ಸಾರಾಂಶ
ಕನ್ನಡಪ್ರಭ ವಾರ್ತೆ ಕಲಬುರಗಿ, ಜೇವರ್ಗಿ
ಜೇವರ್ಗಿ ಪಟ್ಟಣದಲ್ಲಿ ಎಲ್ಲಾ ವಾರ್ಡ್‌ಗಳು, ಜನ ನಿಬಿಡ ಬಸ್ ನಿಲ್ದಾಣ, ಮುಖ್ಯರಸ್ತೆ, ಮಹಾಲಕ್ಷ್ಮೀ ಮಂದಿರ ಸುತ್ತಲಿನ ಪ್ರದೇಶ, ಬಸ್ ನಿಲ್ದಾಣದ ಸುತ್ತಮುತ್ತಲಿನ ಸ್ಥಳಗಳಲ್ಲಿ ನೈರ್ಮಲ್ಯ ಸದಾಕಾಲ ಇರುವಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ, ಬಿತ್ತನೆ ಬೀಜ ರಸಗೊಬ್ಬರ ಕೊರತೆ ಕಾಡದಂತೆ ಹಾಗೂ ಕೃತಕ ಅಭಾವ ಹುಟ್ಟು ಹಾಕುವವರನ್ನು ಗುರುತಿಸಿ ಅಗತ್ಯ ಕಾನೂನು ಕ್ರಮ ಕೈಗೊಳ್ಳುವಂತೆ ಶಾಸಕರಾದ ಡಾ. ಅಜಯ್ ಸಿಂಗ್ ಅವರು ತಾಲೂಕು ಅಭಿವೃದ್ಧಿ ಸಭೆಯಲ್ಲಿ ಪುರಸಬೆ ಹಾಗೂ ಕೃಷಿ ಅಧಿಕಾರಿಗಳಿಗೆ ತಾಕೀತು ಮಾಡಿದರು.ಇತ್ತೀಚೆಗೆ ಜೇವರ್ಗಿಯ ಕೆಲ ಪ್ರದೇಶಗಳಲ್ಲಿ ನೈರ್ಮಲ್ಯವಿಲ್ಲವೆಂಬ ವಿಡಿಯೋಗಳು ಕೆಲವು ವೈರಲ್ ಆಗಿ ಸುದ್ದಿಯಾಗಿದ್ದವು. ಇದೇ ಪ್ರಸಂಗದ ಹಿನ್ನೆಲೆಯಲ್ಲಿ ಶಾಸಕರು ಪುರಸಭೆಯ ನೈರ್ಮಲ್ಯ್ಯ ಕಾಪಾಡುವ ಕೆಲಸ ಕಾರ್ಯಗಳು ಇನ್ನಷ್ಟು ಚುರುಕಾಗಬೇಕು, ಕಾರ್ಮಿಕರನ್ನು ಸರಿಯಾಗಿ ಕೆಲಸಕ್ಕೆ ಪಡೆದು ಅವರಿಗೆ ಸಂಬಳ ಪಾವತಿಸಬೇಕೆಂದು ಸೂಚನೆ ನೀಡಿದರು.ಸಭೆಯಲ್ಲಿ ಜೇವರ್ಗಿ ಪಟ್ಟಣ ಹಾಗೂ ಜೇವರ್ಗಿ ಮತ್ತು ಯಡ್ರಾಮಿ ತಾಲೂಕಿಗೆ ಸಂಬಂಧಪಟ್ಟಂತಹ 52 ವಿಷಯಗಳ ಬಗ್ಗೆ ಚರ್ಚಿಸಲಾಯಿತು.
ರಸಗೊಬ್ಬರ, ಬೀಜ ಕೃತಕ ಅಭಾವದ ವಿರುದ್ಧ ಕ್ರಮ:ಯಡ್ರಾಮಿ ಹಾಗೂ ಜೇವರ್ಗಿ ತಾಲೂಕಿನಲ್ಲಿ ಉತ್ತಮ ಮಳೆಯಾಗಿದೆ. ರೈತರೆಲ್ಲರೂ ಬಿತ್ತನೆಗೆ ಮುಂದಾಗಿದ್ದಾರೆ. ಅನೇಕರು ಅದಾಗಲೇ ಬಿತ್ತಿದ್ದಾರೆ. ಇದೀಗ ರಸಗೊಬ್ಬರ, ಬಿತ್ತನೆ ಬೀಜದ ಕೊರತೆ ಕಾಡಲೇಬಾರದು. ರಸಗೊಬ್ಬರ, ಬೀಜ ಕೃತಕ ಅಭಾವ ಸೃಷ್ಟಿಸುತ್ತಿರುವ ದೂರುಗಳಿದ್ದು, ಅಧಿಕಾರಿಗಳು ತಕ್ಷಣ ಕ್ರಮಕ್ಕೆ ಮುಂದಾಗುವಂತೆ ಹಾಗೂ ಇಂತಹ ಮೋಸದ ಆಟಗಳ ಮೇಲೆ ನಿಗಾ ವಹಿಸುವಂತೆ ಡಾ. ಅಜಯ್ ಸಿಂಗ್ ಸಭೆಯಲ್ಲಿ ಕೃಷಿ ಇಲಾಖೆ, ಕಂದಾಯ ಇಲಾಖೆಗೆ ಸೂಚಿಸಿದರು.
ಸೋರುವ ಶಾಲೆಗಳಿದ್ದರೆ ತಕ್ಷಣ ವರದಿ ಮಾಡಿ:ಜೇವರ್ಗಿ ಹಾಗೂ ಯಡ್ರಾಮಿಯಲ್ಲಿ ಸೋರುವ ಶಾಲೆಗಳು, ಕೋಣೆಗಳು ಕಂಡು ಬಂದಲ್ಲಿ ತಕ್ಷಣ ಶಿಕ್ಷಕರು, ಮುಖ್ಯ ಗುರುಗಳು ಅಲ್ಲಿರುವ ಅಧಿಕಾರಿಗಳಿಗೆ ಗಮನಕ್ಕೆ ತರಬೇಕು. ಮಕ್ಕಳ ಸುರಕ್ಷತೆ ಮುಖ್ಯವೇ ಹೊರತು ಎಲ್ಲರೂ ಈ ವಿಚಾರದಲ್ಲಿ ಜವಾಬ್ದಾರಿಯಿಂದ ನಡೆಯುವಂತೆ ಸೂಚಿಸಿದರು.
ಭೀಮಾ ನದಿಗೆ ಪ್ರವಾಹ ಆತಂಕ, 40 ಹಳ್ಳಿ ಮೇಲೆ ನಿಗಾಕ್ಕೆ ಸೂಚನೆ:ಮಹಾರಾಷ್ಟ್ರದ ಉಜನಿ ಜಲಾಶಯದಿಂದ ಮತ್ತೆ 70 ಸಾವಿರ ಕ್ಯೂಸೆಕ್ ನೀರು ಹರಿಬಿಟ್ಟಿದ್ದಾರೆ. ಇದರಿಂದಾಗಿ ಜೇವರ್ಗಿ ತಾಲೂಕಿನಲ್ಲಿ ನದಿ ದಡದಲ್ಲಿ ಬರುವ 40 ಗ್ರಾಮಗಳಲ್ಲಿ ಸಮಸ್ಯೆ ಕಾಡುವ ಆತಂಕವಿದೆ. ತಹಸೀಲ್ದಾರರು ಹಾಗೂ ಕಂದಾಯ ಇಲಾಖೆ, ಕೃಷಿ ಇಲಾಖೆ, ಪಶು ಸಂಗೋಪನೆ ಇಲಾಖೆಯವರೆಲ್ಲರೂ ಸೇರಿಕೊಂಡು ತಂಡ ರಚಿಸಿ ನೆರೆ ಆತಂಕದ ಮೇಲೆ ನಿಗಾ ಇಡಬೇಕು. ಜನರು, ಜಾನುವಾರು ರಕ್ಷಣೆಗೆ ಮುಂದಾಗಬೇಕು ಎಂದು ಶಾಸಕರು ಸೂಚಿಸಿದರು.
ಸೀಸಿ ರಸ್ತೆ ಕಾಮಗಾರಿಗೆ ಮರಳು ವ್ಯವಸ್ಥೆ:ತಾಲೂಕಿನ ಹಳ್ಳಿಗಾಡಲ್ಲಿ ಕೈಗೊಳ್ಳುವ ಸಿಸಿ ರಸ್ತೆ ಕಾಮಗಾರಿಗೆ ಅಗತ್ಯ ಮರಳು ದೊರಕಿಸುವ ಬಗ್ಗೆ ಪೊಲೀಸ್, ತಹಸೀಲ್ದಾರ್ ಸಭೆ ನಡೆಸಲಾಗಿದ್ದು, ಕಾಮಗಾರಿಗೆ ಮರಳು ಪೂರೈಸುವ ಸೂಚನೆ ನೀಡಲಾಗಿದೆ. ಮುಂಬರುವ 1 ತಿಂಗಳಲ್ಲಿ 61 ರಸ್ತೆ ಕಾಮಗಾರಿಗಳನ್ನು ಮಾಡಿ ಮುಗಿಸಬೇಕು ಎಂದು ಅಧಿಕಾರಗಳಿಗೆ ತಾಕೀತು ಮಾಡಿದರು.
ಜೇವರ್ಗಿ ತಹಸೀಲ್ದಾರ್ ಮಲ್ಲಣ್ಣ ಯಲಗೋಡ್ , ಯಡ್ರಾಮಿ ತಹಸೀಲ್ದಾರ್, ಪುರಸಭೆ ಮುಖ್ಯಾಧಿಕಾರಿಗಳು ಸೇರಿದಂತೆ ಎಲ್ಲಾ ಇಲಾಖೆಯ ತಾಲೂಕು ಅಧಿಕಾರಿಗಳು ಸಭೆಯಲ್ಲಿದ್ದರು.