ಸಾರಾಂಶ
- ವಿಧಾನಸಭೆ ಅಧಿವೇಶನದಲ್ಲಿ ಸರ್ಕಾರಕ್ಕೆ ಹರಿಹರ ಶಾಸಕ ಬಿ.ಪಿ.ಹರೀಶ್ ಒತ್ತಾಯ- - - ಕನ್ನಡಪ್ರಭ ವಾರ್ತೆ, ಹರಿಹರ
ಹರಿಹರದಲ್ಲಿ ಹಿಂದೂ ರುದ್ರಭೂಮಿಗೆ ೧೦ ಎಕರೆ ಜಮೀನು ನೀಡಲು ರೈತರ ಮನವೊಲಿಸಿದ್ದು, ಸರ್ಕಾರ ಆದಷ್ಟು ಬೇಗನೇ ಅಗತ್ಯ ಅನುದಾನ ನೀಡಬೇಕು ಎಂದು ಶಾಸಕ ಬಿ.ಪಿ.ಹರೀಶ್ ಸೋಮವಾರ ವಿಧಾನಸಭೆ ಅಧಿವೇಶನದಲ್ಲಿ ಆಗ್ರಹಿಸಿದರು.ಹರಿಹರದ ಹಿಂದೂ ರುದ್ರಭೂಮಿ ತುಂಗಭದ್ರಾ ನದಿ ದಡದಲ್ಲಿದ್ದು, ಮಳೆಗಾಲದಲ್ಲಿ ಶೇ.೫೦, ೬೦ರಷ್ಟು ಮುಳುಗಡೆಯಾಗುತ್ತದೆ. ಅಲ್ಲದೇ, ನಗರದಲ್ಲಿ ಒಂದೂವರೆ ಲಕ್ಷದಷ್ಟು ಜನಸಂಖ್ಯೆಯಿದೆ. ಈಗಿರುವ ರುದ್ರಭೂಮಿ ಸಾಕಾಗುತ್ತಿಲ್ಲ. ಈಗಾಗಲೇ ಸಾರ್ವಜನಿಕರು ಈಗಿರುವ ರುದ್ರಭೂಮಿ ಪಕ್ಕದಲ್ಲೇ ಇರುವ ಜಮೀನುಗಳ ರೈತರ ಮನವೊಲಿಸಿದ್ದಾರೆ. ವಿಳಂಬವಾದರೆ ಆ ಜಮೀನು ರಿಯಲ್ ಎಸ್ಟೇಟ್‌ನವರ ಒತ್ತಡದಿಂದ ಕೈ ತಪ್ಪಲಿದೆ. ಆದ್ದರಿಂದ ಸಚಿವರು ಶೀಘ್ರ ಭೂ ಸ್ವಾಧೀನ ಕ್ರಮ ಕೈಗೊಳ್ಳಬೇಕೆಂದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಕೃಷ್ಣಭೈರೇಗೌಡ, ಹರಿಹರದ ಹಾಲಿ ಸ್ಮಶಾನ ೧೦,೦೯ ಎಕರೆ ಇದೆ. ಅದು ಸಾಲದು. ಹೆಚ್ಚುವರಿ ಜಾಗ ಬೇಕೆಂದು ಕೇಳಿರುವುದರಿಂದ ಈಗಾಗಲೆ ೯ ಎಕರೆ ಖಾಸಗಿ ಜಮೀನನ್ನು ಗುರ್ತಿಸಲಾಗಿದೆ. ಮಾರ್ಗದರ್ಶಿ ಬೆಲೆ ಎಕರೆಗೆ ₹೬೭ ಲಕ್ಷವಿದ್ದರೆ ರೈತರು ₹೧.೨೦ ಲಕ್ಷಕ್ಕೆ ಬೇಡಿಕೆ ಇಡುತ್ತಿದ್ದಾರೆ. ಬೆಳಗ್ಗೆಯಷ್ಟೇ ಜಿಲ್ಲಾಧಿಕಾರಿ, ತಹಸೀಲ್ದಾರ್ ಜೊತೆ ಮಾತನಾಡಿದ್ದು, ಸೂಕ್ತ ಬೆಲೆಗೆ ಜಾಗ ಸಿಕ್ಕರೆ ಅದನ್ನೇ ಖರೀದಿಸಲು, ಇಲ್ಲದಿದ್ದರೆ ಬೇರೆ ಜಮೀನು ಹುಡುಕಿ ಸ್ಮಶಾನಕ್ಕೆ ಹೆಚ್ಚುವರಿ ಭೂಮಿ ಕಾಯ್ದಿರಿಸಲೇಬೇಕೆಂದು ಸೂಚಿಸಿದ್ದೇನೆ ಎಂದರು.ಅದಕ್ಕೆ ಹರೀಶ್ ಮಾತನಾಡಿ, ಹರಿಹರ ನದಿ ದಡದಲ್ಲಿ ಇರುವುದರಿಂದ ಪರ್ಯಾಯ ಮಾರ್ಗಗಳಿಲ್ಲ. ಅದೇ ಜಮೀನು ಖರೀದಿಸುವುದು ಅನಿವಾರ್ಯವಾಗಿದೆ. ನಗರ ಪ್ರದೇಶದಲ್ಲಿ ಎಕರೆಗೆ ₹೧ ಕೋಟಿಗೆ ಹೆಚ್ಚೇನು ಆಗುವುದಿಲ್ಲ. ಮಳೆಗಾಲದಲ್ಲಿ ಮುಳಗಡೆಯಾಗುವ ನದಿ ತೀರದ ವಸತಿ ಪ್ರದೇಶಗಳ ನಿವಾಸಿಗಳಿಗೆಂದು ಇದರಲ್ಲೇ ೫ ಎಕರೆ ಪ್ರದೇಶದಲ್ಲಿ ನಿವೇಶನ ಮಾಡಿಕೊಡುವ ಉದ್ದೇಶವಿದೆ ಎಂದರು.
- - -ಬಾಕ್ಸ್ * ಸ್ಮಶಾನಕ್ಕೂ ಜಾಗ ಕೇಳುವ ದುಸ್ಥಿತಿ: ಸಚಿವ ವಿವಿಧ ಒತ್ತಡಗಳಿಂದ ಸರ್ಕಾರಿ ಜಾಗಗಳನ್ನು ಸಂಘ, ಸಂಸ್ಥೆ ಮತ್ತಿತರರಿಗೆ ಮಂಜೂರು ಮಾಡಿ, ಮಾಡಿ, ಈಗ ಸ್ಮಶಾನಕ್ಕೂ ಜಾಗವಿಲ್ಲದಂತಾಗಿದೆ. ಸರ್ಕಾರ ಸ್ಮಶಾನಕ್ಕೂ ಖಾಸಗಿ ವ್ಯಕ್ತಿಗಳಿಂದ ಭೂಮಿ ಖರೀದಿಸುವ ದುಸ್ಥಿತಿ ಎದುರಾಗಿದೆ ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ಹೇಳಿದರು.
ಕಳೆದ ಒಂದೇ ವರ್ಷ ₹೫೦ ಕೋಟಿ ಸ್ಮಶಾನ ಜಾಗಗಳ ಖರೀದಿಗೆ ಕೊಟ್ಟಿದ್ದೇವೆ. ರಾಜ್ಯದ ಹಲವಾರು ಗ್ರಾಮಗಳಲ್ಲಿ ಸ್ಮಶಾನಕ್ಕೆ ಜಾಗ ಇಲ್ಲವೆಂದು ಸತತವಾಗಿ ಹೈಕೋರ್ಟಿನಲ್ಲಿ ಕೇಸು ನಡೆಯುತ್ತಿವೆ. ಸರ್ಕಾರದ ಪ್ರಧಾನ ಕಾರ್ಯದರ್ಶಿ ವಾರಕ್ಕೊಮ್ಮೆ ಹೈಕೋರ್ಟಿನಲ್ಲಿ ಹೋಗಿ ಕೈ ಕಟ್ಟಿ ನಿಂತುಕೊಳ್ಳಬೇಕಾಗಿದೆ. ಮುಖ್ಯಮಂತ್ರಿಗಳಾಗಲಿ, ನಾವಾಗಲಿ ಯಾವುದೇ ಗ್ರಾಮಕ್ಕೆ ಹೋದರೂ ಜನರು ತಮ್ಮೂರಲ್ಲಿ ಸ್ಮಶಾನವಿಲ್ಲ ಎಂದು ದೂರುತ್ತಾರೆ. ೧೨ ಸಾವಿರ ಅಂಗನವಾಡಿಗಳಿಗೆ ಜಾಗ ಕೊಡಲಾಗಿಲ್ಲ ಎಂದರು.ಒಂದು ಕಡೆ ಸ್ಮಶಾನಕ್ಕೆ ಜಾಗವಿಲ್ಲ, ಕೆಪಿಟಿಸಿಎಲ್ ಸ್ಟೇಷನ್ ಮಾಡಲು ಜಾಗವಿಲ್ಲ, ಶಾಲಾ ಮಕ್ಕಳ ಆಟದ ಮೈದಾನಕ್ಕೆ ಜಾಗವಿಲ್ಲ, ಆಸ್ಪತ್ರೆಗಳಿಗೆ, ಅಂಗನವಾಡಿಗೆ ಜಾಗವಿಲ್ಲ. ಆದರೆ ಮತ್ತೊಂದು ಕಡೆಗೆ ಸರ್ಕಾರಿ ಜಾಗಗಳನ್ನು ಖಾಸಗಿಯವರಿಗೆ ಮಂಜೂರು ಮಾಡಲಾಗುತ್ತಿದೆ. ಇರೋ ಅಲ್ಪಸ್ವಲ್ಪ ಜಾಗಗಳನ್ನೂ ನಾವು ಕೊಟ್ಟು ಕೈ ತೊಳೆದುಕೊಂಡರೆ ಹೇಗೆ ಎಂಬುದನ್ನು ಎಲ್ಲ ಸದಸ್ಯರು ಗಮನದಲ್ಲಿಟ್ಟುಕೊಳ್ಳಬೇಕು ಎಂದು ಶಾಸಕರಿಗೆ ಸಲಹೆ ನೀಡಿದರು.
- - - (-ಬಿ.ಪಿ.ಹರೀಶ್, ಶಾಸಕ)(-ಕೃಷ್ಣಭೈರೇಗೌಡ, ಸಚಿವ)