ಬಿಸಿಯೂಟ, ಮೊಟ್ಟೆ ನೀಡದ ಮುಖ್ಯಶಿಕ್ಷಕನ ಮೇಲೆ ಕ್ರಮ ಕೈಗೊಳ್ಳಲು ಮನವಿ

| Published : Jan 02 2025, 12:30 AM IST

ಸಾರಾಂಶ

ತಾಲೂಕಿನ ಬೊಮ್ಮಸಾಗರ ಕ್ಯಾಂಪಿನಲ್ಲಿರುವ ಸ.ಕಿ.ಪ್ರಾ. ಶಾಲಾ ಮಕ್ಕಳಿಗೆ ಸರಿಯಾಗಿ ಬಿಸಿಯೂಟ, ಮೊಟ್ಟೆ, ಹಾಲು, ಚಕ್ಕಿ ನೀಡದ ಮುಖ್ಯಶಿಕ್ಷಕನ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಕರ್ನಾಟಕ ಯುವಸೇನೆ ಗಂಗಾವತಿಯ ಬಿಇಒಗೆ ಮನವಿ ಸಲ್ಲಿಸಿತು.

ಕನ್ನಡಪ್ರಭ ವಾರ್ತೆ ಕನಕಗಿರಿ

ತಾಲೂಕಿನ ಬೊಮ್ಮಸಾಗರ ಕ್ಯಾಂಪಿನಲ್ಲಿರುವ ಸ.ಕಿ.ಪ್ರಾ. ಶಾಲಾ ಮಕ್ಕಳಿಗೆ ಸರಿಯಾಗಿ ಬಿಸಿಯೂಟ, ಮೊಟ್ಟೆ, ಹಾಲು, ಚಕ್ಕಿ ನೀಡದ ಮುಖ್ಯಶಿಕ್ಷಕನ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಕರ್ನಾಟಕ ಯುವಸೇನೆ ಗಂಗಾವತಿಯ ಬಿಇಒಗೆ ಮನವಿ ಸಲ್ಲಿಸಿತು.

ಸೇನೆಯ ತಾಲೂಕಾಧ್ಯಕ್ಷ ಯಮನೂರಪ್ಪ ಮಲ್ಲಿಗೆವಾಡ ಮಾತನಾಡಿ, ಬೊಮ್ಮಸಾಗರ ತಾಂಡಾ ಹಾಗೂ ಕ್ಯಾಂಪಿನ ಜನರು ಕೂಲಿ ಅರಸಿ ಗುಳೆ ಹೋಗಿದ್ದಾರೆ. ಶಾಲೆಗೆ ಹೋಗುವ ಮಕ್ಕಳನ್ನು ಗುಳೆ ಹೋದ ಪಾಲಕರು ಬೇರೊಬ್ಬರ ಮನೆಯಲ್ಲಿ ಬಿಟ್ಟು ಹೋಗಿದ್ದಾರ. ಹೀಗೆ ದಿನಾಲೂ ಶಾಲೆಗೆ ಬರುವ ಮಕ್ಕಳಿಗೆ ಇಲಾಖೆ ನೀಡುವ ಮಧ್ಯಾಹ್ನದ ಬಿಸಿಯೂಟ, ಮೊಟ್ಟೆ, ಚಕ್ಕಿ ಹಾಗೂ ಹಾಲನ್ನು ಸರಿಯಾಗಿ ನೀಡುತ್ತಿಲ್ಲ. ಸ್ಥಳೀಯರು ಈ ಬಗ್ಗೆ ಪ್ರಶ್ನಿಸಿದಾಗೊಮ್ಮೆ ಎರಡ್ಮೂರು ದಿನ ಪದಾರ್ಥಗಳನ್ನು ಸರಿಯಾಗಿ ಕೊಟ್ಟಂತೆ ಮಾಡಿ ಮತ್ತೆ ಕೈಬಿಡಲಾಗುತ್ತಿದೆ. ಇದರಿಂದ ಶಾಲಾ ಮಕ್ಕಳು ಬಿಸಿಯೂಟ, ಮೊಟ್ಟೆ ಸೇರಿದಂತೆ ನಾನಾ ಆಹಾರದಿಂದ ವಂಚಿತರಾಗುತ್ತಿದ್ದಾರೆ. ಅಲ್ಲದೇ ಕೊಳೆತ ತರಕಾರಿಯಿಂದ ಅಡುಗೆ ಮಾಡುತ್ತಿರುವುದರಿಂದ ಮಕ್ಕಳು ಬಿಸಿಯೂಟವನ್ನು ಮಾಡುತ್ತಿಲ್ಲ. ಈ ಬಗ್ಗೆ ಮುಖ್ಯಶಿಕ್ಷಕರನ್ನು ಕೇಳಿದಾಗ ಕೆಲಸ ನಿರ್ವಹಿಸಲು ಆಗುತ್ತಿಲ್ಲ ಎಂದು ಬೇಜವಾಬ್ದಾರಿ ಉತ್ತರ ನೀಡಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರ ತವರು ಕ್ಷೇತ್ರದಲ್ಲಿ ತಾಂಡಾ ಮಕ್ಕಳಿಗೆ ಬಿಸಿಯೂಟ ಸಿಗದಿರುವುದು ಬಹುದೊಡ್ಡ ದುರಂತವಾಗಿದೆ. ಈ ಕುರಿತು ಶಿಕ್ಷಣ ಇಲಾಖೆ ಅಧಿಕಾರಿಗಳು ತಕ್ಷಣವೇ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಪ್ರಮುಖರಾದ ಲಕ್ಕಪ್ಪ ರಾಠೋಡ, ಕೃಷ್ಣಪ್ಪ ರಾಠೋಡ ಈ ವೇಳೆ ಇದ್ದರು.