ಸಾರಾಂಶ
ಉಪ ವಿಭಾಗೀಯ ಮಟ್ಟದ ಪರಿಶಿಷ್ಟ ಜಾತಿ, ಪಂಗಡಗಳ ದೌರ್ಜನ್ಯ ನಿಯಂತ್ರಣ ಜಾಗೃತಿ ಉಸ್ತುವಾರಿ ಸಮಿತಿ ಸಭೆ
ಕನ್ನಡಪ್ರಭ ವಾರ್ತೆ, ತರೀಕೆರೆದಲಿತರ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ, ಶೀಘ್ರ ಇತ್ಯರ್ಥಕ್ಕೆ ಅಧಿಕಾರಿಗಳು ಮುಂದಾಗಬೇಕು ಎಂದು ಉಪವಿಭಾಗಾಧಿಕಾರಿ ಡಾ.ಕೆ.ಜೆ.ಕಾಂತರಾಜ್ ತಿಳಿಸಿದರು.
ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ನಡೆದ ಉಪ ವಿಭಾಗೀಯ ಮಟ್ಟದ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ದೌರ್ಜನ್ಯ ನಿಯಂತ್ರಣ ಜಾಗೃತಿ ಉಸ್ತುವಾರಿ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ದಲಿತರ ಸಮಸ್ಯೆಗಳಿಗೆ ಸಂಬಂಧಿಸಿದ ವಿಷಯಗಳು ಸಭಾ ನಡಾವಳಿ ಯಲ್ಲಿ ಹಲವು ಬಾರಿ ಮರುಕಳಿಸುತ್ತಿವೆ. ಇದು ಸರಿಯಲ್ಲ. ಬಗೆಹರಿಯುವ ಸಮಸ್ಯೆಗಳ ಬಗ್ಗೆ ನಿರ್ಲಕ್ಷ್ಯ ಮಾಡದೆ, ಶೀಘ್ರ ಬಗೆಹರಿಸಲು ಅಧಿಕಾರಿ ಗಳು ಕ್ರಮವಹಿಸಬೇಕು ಎಂದು ತಿಳಿಸಿದರು.ನಿವೇಶನ ರಹಿತರು ಮತ್ತು ವಸತಿ ರಹಿತ ದಲಿತ ಕುಟುಂಬಗಳ ಪೈಕಿ ಅರ್ಹ ಫಲಾನುಭವಿಗಳಿಗೆ ಅನ್ಯಾಯವಾಗದಂತೆ ಮುನ್ನೆಚ್ಚರಿಕೆ ವಹಿಸ ಬೇಕು, ತಕರಾರು ಅರ್ಜಿಗಳು ಬಂದರೆ ಪರಿಶೀಲಿಸಿ ಕ್ರಮವಹಿಸಬೇಕು. ಸೌಲಭ್ಯ ಒದಗಿಸಬೇಕು. ಪರಿಶಿಷ್ಟ ಜಾತಿ ಮತ್ತು ಪಂಗಡದವರು ಈಗಾಗಲೇ ಶವಸಂಸ್ಕಾರ ಮಾಡಿಕೊಂಡು ಬರುತ್ತಿರುವ ಜಾಗಗಳನ್ನು ಗುರುತಿಸಿ ಕಾನೂನು ರೀತಿ ಸದರಿ ಜಾಗವನ್ನು ಸ್ಮಶಾನಕ್ಕೆ ಅಧಿಕೃತ ಮಾಡಿಕೊಡಬೇಕು. ಒತ್ತುವರಿಯಾದ ಗ್ರಾಮ ಠಾಣಾ ಜಾಗಗಳನ್ನು ತೆರವುಗೊಳಿಸಲು ಕ್ರಮಕೈಗೊಳ್ಳಬೇಕು ಎಂದು ಹೇಳಿದರು.ಎನ್.ಆರ್.ಪುರ ತಾಲೂಕಿನ ಕಡಗಿನಬೈಲು ಗ್ರಾಪಂ ವ್ಯಾಪ್ತಿಯ ಶಿಟ್ಟಿಕೊಪ್ಪ, ಸೂಸಲವಾನಿ, ಮಾಕೋಡು ಗ್ರಾಮದಲ್ಲಿ ಸುಮಾರು 100 ಕುಟುಂಬಗಳಿಗೆ ನೀಡಲಾದ ಪುಲಿಯನ್ ಎಂಬ ಜಾತಿ ಪತ್ರವನ್ನು 2013 ರಲ್ಲಿ ವಜಾಗೊಳಿಸಲಾಗಿದೆ. ಪರಿಶಿಷ್ಟ ಜಾತಿಗೆ ಸೇರಿರುವ ಇವರಿಗೆ ಆದಿ ಕರ್ನಾಟಕ ಜಾತಿ ಪ್ರಮಾಣ ಪತ್ರ ನೀಡಬೇಕು ಎಂದು ಸಭೆ ಗಮನಕ್ಕೆ ತಂದಾಗ, ಉತ್ತರಿಸಿದ ಉಪವಿಭಾಗಾಧಿಕಾರಿ ಡಾ.ಕೆ.ಜಿ.ಕಾಂತರಾಜ್ ಈ ಕುರಿತು ಸ್ಥಳ ತನಿಖೆ ನಡೆಸಿ, ಸಂಪೂರ್ಣ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕಿದೆ. ಸರ್ಕಾರದ ಸ್ಪಷ್ಟ ನಿರ್ದೇಶನದ ನಂತರ ಕ್ರಮವಹಿಸಲು ತಹಸೀಲ್ದಾರ್ ಮುಂದಾಗುತ್ತಾರೆ ಎಂದು ತಿಳಿಸಿದರು.ಮುಖಂಡ ಡಿ.ಎನ್.ಸುನಿಲ್ ಮಾತನಾಡಿ, ದೋರನಾಳು ಗ್ರಾಮದ ಡಾ.ಬಿ.ಆರ್.ಅಂಬೇಡ್ಕರ್ ಕಾಲೋನಿ ಮಧ್ಯೆ ಭಾಗದಲ್ಲಿ ಗ್ರಾಮದ ಜಾನುವಾರು ಗಳನ್ನು ಬೆಳಗಿನ ಸಮಯದಲ್ಲಿ ನಿಲ್ಲಿಸುವುದರಿಂದ ಸಮಸ್ಯೆಯಾಗುತ್ತಿದೆ. ಬದಲಿ ಜಾಗ ನೀಡಬೇಕು ಎಂದು ಸಭೆ ಗಮನಕ್ಕೆ ತಂದರು.ಮುಖಂಡರಾದ ಎನ್.ವೆಂಕಟೇಶ್, ಕೆ.ನಾಗರಾಜ್, ಜಿ.ಟಿ.ರಮೇಶ್, ಎಸ್.ಕೆ.ಸ್ವಾಮಿ, ಓಂಕಾರಪ್ಪ ಹಾಗೂ ಇತರರು ಮಾತನಾಡಿದರು. ಈ ಸಂದರ್ಭದಲ್ಲಿ ತಹಸೀಲ್ದಾರ್ ವಿಶ್ವಜೀತ ಮೇಹತಾ, ಅಜ್ಜಂಪುರ ತಹಸೀಲ್ದಾರ್ ಶಿವಶರಣಪ್ಪ ಕಟ್ಟೋಳಿ, ಎನ್.ಆರ್.ಪುರ ತಹಸೀಲ್ದಾರ್ ತನುಜ, ಡಿವೈಎಸ್‌ಪಿ ಹಾಲಮೂರ್ತಿರಾವ್, ಪೊಲೀಸ್ ನಿರೀಕ್ಷಕ ರಾಮಚಂದ್ರ ನಾಯಕ್, ಮುಖ್ಯಾಧಿಕಾರಿ ಎಚ್.ಪ್ರಶಾಂತ್, ಉಪ ವಿಭಾಗೀಯ ಮಟ್ಟದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ನಿಯಂತ್ರಣ ಜಾಗೃತಿ ಉಸ್ತುವಾರಿ ಸಮಿತಿ ಸದಸ್ಯ ಎಸ್.ಎನ್.ಸಿದ್ರಾಮಪ್ಪ, ಗುಳ್ಳದಮನೆ ನಾಗರಾಜ್, ರಾಮು ಹಾಗೂ ಮತ್ತಿತರರು ಭಾಗವಹಿಸಿದ್ದರು. 3ಕೆಟಿಆರ್.ಕೆ.10ಃ ತ
ತರೀಕೆರೆಯಲ್ಲಿ ಉಪ ವಿಭಾಗಾಧಿಕಾರಿ ಡಾ.ಕೆ.ಜೆ.ಕಾಂತರಾಜ್ ಅಧ್ಯಕ್ಷತೆಯಲ್ಲಿ ಉಪ ವಿಭಾಗೀಯ ಮಟ್ಟದ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ದೌರ್ಜನ್ಯ ನಿಯಂತ್ರಣ ಜಾಗೃತಿ ಉಸ್ತುವಾರಿ ಸಮಿತಿ ಸಭೆ ನಡೆಯಿತು.