ಬಾಲ ಕಾರ್ಮಿಕ ಮಕ್ಕಳು ಕಂಡು ಬಂದಲ್ಲಿ ಅಂತಹ ಮಕ್ಕಳಿಗೆ ಶಿಕ್ಷಣ ಕೊಡಿಸಲು ಮುಂದಾಗಬೇಕು, ಇದರ ಜತೆಗೆ ಕೆಲಸ ಮಾಡಿಸಿಕೊಳ್ಳುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು

ಕುಷ್ಟಗಿ: ಬಾಲ ಕಾರ್ಮಿಕರನ್ನು ಪತ್ತೆ ಮಾಡಿ ಕೆಲಸ ಮಾಡಿಸಿಕೊಳ್ಳುವಂತಹ ಮಾಲಿಕರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ತಹಸೀಲ್ದಾರ್‌ ಅಶೋಕ ಶಿಗ್ಗಾಂವಿ ಹೇಳಿದರು.

ಪಟ್ಟಣದ ತಹಸೀಲ್ದಾರ ಕಾರ್ಯಾಲಯದಲ್ಲಿ ನಡೆದ ಬಾಲಕಾರ್ಮಿಕ, ಕಿಶೋರ ಕಾರ್ಮಿಕ ತಾಲೂಕು ಮಟ್ಟದ ಟಾಸ್ಕ್ ಫೋರ್ಸ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತಾಲೂಕಿನಾದ್ಯಂತ ಇರುವ ಅಂಗಡಿ, ಕೋಳಿ ಫಾರಂ, ಡಾಬಾ, ಹೋಟೆಲ್, ಗ್ಯಾರೇಜ್, ಇಟ್ಟಿಗೆ ಭಟ್ಟಿ, ಸ್ಟೋನ್ ಕ್ರಷರ್ ಮೇಲೆ ಅನಿರೀಕ್ಷಿತ ದಾಳಿ ನಡೆಸಿ ಸೂಕ್ತ ಕ್ರಮಕ್ಕೆ ಮುಂದಾಗುವ ಮೂಲಕ ಬಾಲ ಕಾರ್ಮಿಕ ಪದ್ಧತಿಯನ್ನು ಕಿತ್ತಿಹಾಕಬೇಕು. ಮೂರು ತಿಂಗಳಿಗೊಮ್ಮೆ ನಡೆಸುತ್ತಿದ್ದ ಟಾಸ್ಕ್‌ಫೋರ್ಸ್‌ ಸಭೆಯನ್ನು ಇನ್ನುಮುಂದೆ ಪ್ರತಿ ತಿಂಗಳು ನಡೆಸುವ ಮೂಲಕ ವರದಿ ಒಪ್ಪಿಸಬೇಕು ಎಂದು ತಿಳಿಸಿದರು.

ಬಾಲ ಕಾರ್ಮಿಕ ಮಕ್ಕಳು ಕಂಡು ಬಂದಲ್ಲಿ ಅಂತಹ ಮಕ್ಕಳಿಗೆ ಶಿಕ್ಷಣ ಕೊಡಿಸಲು ಮುಂದಾಗಬೇಕು, ಇದರ ಜತೆಗೆ ಕೆಲಸ ಮಾಡಿಸಿಕೊಳ್ಳುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು, ಬಾಲ ಕಾರ್ಮಿಕ ಪದ್ಧತಿ ಮಟ್ಟ ಹಾಕಲು ಅಧಿಕಾರಿಗಳಾದ ಪಲೀಸ್‌ ಇಲಾಖೆ, ಕಂದಾಯ ಇಲಾಖೆ, ಕಾರ್ಮಿಕ ಇಲಾಖೆ, ಸಿಡಿಪಿಒ ಇಲಾಖೆ, ಗ್ರಾಪಂ ಅಧಿಕಾರಿಗಳು ಕೆಲಸ ಮಾಡಬೇಕು ಎಂದು ಸೂಚಿಸಿದರು.

ಬಾಲ ಕಾರ್ಮಿಕ ಇಲಾಖೆಯ ಯೋಜನಾಧಿಕಾರಿ ಬಸವರಾಜ ಹಿರೇಗೌಡರ ಮಾತನಾಡಿ, ನಾವು ತಾಲೂಕಿನಾದ್ಯಂತ ಬಾಲ ಕಾರ್ಮಿಕ ಪದ್ಧತಿ ಕುರಿತು ಜಾಗೃತಿ ಮೂಡಿಸುವದು ಹೋಟೆಲ್ ಅಂಗಡಿ,ಗ್ಯಾರೇಜು, ಕಟ್ಟಡ ಕಾಮಗಾರಿಗಳು ಸೇರಿದಂತೆ ಅನೇಕ ಕಡೆ ದಾಳಿ ಮಾಡುವ ಮೂಲಕ ಮಕ್ಕಳನ್ನು ರಕ್ಷಣೆ ಮಾಡಿ ಶಿಕ್ಷಣ ಕೊಡುವಂತೆ ಪಾಲಕರಿಗೆ ಪೋಷಕರಿಗೆ ತಿಳಿಸಲಾಗುವದು ಅಥವಾ ನಮ್ಮ ಇಲಾಖೆಯಿಂದ ಶಿಕ್ಷಣವನ್ನು ಕೊಡಿಸಲಾಗುವದು ಇಲಾಖೆಯ ಅಧಿಕಾರಿಗಳ ಸಹಕಾರ ಅಗತ್ಯ ಇದೆ. ಬಾಲಕಾರ್ಮಿಕರನ್ನು ದುಡಿಸಿಕೊಳ್ಳುವುದು ಗಮನಕ್ಕೆ ಬಂದಲ್ಲಿ ಸಹಾಯವಾಣಿ 1098 ಗೆ ಕರೆ ಮಾಡಿ ತಿಳಿಸಿದರೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

ಈ ಸಭೆಯಲ್ಲಿ ಕಾರ್ಮಿಕ ನಿರೀಕ್ಷಕಿ ನಿವೇದಿತಾ, ಶಿವಾನಂದ ಪಂಪಣ್ಣನವರ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಮಲ್ಲಯ್ಯ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಬಸವರಾಜ ನೆಲಗಣಿ, ಶಿಶು ಅಭಿವೃದ್ಧಿ ಇಲಾಖೆಯ ಹಿರಿಯ ಮೇಲ್ವಿಚಾರಕಿ ಭುವನೇಶ್ವರಿ ಸಂಕನಹಟ್ಟಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಇದ್ದರು.