ಸಾರಾಂಶ
ಕನ್ನಡಪ್ರಭ ವಾರ್ತೆ ಹನೂರು
ಹುಬ್ಬೆ ಹುಣಸೆ ರಾಮನಗುಡ್ಡ, ವಿವಿಧ ಜಲಾಶಯಗಳಿಗೆ ನೀರು ತುಂಬಿಸುವ ಯೋಜನೆ ಹಾಗೂ ವಿದ್ಯುತ್ ವಿವಿಧ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಹಸಿರು ಸೇನೆ ಜಿಲ್ಲಾಧ್ಯಕ್ಷ ಹೊನ್ನೂರ್ ಪ್ರಕಾಶ್ ತಿಳಿಸಿದರು.ತಾಲೂಕಿನ ರಾಮನಗುಡ್ಡ ಹುಲೆಪುರ ವಿವಿಧ ಗ್ರಾಮಗಳಲ್ಲಿ ನೂತನ ಘಟಕ ಉದ್ಘಾಟನೆ ಮಾಡಿ, ಸದಸ್ಯರಿಗೆ ಸನ್ಮಾನಿಸಿ ಮಾತನಾಡಿದ ಅವರು, ಈ ಭಾಗದಲ್ಲಿರುವ ರಾಮನಗುಡ್ಡ ಹಾಗೂ ಉದ್ದೂರು ಬಳಿ ಬರುವ ಹುಬ್ಬೆ ಉಣಸೆ ಜಲಸಾಯಕ್ಕೆ ನದಿಯಿಂದ ನೀರು ಹರಿಸುವ ಕಾರ್ಯಕ್ರಮವನ್ನು ಸರ್ಕಾರ ಹಾಗೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಸಕಾಲದಲ್ಲಿ ಹರಿಸಿ ಈ ಭಾಗದ ರೈತರ ನೀರಾವರಿ ಯೋಜನೆಯನ್ನು ಸದ್ಬಳಕೆ ಮಾಡಿಕೊಳ್ಳಲು ಕ್ರಮ ಕೈಗೊಳ್ಳಬೇಕು ಎಂದರು.ವಿಪರೀತ ನೊಣಗಳಿಂದ ರೈತರಿಗೆ ತೊಂದರೆ ಆಗಿದೆ. ಸಂಬಂಧಪಟ್ಟ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಸಂಬಂಧಪಟ್ಟ ಕಚೇರಿ ಮುಂಭಾಗ ಸಂಘಟನೆಯಿಂದ ಉಗ್ರವಾದ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ. ಚೆಸ್ಕಾಂ ಅಧಿಕಾರಿಗಳು ಸಹ ರೈತರಿಗೆ ನೀಡುತ್ತಿರುವ ವಿದ್ಯುತ್ ಕಣ್ಣ ಮುಚ್ಚಾಲೆ ಆಟದೊಂದಿಗೆ ರೈತರಿಗೆ ಸಂಕಷ್ಟಕ್ಕೀಡಾಗಿರುವಂತೆ ಮಾಡಿದ್ದಾರೆ. ಹೀಗಾಗಿ ಇಲ್ಲಿನ ಅಧಿಕಾರಿಗಳು ರೈತರಿಗೆ ನಿಗದಿತ ಸಮಯದಲ್ಲಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸರ್ವರಾಜು ಮಾಡಬೇಕು ಜೊತೆಗೆ ಪರಿಕರಗಳು ಹಾಳಾದರೆ ಸಕಾಲದಲ್ಲಿ ದುರಸ್ತಿ ಪಡಿಸಿ ರೈತರಿಗೆ ಅನುಕೂಲ ಮಾಡಿ ಕೊಡುವ ಮೂಲಕ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.
ಸೆ.26ರಂದು ಪಟ್ಟಣದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ವತಿಯಿಂದ ಉಗ್ರ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ. ಹೀಗಾಗಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ರೈತರಿಗೆ ಅನುಕೂಲ ಕಲ್ಪಿಸಬೇಕು ಇಲ್ಲದಿದ್ದರೆ ಅನಿರ್ದಿಷ್ಟ ಅವಧಿ ಸಂಬಂಧಪಟ್ಟ ಕಚೇರಿ ಮುಂಭಾಗ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ. ಅರಣ್ಯ ಪ್ರದೇಶದಿಂದ ಹೆಚ್ಚಾಗಿ ಕೂಡಿರುವ ಈ ಭಾಗದಲ್ಲಿ ರೈತರು ದಿನನಿತ್ಯ ಕಾಡು ಪ್ರಾಣಿಗಳ ಹಾವಳಿಯಿಂದ ಬೇಸತ್ತಿದ್ದಾರೆ. ಚಿರತೆ ಆನೆ ಹಾಗೂ ಕಾಡುಪ್ರಾಣಿಗಳಾದ ಹಂದಿ ಜಮೀನುಗಳಿಗೆ ನುಗ್ಗಿ ರಾತ್ರಿ ವೇಳೆ ಫಸಲನ್ನು ತಿಂದು ನಾಶಗೊಳಿಸಿ, ರೈತರನ್ನು ಸಂಕಷ್ಟಕ್ಕೀಡು ಮಾಡಿದೆ. ಸಂಬಂಧಪಟ್ಟ ಅರಣ್ಯ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವಲ್ಲಿ ವಿಫಲರಾಗಿದ್ದಾರೆ ಎಂದರು.ಮೂಲಭೂತ ಸೌಲಭ್ಯಗಳ ಬೇಡಿಕೆಯ ಜೊತೆ ವಿವಿಧ ಇಲಾಖೆ ಅಧಿಕಾರಿಗಳು ಸೆ.26ರಂದು ಪ್ರತಿಭಟನಾ ಸ್ಥಳಕ್ಕೆ ತೆರಳಿ ರೈತರ ಹಾಗೂ ಸಾರ್ವಜನಿಕರ ಮೂಲಭೂತ ಸೌಲಭ್ಯಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ.
ಈ ವೇಳೆಯಲ್ಲಿ ಹನೂರು ತಾಲೂಕು ಘಟಕ ಅಧ್ಯಕ್ಷ ರಾಜು, ನಿಕಟಪೂರ್ವ ಅಧ್ಯಕ್ಷ ಚಂಗಡಿ ಕರಿಯಪ್ಪ ಹಾಗೂ ರೈತ ಮುಖಂಡರಾದ ಚೆನ್ನೂರು ಶಾಂತಕುಮಾರ್, ಕಾರ್ಯದರ್ಶಿ ಮಾದಪ್ಪ, ಯುವ ಮುಖಂಡರ ದೊರೆ, ವಿನೇಶ್, ನಂದೀಶ್, ನಂಜೇಗೌಡ, ರಾಜೇಶ್ ಇನ್ನಿತರ ರೈತ ಮುಖಂಡರು ಉಪಸ್ಥಿತರಿದ್ದರು.