ವಿಶ್ವಕರ್ಮ ಜಯಂತಿ ಅರ್ಥಪೂರ್ಣ, ವಿಜೃಂಭಣೆಯ ಆಚರಣೆಗೆ ಕ್ರಮ ಕೈಗೊಳ್ಳಿ: ಸಾಜಿದ್ ಮುಲ್ಲಾ

| Published : Dec 23 2024, 01:02 AM IST

ಸಾರಾಂಶ

ಡಿ. 29ರಂದು ವಿಶ್ವ ಮಾನವ ದಿನಾಚರಣೆ ಹಾಗೂ ಜ. 1ರಂದು ವಿಶ್ವಕರ್ಮ ಅಮರ ಶಿಲ್ಪಿ ಜಕಣಾಚಾರಿ ಸಂಸ್ಕರಣಾ ದಿನವನ್ನು ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಬೆಳಗ್ಗೆ 10.30ಕ್ಕೆ ಆಚರಿಸಲು ನಿರ್ಧರಿಸಲಾಗಿದೆ.

ಕಾರವಾರ: ವಿಶ್ವ ಮಾನವ ದಿನಾಚರಣೆ ಹಾಗೂ ವಿಶ್ವಕರ್ಮ ಅಮರ ಶಿಲ್ಪಿ ಜಕಣಾಚಾರಿ ಸಂಸ್ಕರಣಾ ದಿನವನ್ನು ವಿಜೃಂಭಣೆಯಿಂದ, ಅರ್ಥಪೂರ್ಣಾವಾಗಿ ಆಚರಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ನಡೆದ ವಿಶ್ವ ಮಾನವ ದಿನಾಚರಣೆ, ಜಕಣಾಚಾರಿ ಸಂಸ್ಕರಣಾ ದಿನಾಚರಣೆ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಈ ವರ್ಷ ಕೂಡ ಡಿ. 29ರಂದು ವಿಶ್ವ ಮಾನವ ದಿನಾಚರಣೆ ಹಾಗೂ ಜ. 1ರಂದು ವಿಶ್ವಕರ್ಮ ಅಮರ ಶಿಲ್ಪಿ ಜಕಣಾಚಾರಿ ಸಂಸ್ಕರಣಾ ದಿನವನ್ನು ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಬೆಳಗ್ಗೆ 10.30ಕ್ಕೆ ಆಚರಿಸಲು ನಿರ್ಧರಿಸಲಾಗಿದೆ. ಈ ಎರಡು ಕಾರ್ಯಕ್ರಮಗಳು ವಿಜೃಂಭಣೆಯಿಂದ ನಡೆಯಲು ಎಲ್ಲ ಅಧಿಕಾರಿಗಳು ಸಕಲ ಸಿದ್ಧತೆ ಮಾಡಿಕೊಂಡು ಅಚ್ಚುಕಟ್ಟಾಗಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಸೂಚನೆ ನೀಡಿದರು.

ವಿಶ್ವದಲ್ಲಿ ಖ್ಯಾತಿ ಪಡೆದ ರಾಷ್ಟ್ರಕವಿ ಕುವೆಂಪು ಹಾಗೂ ಅಮರ ಶಿಲ್ಪಿ ಜಕಣಾಚಾರಿ ಅವರ ಕುರಿತು ಸಾಹಿತಿಗಳಿಂದ ಉಪನ್ಯಾಸ ಆಯೋಜಿಸಬೇಕು. ಜಕಣಾಚಾರಿ ದಿನ ಆಚರಿಸುವ ಮೂಲಕ ಹೊಸ ವರ್ಷವನ್ನು ಪ್ರಾರಂಭಿಸೋಣ ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಮಂಗಲಾ ನಾಯ್ಕ ಕಾರ್ಯಕ್ರಮದ ರೂಪರೇಷಗಳ ಬಗ್ಗೆ ಮಾಹಿತಿ ನೀಡಿದರು. ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಶಿವಾನಂದ ನಾಯಕ, ವಿಶ್ವಕರ್ಮ ಮಹಾ ಒಕ್ಕೂಟದ ಜಿಲ್ಲಾಧ್ಯಕ್ಷ ರಾಘವೇಂದ್ರ ಆಚಾರ್ಯ, ವಿಶ್ವಕರ್ಮ ಸೇವಾ ಸಮಾಜ ಸಂಘದ ಅಧ್ಯಕ್ಷ ಗಣೇಶ ಆಚಾರ್ಯ, ಕಲಾವಿದ ಸುರೇಶ ನಾಯ್ಕ ಮೊದಲಾದವರು ಇದ್ದರು.ಹೂವು ಮಾರುವ ಮಹಿಳೆಯರಿಗೆ ಸನ್ಮಾನ

ಕುಮಟಾ: ಪ್ರತಿನಿತ್ಯ ಹೂವು ಕೊಯ್ದು, ಮಾಲೆ ಕಟ್ಟಿ ಮಾರುತ್ತಾ ಬದುಕು ಕಟ್ಟಿಕೊಂಡಿರುವ ಮಹಿಳೆಯರು ದೇವರು ಹಾಗೂ ಮನುಷ್ಯರ ನಡುವೆ ಕೊಂಡಿಯಾಗಿದ್ದಾರೆ. ಇಂಥ ಶ್ರಮಿಕರನ್ನು ಗುರುತಿಸಿ ಸನ್ಮಾನಿಸುತ್ತಿರುವುದು ಸಂತಸದ ಸಂಗತಿ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ಆಜ್ಞಾ ನಾಯಕ ತಿಳಿಸಿದರು.

ಇಲ್ಲಿನ ಯುವ ಬ್ರಿಗೇಡ್ ವತಿಯಿಂದ ರಾಮಕೃಷ್ಣ ಪರಮಹಂಸರ ಪತ್ನಿ ಶಾರದಾ ದೇವಿ ಅವರ ಜನ್ಮದಿನದ ಪ್ರಯುಕ್ತ ಪಟ್ಟಣದಲ್ಲಿ ಪ್ರತಿನಿತ್ಯ ಹೂಕಟ್ಟಿ ಮಾರುವ ಸುಮಾರು ೩೯ ಮಾತೆಯರಿಗೆ ರಥಬೀದಿಯ ಶಾಂತೇರಿ ಕಾಮಾಕ್ಷಿ ಮಂದಿರದಲ್ಲಿ ಅಮ್ಮನಮನ ಕಾರ್ಯಕ್ರಮದಡಿ ಸನ್ಮಾನಿಸಲಾಯಿತು.ದೇವಾಲಯ ಸಮಿತಿಯ ಉಪಾಧ್ಯಕ್ಷ ಮೂಡ್ಲಗಿರಿ ನಾಯಕ ಹಾಗೂ ಪುರಸಭೆಯ ಸಮುದಾಯ ಸಂಘಟಕಿ ಮೀನಾಕ್ಷಿ ಆಚಾರಿ ಮಾತನಾಡಿದರು. ವಿಜಯಾ ನಾಯಕ ಬರ್ಗಿ ಎಲ್ಲ ಹೂವು ಕಟ್ಟುವ ಮಾತೆಯರಿಗೆ ಸೀರೆ ನೀಡಿದರು.ಯುವ ಬ್ರಿಗೇಡ್ ತಾಲೂಕು ಸಂಚಾಲಕ ಸಚಿನ ಭಂಡಾರಿ ಸ್ವಾಗತಿಸಿದರು. ಅಣ್ಣಪ್ಪ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಗೌರೀಶ ನಾಯ್ಕ ನಿರೂಪಿಸಿದರು. ಸದಸ್ಯರಾದ ರವೀಶ ನಾಯ್ಕ, ಚಿದಂಬರ ಅಂಬಿಗ, ಪ್ರಕಾಶ ನಾಯ್ಕ, ಲಕ್ಷ್ಮೀಕಾಂತ ಮುಕ್ರಿ, ಸಂದೀಪ ಮಡಿವಾಳ ಹಾಗೂ ಸೋದರಿ ನಿವೇದಿತಾ ಪ್ರತಿಷ್ಠಾನದ ಜ್ಯೋತಿನಾಯ್ಕ, ಗಾಯತ್ರಿ ಮಡಿವಾಳ ಇತರರು ಇದ್ದರು.