ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಮಳೆಗಾಲ ಆರಂಭವಾಗಿರುವುದರಿಂದ ಕುಡಿಯುವ ನೀರಿನ ಜಲಮೂಲಗಳ ಸ್ವಚ್ಛತೆ ಹಾಗೂ ಜಲಮೂಲಗಳ ಸುತ್ತಮುತ್ತ ಪರಿಸರ ಸ್ವಚ್ಛಗೊಳಿಸಲು ಪೈಪ್‌ಲೈನ್ ದುರಸ್ತಿ ಹಾಗೂ ಚರಂಡಿಗಳ ಸ್ವಚ್ಛತೆ ಕಾರ್ಯ ಕೈಗೊಳ್ಳುವಂತೆ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಸೂಚಿಸಿದರು.ಬಾದಾಮಿ ತಾಲೂಕು ಪಂಚಾಯತಿ ಸಭಾಭವನದಲ್ಲಿ ಜರುಗಿದ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಯಾವುದೇ ರೀತಿಯಿಂದ ಕುಡಿಯುವ ನೀರು ಕಲುಷಿತವಾಗದಂತೆ ಎಚ್ಚರ ವಹಿಸಬೇಕು. ಸ್ವಚ್ಛ ಭಾರತ ಯೋಜನೆ ಅಡಿ ತಾಲೂಕಿಗೆ ನಿಗದಿಪಡಿಸಿದ ಗುರಿಗೆ ಅನುಗುಣವಾಗಿ ಅರ್ಜಿಗಳನ್ನು ಸ್ವೀಕರಿಸಿ, ಶೌಚಾಲಯಗಳ ನಿರ್ಮಾಣದ ಗುರಿಯನ್ನು ಶೇ 100ರಷ್ಟು ಪ್ರಗತಿ ಸಾಧಿಸಿ ಎಲ್ಲ ಗ್ರಾಮಗಳನ್ನು ಬಯಲು ಬಹಿರ್ದಸೆ ಮುಕ್ತ ಗ್ರಾಮಗಳನ್ನಾಗಿ ಮಾಡಲು ಕಾರ್ಯಪ್ರವೃತ್ತರಾಗಬೇಕು ಎಂದರು.ನರೇಗಾ ಯೋಜನೆಯಡಿ ಬಾದಾಮಿ ಹಾಗೂ ಗುಳೇದಗುಡ್ಡ ತಾಲೂಕಿನ ಮಾನವ ದಿನಗಳ ಗುರಿಯನ್ನು ಶೇ.100ರಷ್ಟು ಆಗಬೇಕು. ಸಮಾಜ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ ಬರುವ ವಸತಿ ಶಾಲೆಗಳು ಸ್ವಂತ ಕಟ್ಟಡದಲ್ಲಿ ಎಷ್ಟು ಇವೆ. ಸ್ವಂತ ಕಟ್ಟಡ ಹೊಂದಿದ ಶಾಲೆಗಳು ಎಷ್ಟು ಇವೆ, ಮಾಹಿತಿ ನೀಡಲು ತಿಳಿಸಿದ ಸಿಇಒ ಅವರು ಸ್ವಂತ ಕಟ್ಟಡ ನಿರ್ಮಾಣದ ಅನುದಾನಕ್ಕಾಗಿ ಪ್ರಸ್ತಾವನೆ ಸಲ್ಲಿಸಲು ಸೂಚಿಸಿದರು. ಅಂಗನವಾಡಿ ಕಟ್ಟಡಗಳ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.ಸಭೆಯಲ್ಲಿ ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿ ಅಮರೇಶ ನಾಯಕ, ಯೋಜನಾ ನಿರ್ದೇಶಕ ಎನ್.ವೈ. ಬಸರಿಗಿಡದ, ಬಾದಾಮಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಬಡಿಗೇರ ಸೇರಿದಂತೆ ಬಾದಾಮಿ ಮತ್ತು ಗುಳೇದಗುಡ್ಡ ತಾಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.ಕರವಸೂಲಾತಿಯಲ್ಲಿ ಹೆಚ್ಚಿನ ಪ್ರಗತಿ ಸಾಧಿಸಿ. ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಎಲ್ಲ ಕೂಸಿನ ಮನೆಗಳು ಪೂರ್ಣ ಪ್ರಮಾಣದಲ್ಲಿ ಸೇವೆ ನೀಡುವಂತಾಗಬೇಕು. ಸ್ವಸಹಾಯ ಸಂಘಗಳ ವರ್ಕ್ ಷಡ್ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಗ್ರಾಮ ಪಂಚಾಯಿತಿಗಳಲ್ಲಿ ಸಿಬ್ಬಂದಿ ಶೇ.100ರಷ್ಟು ಹಾಜರಾತಿ ಪಾಲಿಸಲು ಸೂಚಿಸಿದರು. ಸಕಾಲದ ಮೂಲಕ ಸ್ವೀಕರಿಸಲಾದ ಅರ್ಜಿಗಳನ್ನು ನಿಗದಿತ ಕಾಲಾವಧಿಯೊಳಗೆ ವಿಲೇವಾರಿ ಮಾಡಲು ಸೂಚಿಸಿದರು. ನರೇಗಾ ಯೋಜನೆಯಡಿ ಕೈಗೊಂಡ ಐದು ಆದ್ಯತೆಯ ಕಾರ್ಯಕ್ರಮ ತ್ವರಿತವಾಗಿ ಪೂರ್ಣಗೊಳಿಸಬೇಕು.
-ಶಶಿಧರ ಕುರೇರ್, ಜಿಪಂ ಸಿಇಒ.