ಸಾರಾಂಶ
ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸೂಚನೆ । ಡೀಸಿ ಕಚೇರಿಯಲ್ಲಿ ನೋಡಲ್ ಅಧಿಕಾರಿಗಳ ಸಭೆ
ಕನ್ನಡಪ್ರಭ ವಾರ್ತೆ ಚಿತ್ರದುರ್ಗಕುಡಿಯುವ ನೀರು ಹಾಗೂ ಮೇವಿನ ಸಮಸ್ಯೆಗಳ ಬಗ್ಗೆ ದೈನಂದಿನ ವರದಿ ಆಧರಿಸಿ ಅಧಿಕಾರಿಗಳು ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸೂಚನೆ ನೀಡಿದರು.ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ಪಶು, ಕೃಷಿ ಇಲಾಖೆ ಹಾಗೂ ಕುಡಿಯುವ ನೀರಿನ ನಿರ್ವಹಣೆಗೆ ನೇಮಿಸಿರುವ ತಾಲೂಕು ನೋಡಲ್ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದರು. ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿರುವ ಹಳ್ಳಿಗಳಲ್ಲಿ ಸಾರ್ವಜನಿಕರು ಮತದಾನ ಬಹಿಷ್ಕರಿಸುವ ವಿಚಾರ ಮುಂದುಮಾಡಿ, ಪ್ರತಿಭಟನೆ ನಡೆಸುತ್ತಿರುವ ಘಟನೆಗಳು ಪತ್ರಿಕೆಗಳಲ್ಲಿ ವರದಿಯಾಗಿವೆ. ಅಧಿಕಾರಿಗಳು ತಕ್ಷಣವೇ ಸಮಸ್ಯೆಗೆ ಸ್ಪಂದಿಸಿ, ಸಾರ್ವಜನಿಕರಿಗೆ ತಿಳಿ ಹೇಳಬೇಕು. ಅಗತ್ಯ ಇರುವ ಕಡೆ ಬೋರೆವೆಲ್ ಕೊರೆಸಿ ನೀರು ಸರಬರಾಜು ಕ್ರಮಕೈಗೊಳ್ಳಿ ಎಂದರು.
ವಾಣಿಜ್ಯ ಬಳಕೆಗಾಗಿ ಖಾಸಗಿ ಬೋರ್ವೆಲ್ ನೀರು ಸರಬರಾಜು ಮಾಡುವುದನ್ನು ನಿಷೇಧಿಸಿ ಆದೇಶ ಹೊರಡಿಸಲಾಗುವುದು. ಸರ್ಕಾರ ನಿಗದಿ ಮಾಡಿದ ದರದಲ್ಲಿ ಖಾಸಗಿ ಬೋರ್‌ವೆಲ್‌ಗಳಿಂದಲೂ ನೀರು ಪಡೆದು ಸಾರ್ವಜನಿಕರಿಗೆ ವಿತರಣೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ನಿರ್ದೇಶನ ನೀಡಿದರು.ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ 21,000 ಮೇವಿನ ಕಿಟ್ ವಿತರಿಸಲಾಗಿದೆ. ಎರಡನೇ ಹಂತದಲ್ಲಿ 15,300 ಮೇವಿನ ಕಿಟ್‌ಗಳು ಬಂದಿದ್ದು, ಶೀಘ್ರವೇ ವಿತರಣೆ ಮಾಡಲು ಕ್ರಮಕೈಗೊಳ್ಳುವುದಾಗಿ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಉಪನಿರ್ದೇಶಕಿ ಇಂದಿರಾಬಾಯಿ ಸಭೆಯಲ್ಲಿ ತಿಳಿಸಿದರು. ಜಿಪಂ ಸಿಇಒ ಎಸ್.ಜೆ.ಸೋಮಶೇಖರ್, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಉಪವಿಭಾಗಾಧಿಕಾರಿ ಎಂ.ಕಾರ್ತಿಕ್, ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ್, ಡಿಡಿಎಲ್ಆರ್ ರಾಮಾಂಜನೇಯ, ರೇಷ್ಮೆ ಇಲಾಖೆ ಉಪನಿರ್ದೇಶಕ ಎಂ.ಬಿ.ಬೀರಲದಿನ್ನಿ, ಗ್ರಾಮೀಣ ಕುಡಿಯುವ ನೀರು ಕಾರ್ಯಪಾಲಕ ಇಂಜಿನಿಯರ್ ಬಸವನಗೌಡ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.
1,33,318 ಮೆಟ್ರಿಕ್ ಟನ್ ಮೇವು ಲಭ್ಯ:ಜಿಲ್ಲೆಯಲ್ಲಿ 1,33,318 ಮೆಟ್ರಿಕ್ ಟನ್ ಮೇವು ಲಭ್ಯವಿದೆ. ಪ್ರತಿದಿನ 2033 ಟನ್ ಮೇವಿನ ಅವಶ್ಯಕತೆ ಇದೆ. ಜಿಲ್ಲೆಯಲ್ಲಿ 3,38,907 ಜಾನುವಾರು ಇದ್ದು, 65 ದಿನಗಳ ಕಾಲ ಮೇವಿಗೆ ಯಾವುದೇ ಸಮಸ್ಯೆ ಇಲ್ಲ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ ಸಭೆಯಲ್ಲಿ ಮಾಹಿತಿ ನೀಡಿದರು. ದನಕರುಗಳ ಸಂಖ್ಯೆಗೆ ಬೇಕಾದ ಮೇವಿನ ಬಗ್ಗೆ ನಿಖರ ಅಂಕಿ ಅಂಶಗಳನ್ನು ಪಶು ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ತಯಾರಿಸಬೇಕು. ಗೋಶಾಲೆಗಳಲ್ಲಿ ಪ್ರತಿದಿನ ಖರ್ಚಾಗುವ ಮೇವಿನ ಬಗ್ಗೆ ವರದಿ ನೀಡಬೇಕು. ಜಿಲ್ಲೆಯಲ್ಲಿ ವಿತರಿಸಲಾಗಿರುವ ಮೇವಿನ ಕಿಟ್, ಅವುಗಳಿಂದ ಉತ್ಪಾದನೆಯಾದ ಮೇವಿನ ಪ್ರಮಾಣ ಹಾಗೂ ಬಳಕೆ ಬಗ್ಗೆ ನಿಖರ ಮಾಹಿತಿ ಹೊಂದಿರಬೇಕು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಹೇಳಿದರು.