ಸಾರಾಂಶ
ಪಟ್ಟಣದಲ್ಲಿ ಬೀದಿನಾಯಿಗಳ ಹಾವಳಿ ವಿಪರೀತವಾಗಿದೆ. 
ಸಿದ್ದಾಪುರ: ಸ್ಥಳೀಯ ಪಟ್ಟಣ ಪಂಚಾಯಿತಿ ಮಾಸಿಕ ಸಾಮಾನ್ಯ ಸಭೆ ಪಪಂ ಅಧ್ಯಕ್ಷೆ ಚಂದ್ರಕಲಾ ಸುರೇಶ ನಾಯ್ಕ ಅಧ್ಯಕ್ಷತೆಯಲ್ಲಿ ಜರುಗಿತು.
ಸಭೆಯಲ್ಲಿ ಮಾತನಾಡಿದ ಪಪಂ ಸದಸ್ಯ ಮಾರುತಿ ನಾಯ್ಕ ಹೊಸೂರು, ಪಟ್ಟಣದಲ್ಲಿ ಬೀದಿನಾಯಿಗಳ ಹಾವಳಿ ವಿಪರೀತವಾಗಿದೆ. ಅವುಗಳಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಅವುಗಳ ನಿಯಂತ್ರಣಕ್ಕೆ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ. ಬೀದಿನಾಯಿಗಳನ್ನು ಹಿಡಿದು, ಅವುಗಳ ಸಂತಾನಹರಣದ ಕಾರ್ಯಕ್ಕಾಗಿ ಹಣ ಮೀಸಲಿಟ್ಟರೂ ಅದರ ಬಗ್ಗೆ ಅಲಕ್ಷ್ಯ ತೋರಿಸಲಾಗುತ್ತಿದೆ. ಕೂಡಲೇ ಆ ಬಗ್ಗೆ ಕ್ರಮ ವಹಿಸಿ ಎಂದು ಆಗ್ರಹಿಸಿದರು.ಪಪಂ ಮುಖ್ಯಾಧಿಕಾರಿ ಜೆ.ಆರ್. ನಾಯ್ಕ ಪಪಂ ಆರೋಗ್ಯ ನಿರೀಕ್ಷಕರನ್ನು ಉದ್ದೇಶಿಸಿ, ಕೂಡಲೇ ಬೀದಿನಾಯಿಗಳನ್ನು ಹಿಡಿಯುವವರನ್ನು ಕರೆಸಿ ಎಂದು ಸೂಚಿಸಿದರು.
ಹೊಸೂರಿನಲ್ಲಿರುವ ಘನತ್ಯಾಜ್ಯ ಘಟಕದ ಸುತ್ತಲಿನ ಸುಮಾರು ೫೦೦ ಮೀ. ವ್ಯಾಪ್ತಿಯ ಸಾರ್ವಜನಿಕರಿಗೆ ತ್ಯಾಜ್ಯಗಳ ದುರ್ವಾಸನೆ ಮತ್ತು ನೊಣಗಳ ಕಾಟದಿಂದ ತುಂಬಾ ಸಮಸ್ಯೆಯಾಗುತ್ತಿದೆ. ಹಗಲಿನಲ್ಲಿ ಅಷ್ಟಾಗಿ ಕಂಡುಬರದಿದ್ದರೂ ರಾತ್ರಿ ವೇಳೆಯಲ್ಲಿ ಇದರಿಂದ ಹೆಚ್ಚು ತೊಂದರೆಯಾಗುತ್ತಿದೆ. ಕೂಡಲೇ ಅದರ ನಿವಾರಣೆಗೆ ಕ್ರಮ ವಹಿಸಿ ಎಂದು ಮಾರುತಿ ನಾಯ್ಕ ಹೇಳಿದರು.ಪಟ್ಟಣದಲ್ಲಿ ೧೪ ಕಡೆ ಸಿಸಿ ಕ್ಯಾಮೆರಾಗಳಿದ್ದರೂ ಅವು ಕಾರ್ಯನಿರ್ವಹಿಸುತ್ತಿಲ್ಲ ಎಂದು ಸದಸ್ಯರು ದೂರಿದಾಗ ರಸ್ತೆ ಕಾಮಗಾರಿ ಸಂದರ್ಭದಲ್ಲಿ ಅವುಗಳ ಕೇಬಲ್‌ಗಳನ್ನು ಕಿತ್ತುಹಾಕಿದ್ದು, ಅವನ್ನು ಸರಿಪಡಿಸುವದಾಗಿ ಮುಖ್ಯಾಧಿಕಾರಿ ತಿಳಿಸಿದರು.
ಪಪಂ ೨೦೨೫-೨೬ನೇ ಸಾಲಿನ ಆಯ-ವ್ಯಯ ಅಂದಾಜು ಪತ್ರಿಕೆಯನ್ನು ಅಧ್ಯಕ್ಷೆ ಚಂದ್ರಕಲಾ ಸುರೇಶ ನಾಯ್ಕ ಹಾಗೂ ಮುಖ್ಯಾಧಿಕಾರಿ ಜಗದೀಶ ನಾಯ್ಕ ಮಂಡಿಸಿದರು. ಅಂದಾಜು ಪತ್ರಿಕೆಯಲ್ಲಿ ಪೂರ್ಣ ವಿವರದ ಜತೆಗೆ ₹೧೦ ಕೋಟಿ ೯೫ ಲಕ್ಷ ೧೦ ಸಾವಿರ ಆದಾಯ, ₹೧೦ ಕೋಟಿ ೮೯ ಲಕ್ಷ ೭ ಸಾವಿರ ವೆಚ್ಚ ಹಾಗೂ ₹೬ ಲಕ್ಷ ೩ ಸಾವಿರ ಉಳಿತಾಯದ ಅಂದಾಜು ಪತ್ರಿಕೆಗೆ ಸಭೆಯಲ್ಲಿ ಮಂಜೂರಿ ನೀಡಲಾಯಿತು.ಸರ್ಕಾರದಿಂದ ಬಂದ ಸುತ್ತೋಲೆಗಳ, ಹಿಂದಿನ ಸಭೆಗಳ ನಡಾವಳಿಗಳ ಕುರಿತು ಚರ್ಚಿಸಲಾಯಿತು. ೧೫ನೇ ಹಣಕಾಸು ಉಳಿತಾಯ ಹಣದಲ್ಲಿ ಮಂಜೂರಾದ ಕಾಮಗಾರಿಗಳ ಟೆಂಡರ್‌ಗಳ ಕುರಿತು ದೃಢೀಕರಣ ಮುಂತಾಗಿ ಹಲವು ವಿಷಯಗಳ ಕುರಿತು ಪರಿಶೀಲಿಸಿ ಮಂಜೂರಾತಿ ನೀಡಲಾಯಿತು.
ಪಪಂ ಉಪಾಧ್ಯಕ್ಷ ವಿನಯ ಹೊನ್ನೆಗುಂಡಿ, ಸ್ಥಾಯಿ ಸಮಿತಿ ಅಧ್ಯಕ್ಷ ವಿಜಯೇಂದ್ರ ಗೌಡರ್, ಸದಸ್ಯರಾದ ರವಿಕುಮಾರ ನಾಯ್ಕ, ಮಾರುತಿ ನಾಯ್ಕ, ಸುಧೀರ ನಾಯ್ಕ, ನಂದನ ಬರ್ಕರ, ಯಶೋದಾ ಮಡಿವಾಳ, ಮುಬಿನಾಬಾನು ಗರ್ಕಾರ್, ಕವಿತಾ ಹೆಗಡೆ, ರಾಧಿಕಾ ಕಾನಗೋಡ, ನಾಮನಿರ್ದೇಶಿತ ಸದಸ್ಯ ಕೆ.ಟಿ. ಹೊನ್ನೆಗುಂಡಿ ಉಪಸ್ಥಿತರಿದ್ದರು.;Resize=(128,128))
;Resize=(128,128))
;Resize=(128,128))
;Resize=(128,128))