೂ ಸಹಕಾರ ಕೊಡಬೇಡಿ. ಮುಂದಿನ ದಿನಗಳಲ್ಲಿ ಶಿರಾ ನಗರದಲ್ಲಿ ಜನಸಂಖ್ಯೆ ಹೆಚ್ಚಳವಾಗಲಿದೆ. ಆದ್ದರಿಂದ ನಗರದಲ್ಲಿ ರಸ್ತೆಗಳು ವಿಶಾಲವಾಗಿರಬೇಕು ಸಾರ್ವಜನಿಕರೂ ಸಹ ನಗರದಲ್ಲಿ ಕಟ್ಟಡ ಕಟ್ಟುವಾಗ ರಸ್ತೆಯನ್ನು ಒತ್ತುವರಿ ಮಾಡಬೇಡಿ ಎಂದು ಶಾಸಕ ಟಿ.ಬಿ.ಜಯಚಂದ್ರ ಹೇಳಿದರು. ರಾಜ್ಯ ಸರಕಾರ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಎಲ್ಲೇ ಮಾಡಲು ಹೊರಟರು ಅನಾನುಕೂಲಗಳೇ ಹೆಚ್ಚು ಆದರೆ ಶಿರಾದಲ್ಲಿ ಎಲ್ಲಾ ಅನುಕೂಲಗಳು ಇದ್ದು, ಇದರ ಸಾಧಕ ಬಾಧಕಗಳ ಬಗ್ಗೆ ಸರಕಾರಕ್ಕೆ ಶಿರಾದಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಆಗಬೇಕು ಎಂದು ಲಿಖಿತ ರೂಪದಲ್ಲಿ ಮನವರಿಕೆ ಮಾಡಿಕೊಟ್ಟಿದ್ದೇನೆ. ಮದಲೂರು ಕೆರೆಯ ನೀರನ್ನು ಬಳಸಲು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಒಪ್ಪಿಗೆಯನ್ನೂ ನೀಡಲಾಗಿದೆ. ಈ ನಿರ್ಣಯ ಶಿರಾ ನಗರಸಭೆಯಿಂದಲೇ ಆಗಲಿ ಎಂದು ಶಾಸಕ ಟಿ.ಬಿ.ಜಯಚಂದ್ರ ಅವರು ನಗರಸಭೆ ಸಾಮಾನ್ಯ ಸಭೆಯಲ್ಲಿ ನಿರ್ಣಯಿಸಿ ಸದಸ್ಯರ ಸಹಿ ಪಡೆಯಲಾಯಿತು. ಸಭೆಯಲ್ಲಿ ನಗರಸಭೆ ಅಧ್ಯಕ್ಷ ಜೀಷಾನ್ ಮೊಹಮದ್, ಉಪಾಧ್ಯಕ್ಷ ಲಕ್ಷ್ಮೀಕಾಂತ್, ಪೌರಾಯುಕ್ತ ರುದ್ರೇಶ್ ಸೇರಿದಂತೆ ನಗರಸಭಾ ಸದಸ್ಯರು ಹಾಜರಿದ್ದರು.