ಸಾರಾಂಶ
- ಹರಿಹರ ಕಸಾಪ ನೇತೃತ್ವದಲ್ಲಿ ನಗರಸಭೆಗೆ ಪ್ರೊ.ಸಿ.ವಿ. ಪಾಟೀಲ್ ಮನವಿ- - - ಕನ್ನಡಪ್ರಭ ವಾರ್ತೆ ಹರಿಹರ ಪ್ರತಿವರ್ಷ ನಗರಸಭೆಯಿಂದ ಅದ್ಧೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಣೆ, ನಗರದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ನಿವೇಶನ ಸೌಲಭ್ಯ ಕಲ್ಪಿಸಲು ಆಗ್ರಹಿಸಿ, ನಗರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಿಗೆ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕ ಹಾಗೂ ವಿವಿಧ ಕನ್ನಡಪರ ಸಂಘಟನೆಗಳ ಮುಖಂಡರು ಸೋಮವಾರ ಮನವಿ ಸಲ್ಲಿಸಿದರು.
ಹರಿಹರದಲ್ಲಿ ನಡೆದ ಜಿಲ್ಲಾ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷರಾಗಿದ್ದ ಸಾಹಿತಿ, ಪ್ರೊ.ಸಿ.ವಿ. ಪಾಟೀಲ್ ಮಾತನಾಡಿ, ಹಲವು ವರ್ಷಗಳ ಹಿಂದೆ ನಗರಸಭೆಯಿಂದ ವಿಜೃಂಭಣೆಯಿಂದ ನಗರದ ಗಾಂಧಿ ಮೈದಾನದಲ್ಲಿ ರಾಜ್ಯೋತ್ಸವ ಮಾಡಲಾಗುತ್ತಿತ್ತು. ಸಾಧಕರನ್ನು ಗೌರವಿಸುವ ಜೊತೆಗೆ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿತ್ತು. ಈಗ ಈ ಪರಂಪರೆ ನಿಲ್ಲಿಸಲಾಗಿದೆ ಎಂದರು.ಕನ್ನಡ ಕಾರ್ಯಕ್ರಮಗಳಿಗೆ ಭವ್ಯವಾದ ಕನ್ನಡ ಭವನ ನಿರ್ಮಾಣಕ್ಕೆ ಹಲವು ಬಾರಿ ಒತ್ತಾಯಿಸಲಾಗಿದೆ. ಅದಕ್ಕಾಗಿ ಸೂಕ್ತ ನಿವೇಶನಕ್ಕೆ ಹಲವು ಹತ್ತು ಬಾರಿ ಮನವಿ ಮಾಡಲಾಗಿದೆ. ಆದರೆ, ಇದುವರೆಗೆ ನಗರಸಭೆ ನಿವೇಶನ ನೀಡಿಲ್ಲ ಎಂದರು.
ಮನವಿ ಸ್ವೀಕರಿಸಿದ ನಗರಸಭೆ ಅಧ್ಯಕ್ಷೆ ಕವಿತಾ ಮಾರುತಿ ಬೇಡರ್ ಮಾತನಾಡಿ, ಮನವಿಯಲ್ಲಿನ ವಿಷಯಗಳ ಕುರಿತು ನಗರಸಭೆ ಸಾಮಾನ್ಯ ಸಭೆಯಲ್ಲಿ ಸಮಗ್ರವಾಗಿ ಚರ್ಚಿಸಿ ನಿರ್ಣಯ ಕೈಗೊಳ್ಳುತ್ತೇವೆ. ಕನ್ನಡ ಭವನ ನಿರ್ಮಾಣ, ಪ್ರತಿವರ್ಷ ನಗರಸಭೆಯಿಂದ ಅದ್ಧೂರಿ ಕನ್ನಡ ರಾಜ್ಯೋತ್ಸವ ಆಚರಣೆ ಸ್ವಾಗತಾರ್ಹ ವಿಷಯ. ಇದಕ್ಕೆ ನನ್ನ ಸಹಕಾರ ಇದೆ ಎಂದು ಹೇಳಿದರು.ಉಪಾಧ್ಯಕ್ಷ ಜಂಬಣ್ಣ ಮಾತನಾಡಿ, ನಗರದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಸೂಕ್ತ ಸ್ಥಳವನ್ನು ಗುರುತಿಸಲು ಇಂದಿನಿಂದಲೇ ನಗರಸಭೆ ಮುಂದಾಗಲಿದೆ. ಅದಕ್ಕೆ ಕಾಲವಕಾಶ ಬೇಕಾಗುತ್ತದೆ. ಮುಂದಿನ ವರ್ಷದಿಂದ ನಗರಸಭೆಯಿಂದ ಅದ್ಧೂರಿಯಾಗಿ ರಾಜ್ಯೋತ್ಸವ ಭರವಸೆ ನೀಡಿದರು.
ಮುಖಂಡ ಎಚ್.ಕೆ. ಕೊಟ್ರಪ್ಪ, ಕಸಾಪ ತಾಲೂಕು ಅಧ್ಯಕ್ಷ ಡಿ.ಎಂ. ಮಂಜುನಾಥಯ್ಯ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ವಿಜಯ ಮಹಾಂತೇಶ್, ಉಪಾಧ್ಯಕ್ಷ ಉಮ್ಮಣ್ಣ, ಮಾಜಿ ಅಧ್ಯಕ್ಷ ಎ.ಕೆ. ಭೂಮೇಶ್, ರೇವಣ್ಣ ನಾಯ್ಕ್, ಪತ್ರಕರ್ತರಾದ ಶೇಖರಗೌಡ, ಸಂತೋಷ ಗುಡಿಮನಿ ಸಂಘಟನೆಗಳ ಪದಾಧಿಕಾರಿಗಳಿದ್ದರು.- - - -2ಎಚ್.ಆರ್.ಆರ್1.ಜೆಪಿಜಿ:
ಕಸಾಪ ಹರಿಹರ ಘಟಕ ಹಾಗೂ ವಿವಿಧ ಕನ್ನಡಪರ ಸಂಘಟನೆಗಳ ಮುಖಂಡರು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರಿಗೆ ಮನವಿ ಸಲ್ಲಿಸಿದರು.