ಸಾರಾಂಶ
ನಗರ ಮತ್ತು ಗ್ರಾಮೀಣ ಭಾಗದಲ್ಲಿ ಅಕ್ರಮ ಬಡಾವಣೆಗಳು ತಲೆ ಎತ್ತಿದ್ದು, ಇವುಗಳ ಬಗ್ಗೆ ಮುಲ್ಲಾಜಿಲ್ಲದೆ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು. ಸರ್ವೇ ಇಲಾಖೆ ಇನ್ನಷ್ಟು ಚುರುಕಾಗಿ ಕೆಲಸ ಮಾಡಬೇಕು ಎಂದು ಶಾಸಕ ಸಿ.ಪಿ. ಯೋಗೇಶ್ವರ್ ತಾಕೀತು ಮಾಡಿದರು.
ಕನ್ನಡಪ್ರಭ ವಾರ್ತೆ ಚನ್ನಪಟ್ಟಣ
ನಗರ ಮತ್ತು ಗ್ರಾಮೀಣ ಭಾಗದಲ್ಲಿ ಅಕ್ರಮ ಬಡಾವಣೆಗಳು ತಲೆ ಎತ್ತಿದ್ದು, ಇವುಗಳ ಬಗ್ಗೆ ಮುಲ್ಲಾಜಿಲ್ಲದೆ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು. ಸರ್ವೇ ಇಲಾಖೆ ಇನ್ನಷ್ಟು ಚುರುಕಾಗಿ ಕೆಲಸ ಮಾಡಬೇಕು ಎಂದು ಶಾಸಕ ಸಿ.ಪಿ. ಯೋಗೇಶ್ವರ್ ತಾಕೀತು ಮಾಡಿದರು.ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕಂದಾಯ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶಗಳಲ್ಲಿ ದಲಿತರ ಸ್ಮಶಾನ ಸಮಸ್ಯೆ ಇನ್ನೂ ಬಗೆಹರಿದಿಲ್ಲ. ಈ ಸಮಸ್ಯೆ ಬಗೆಹರಿಯಲು ಇನ್ನು ಎಷ್ಟು ದಿನಗಳ ಕಾಲಾವಕಾಶ ಬೇಕೆಂದು ಅಧಿಕಾರಿಗಳ ವಿರುದ್ಧ ಹರಿಹಾಯ್ದ ಶಾಸಕರು, ಈ ಬಗ್ಗೆ ಸಬೂಬುಗಳನ್ನು ಹೇಳದೇ ಸಮಸ್ಯೆ ಪರಿಹರಿಸುವಂತೆ ಸೂಚಿಸಿದರು.
ರೈತರ ಜಮೀನುಗಳ ಬಳಿಯ ನಕಾಶೆ ರಸ್ತೆಗಳು ಸಂಪೂರ್ಣವಾಗಿ ಮುಚ್ಚಿ ಹೋಗಿದ್ದು, ಅವುಗಳನ್ನು ತೆರವುಗೊಳಿಸುವುದು, ಸರಕಾರಿ ಜಾಗಗಳು ಒತ್ತುವರಿಯಾಗಿದ್ದರೆ ತೆರವುಗೊಳಿಸುವುದು ಸೇರಿದಂತೆ ಹತ್ತು ಹಲವು ವಿಚಾರಗಳನ್ನು ಪ್ರಸ್ಥಾಪಿಸಿ ಈ ಬಗ್ಗೆ ಗಮನಹರಿಸುವಂತೆ ತಿಳಿಸಿದರು.ತಾಲೂಕಿನಲ್ಲಿ ಈ ಹಿಂದೆ ಏನಾಗಿತ್ತೋ ಗೊತ್ತಿಲ್ಲ. ಆದರೆ, ನಮ್ಮ ಅವಧಿಯಲ್ಲಿ ಇನ್ನಷ್ಟು ಉತ್ತಮವಾಗಿ ಕಾರ್ಯ ನಿರ್ವಹಿಸುವ ಮೂಲಕ ಜನಸ್ನೇಹಿ ಆಡಳಿತಕ್ಕೆ ಹೆಚ್ಚಿನ ಒತ್ತು ನೀಡುವಂತೆ ಸಭೆಯಲ್ಲಿ ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.
ಇದೇ ವೇಳೆ ಆಶ್ರಯ ನಿವೇಶನ, ಹರಿಜನ ಸ್ಮಶಾನ ಅಭಿವೃದ್ಧಿ, ಕೃಷಿ ಭೂಮಿಯಲ್ಲಿ ಅಕ್ರಮ ಬಡಾವಣೆಗಳ ನಿರ್ಮಾಣ, ಕಂದಾಯ ಗ್ರಾಮ, ಕೋಡಿ ಗ್ರಾಮಗಳ ಬಗ್ಗೆ ಸಮಗ್ರವಾಗಿ ಚರ್ಚಿಸಿ ಅಧಿಕಾರಿಗಳಿಂದ ಮಾಹಿತಿ ಪಡೆಯುವುದರ ಜೊತೆಗೆ ಸಮಸ್ಯೆ ಪರಿಹಾರ ಸಂಬಂಧ ಚರ್ಚೆ ನಡೆಸಿದರು.ಸಭೆಯಲ್ಲಿ ತಹಸೀಲ್ದಾರ್ ನರಸಿಂಹಮೂರ್ತಿ, ಭೂ ಮಾಪನ ಸಹಾಯಕ ನಿರ್ದೇಶಕ ಪ್ರಖ್ಯಾತ್, ಕಂದಾಯ ಇಲಾಖಾ ಅಧಿಕಾರಿಗಳು, ಸರ್ವೇ ಇಲಾಖೆ ಅಧಿಕಾರಿಗಳು ಸೇರಿದಂತೆ ಹಲವು ಅಧಿಕಾರಿಗಳು ಹಾಜರಿದ್ದರು.