ರಾಜನಹಳ್ಳಿ ಶ್ರೀ ವಿರುದ್ಧ ಕ್ರಮ ಕೈಗೊಳ್ಳಿ: ಗುಮ್ಮನೂರು ಮಲ್ಲಿಕಾರ್ಜುನ

| Published : Oct 13 2025, 02:00 AM IST

ರಾಜನಹಳ್ಳಿ ಶ್ರೀ ವಿರುದ್ಧ ಕ್ರಮ ಕೈಗೊಳ್ಳಿ: ಗುಮ್ಮನೂರು ಮಲ್ಲಿಕಾರ್ಜುನ
Share this Article
  • FB
  • TW
  • Linkdin
  • Email

ಸಾರಾಂಶ

ತಮಗೆ ಬೇಕಾದವರನ್ನು ಟ್ರಸ್ಟ್‌ ಪದಾಧಿಕಾರಿ ಮಾಡಿ, ಹಣ ದುರುಪಯೋಗ ಮಾಡಿಕೊಂಡು, ಸರ್ಕಾರದ ಹಣ ದುರ್ಬಳಕೆ ಮಾಡಿಕೊಂಡ ರಾಜನಹಳ್ಳಿ ಶ್ರೀ ಮಹರ್ಷಿ ವಾಲ್ಮೀಕಿ ಪೀಠದ ಶ್ರೀ ಪ್ರಸನ್ನಾನಂದ ಪುರಿ ಸ್ವಾಮೀಜಿಯನ್ನು ನ್ಯಾಯಾಲಯದ ನಿರ್ದೇಶನದಂತೆ ಕಸ್ಟಡಿಗೆ ಪಡೆಯುವಂತೆ ಹಿರಿಯ ವಕೀಲ ಕೆ.ಎಂ.ಮಲ್ಲಿಕಾರ್ಜುನಪ್ಪ ಗುಮ್ಮನೂರು ಒತ್ತಾಯಿಸಿದರು.

ಕನ್ನಡಪ್ರಭ ವಾರ್ತೆ ದಾವಣಗೆರೆ

ರಾಣೆಬೆನ್ನೂರಿನ ಶ್ರೀ ಮಾರುತಿ ಮ್ಯಾನ್ ಪವರ್ ಸೊಸೈಟಿಯ ಮೂಲ ಟ್ರಸ್ಟ್‌ನ ಪದಾಧಿಕಾರಿಗಳ ಸಹಿ ಪೋರ್ಜರಿ ಮಾಡಿ, ಮೂಲ ಪದಾಧಿಕಾರಿಗಳನ್ನೆಲ್ಲಾ ತೆಗೆದು, ತಮಗೆ ಬೇಕಾದವರನ್ನು ಟ್ರಸ್ಟ್‌ ಪದಾಧಿಕಾರಿ ಮಾಡಿ, ಹಣ ದುರುಪಯೋಗ ಮಾಡಿಕೊಂಡು, ಸರ್ಕಾರದ ಹಣ ದುರ್ಬಳಕೆ ಮಾಡಿಕೊಂಡ ರಾಜನಹಳ್ಳಿ ಶ್ರೀ ಮಹರ್ಷಿ ವಾಲ್ಮೀಕಿ ಪೀಠದ ಶ್ರೀ ಪ್ರಸನ್ನಾನಂದ ಪುರಿ ಸ್ವಾಮೀಜಿಯನ್ನು ನ್ಯಾಯಾಲಯದ ನಿರ್ದೇಶನದಂತೆ ಕಸ್ಟಡಿಗೆ ಪಡೆಯುವಂತೆ ಹಿರಿಯ ವಕೀಲ ಕೆ.ಎಂ.ಮಲ್ಲಿಕಾರ್ಜುನಪ್ಪ ಗುಮ್ಮನೂರು ಒತ್ತಾಯಿಸಿದರು.

ನಗರದಲ್ಲಿ ಭಾನುವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಟ್ರಸ್ಟ್ ವಿರುದ್ಧ ಅಕ್ಷರ ದಾಸೋಹ, ಸಹಿ ಪೋರ್ಜರಿ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಣೆಬೆನ್ನೂರಿನ ಸಿಜೆಎಂ ನ್ಯಾಯಾಲಯದಲ್ಲಿ ದೂರು ದಾಖಲಾಗಿದ್ದು, ರಾಣೆಬೆನ್ನೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲೂ ಪ್ರಕರಣ ದಾಖಲಾಗಿದೆ. ಶ್ರೀ ಪ್ರಸನ್ನಾನಂದ ಪುರಿ ಸ್ವಾಮೀಜಿ ಇತರನ್ನು ಠಾಣೆಯಲ್ಲಿ ದಾಖಲಾದ ಎಫ್‌ಐಆರ್‌ನನ್ವಯ ಕಸ್ಟಡಿಗೆ ಪಡೆಯುವಂತೆ ಹಾವೇರಿ ಡಿಸಿ, ಎಸ್ಪಿಗೆ ಆಗ್ರಹಿಸಿದರು.

ವ್ಯವಸ್ಥಿತವಾಗಿ, ಸುಗಮವಾಗಿ ನಡೆಯುತ್ತಿದ್ದ ಟ್ರಸ್ಟ್‌ನ ಅಧಿಕಾರವನ್ನು ಮೂಲ ಪದಾಧಿಕಾರಿಗಳ ಗಮನಕ್ಕೆ ತರದೇ ಶ್ರೀ ಪ್ರಸನ್ನಾನಂದ ಪುರಿ ಸ್ವಾಮೀಜಿ ತಮಗೆ ಬೇಕಾದವರನ್ನು ಪದಾಧಿಕಾರಿಗಳನ್ನಾಗಿ ಮಾಡಿಕೊಂಡು, ಟ್ರಸ್ಟ್ ಅಧ್ಯಕ್ಷರಾಗಿದ್ದಾರೆ. ದಾಖಲೆಗಳನ್ನು ತಿದ್ದಿ ಹಾವೇರಿ ಜಿಲ್ಲಾ ನೋಂದಣಾಧಿಕಾರಿಗಳಿಗೆ ನೀಡಿರುವ ಬಗ್ಗೆ ಶ್ರೀಗಳು ಏನೇ ತಪ್ಪುಗಳಾದರೂ ತಾವೇ ಕಾರಣವೆಂಬುದಾಗಿ ಪತ್ರ ಬರೆದು ಕೊಟ್ಟಿದ್ದಾರೆ ಎಂದರು.

ದೂರುದಾರ ರಾಣೆಬೆನ್ನೂರಿನ ಶ್ರೀಧರ ಚಿಕ್ಕಣ್ಣನವರ ಮಾತನಾಡಿ, ಸೊಸೈಟಿಯ 9 ಸದಸ್ಯರಲ್ಲಿ ಒಬ್ಬರು ಸಾವನ್ನಪ್ಪಿದ್ದರಿಂದ ಶ್ರೀ ಪ್ರಸನ್ನಾನಂದ ಸ್ವಾಮೀಜಿಯವರನ್ನು 2016ರಲ್ಲಿ ಸದಸ್ಯರಾಗಿ ಮಾಡಿಕೊಂಡಿದ್ದು, ನಂತರ 2017ರಲ್ಲಿ ಅಧ್ಯಕ್ಷರಾಗಿದ್ದಾರೆ. ಸೊಸೈಟಿ ಪರಭಾರೆಯಾಗಲೀ, ದಾನವಾಗಲೀ, ಡೀಡ್ ಆಗಲಿ, ಠರಾವು ಆಗಲಿ, ಹಸ್ತಾಂತರವಾಗಲೀ ನಾವ್ಯಾರೂ ಮಾಡಿಕೊಟ್ಟಿಲ್ಲ ಎಂದು ಸ್ಪಷ್ಟಪಡಿಸಿದರು.

ಶಾಲೆಯ ಮಕ್ಕಳಿಗೆ ಅಕ್ಷರ ದಾಸೋಹದಡಿ ಕೊಠಡಿ ನಿರ್ಮಾಣಕ್ಕೆ 2016-17ನೇ ಸಾಲಿನಲ್ಲಿ 3.80 ಲಕ್ಷ ರು. ಸರ್ಕಾರದ ಅನುದಾನ ಪಡೆದು, ಕೊಠಡಿ ನಿರ್ಮಾಣ ಮಾಡದೇ, ದಾಖಲೆ ಸೃಷ್ಟಿಸಿ, ಹಣವನ್ನು ತಮ್ಮ ಆಪ್ತರ ಖಾತೆಗೆ ವರ್ಗಾಯಿಸಿ ಸ್ವಬಳಕೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ರಾಣೆಬೆನ್ನೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸಂಸ್ಥೆಯಲ್ಲಿ ಕಾರ್ಯದರ್ಶಿಯಾಗಿರುವ ಬಸವರಾಜ ಯಲ್ಲಪ್ಪ ತಳವಾರ್ 2022-23ನೇ ಅಕ್ಷರ ದಾಸೋಹದ ಕೊಠಡಿ ಬೀಗ ತೆಗೆದು, 200 ಕೆಜಿ ಅಕ್ಕಿ ಕಳವು ಮಾಡಿದ್ದಾರೆ. ಈ ಬಗ್ಗೆ ಅಂದಿನ ಅರೆಕಾಲಿಕ ಶಿಕ್ಷಕ ಅಕ್ಷಯ ನಾಯಕ್‌ ಅಧಿಕಾರಿಗಳಿಗೆ ದೂರು ನೀಡಿದ್ದರು ಎಂದು ಅವರು ಹೇಳಿದರು.

ಸಂಬಂಧಿಸಿದ ಅಧಿಕಾರಿಗಳು ಶಾಲೆಯ ಮುಖ್ಯ ಶಿಕ್ಷಕಿ ಎಂ.ಟಿ.ಪ್ರಿಯಾಂಕರಿಗೆ ಕಾರಣ ಕೇಳಿ ನೋಟೀಸ್ ಜಾರಿಗೊಳಿಸಿದ್ದಾರೆ. ಆರ್‌ಟಿಐನಡಿ ಅಕ್ಷರ ದಾಸೋಹ ಕೊಠಡಿ ನಿರ್ಮಾಣದ ಬಗ್ಗೆ ದಾಖಲೆ ಕೇಳಿದ್ದರೂ ದಾಖಲೆ ಒದಗಿಸಿಲ್ಲ. ಸೊಸೈಟಿಯಲ್ಲಿ ಆದ ಅನ್ಯಾಯದ ವಿರುದ್ಧ 2022ರ ಅ.15 ಹಾಗೂ 2023ರ ಮೇ 3ರಂದು ಸಂಸ್ಥೆಯಲ್ಲಿ ಆದ ಲೋಪದೋಷಗಳನ್ನು ತಿಳಿದು, ಸೊಸೈಟಿ ನವೀಕರಣ ಮಾಡದಂತೆ, ಯಾವುದೇ ಪದನಾಮೆ, ರಾಜೀನಾಮೆ ಬದಲಾವಣೆ ಮಾಡದಂತೆ ದೂರು ದಾಖಲು ಮಾಡಿದ್ದೆ ಎಂದರು.

ರಾಣೆಬೆನ್ನೂರು ತಾ. ಚಳಗೇರಿಯ ಸಣ್ಣತಮ್ಮಪ್ಪ ಬಾರ್ಕಿ, ಬೆನಕನಕೊಂಡ ಚಂದ್ರಪ್ಪ, ಚಳಗೇರಿಯ ಹನುಮಂತ ಸೋಮಕ್ಕಳವರ್‌, ಹನುಮಂತಪ್ಪ ಬ್ಯಾಲದಹಳ್ಳಿ ಇತರರು ಇದ್ದರು.

ರಾಣೆಬೆನ್ನೂರಿನ ನಾಯಕ ಸಮಾಜ ಬಾಂಧವರು, ಪ್ರಸನ್ನಾನಂದ ಪುರಿ ಸ್ವಾಮೀಜಿ ಸಭೆ ಮಾಡಿ, ನನಗೆ ರಾಜೀನಾಮೆ ಕೇಳಿದರೆ ಕೊಡಲು ಸಿದ್ಧನಿದ್ದೇನೆ. ಶಾಲೆಯಲ್ಲಿ ನಿವೃತ್ತಿಯಾಗಿರುವ 4 ಶಿಕ್ಷಕ ಹುದ್ದೆ ಭರ್ತಿಗೆ ಸರ್ಕಾರ ಅವಕಾಶ ನೀಡಿದೆ. ಅವುಗಳನ್ನು ಭರ್ತಿ ಮಾಡಿಕೊಳ್ಳಲು ನಮ್ಮನ್ನು ಹೊರಗಿಡುವ ಕೆಲಸ ಮಾಡಿದ್ದಾರೆ. ಶಾಲೆಯಲ್ಲಿ 3.80 ಲಕ್ಷ ರು. ಅಕ್ಷರ ದಾಸೋಹದ ಹಣ ದುರ್ಬಳಕೆ, ನಮ್ಮ ಸಹಿಗಳ ಪೋರ್ಜರಿ, ಪದಾಧಿಕಾರಿಗಳ ಪಟ್ಟಿ ಅಂತಾ ಪೋರ್ಜರಿ ಮಾಡಿದ್ದರ ಬಗ್ಗೆ ತನಿಖೆಯಾಗಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಆಗಬೇಕು.

ಶ್ರೀಧರ ಚಿಕಣ್ಣನವರ್, ರಾಣೆಬೆನ್ನೂರು