ಸಾರಾಂಶ
ಕುಷ್ಟಗಿ: ತಾಲೂಕಿನಲ್ಲಿ ಅಕ್ರಮ ಚಟುವಟಿಕೆಗಳಾದ ಮಟ್ಕಾ, ಗಾಂಜಾ ಮಾರಾಟ ಮತ್ತು ಸೇವನೆ, ಅಕ್ರಮ ಸಾರಾಯಿ ಮಾರಾಟ ಎಗ್ಗಿಲ್ಲದೆ ನಡೆಯುತ್ತಿದ್ದರೂ ಪೊಲೀಸ್ ಇಲಾಖೆಯ ಅಧಿಕಾರಿಗಳು ಕ್ರಮ ಕೈಗೊಳ್ಳದಿರುವ ಪೊಲೀಸರ ಕಾರ್ಯ ವೈಖರಿಯ ಕುರಿತು ಶಾಸಕ ದೊಡ್ಡನಗೌಡ ಪಾಟೀಲ ಅಸಮಾಧಾನ ವ್ಯಕ್ತಪಡಿಸಿದರು.
ಪಟ್ಟಣದ ಸರ್ಕ್ಯೂಟ್ ಹೌಸ್‌ನಲ್ಲಿ ನಡೆದ ತಾಲೂಕು ಪಂಚಾಯಿತಿ ತ್ರೈಮಾಸಿಕ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಕುಷ್ಟಗಿ ಪಟ್ಟಣ ಸೇರಿದಂತೆ ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಅಕ್ರಮ ಸಾರಾಯಿ ಮಾರಾಟ ಹಾಗೂ ಮಟ್ಕಾ ದಂಧೆ ವಿಪರೀತವಾಗಿ ನಡೆಯುತ್ತಿರುವ ಕುರಿತು ಸ್ವತಃ ನಾನೆ ಅನೇಕ ಸಲ ಮಾಹಿತಿ ಕೊಟ್ಟರೂ ಕ್ರಮ ಕೈಗೊಂಡಿಲ್ಲ ಯಾಕೆ ಎಂದು ಸಿಪಿಐ ಯಶವಂತ ಬಿಸನಳ್ಳಿ ಅವರನ್ನು ಪ್ರಶ್ನಿಸಿ, ಕ್ರಮಕೈಗೊಳ್ಳದೆ ಹೋದರೆ ನಿಮಗೆ ತಿಳಿದಹಾಗೆ ಮಾಡಿ ಎಂದರು.ಪಟ್ಟಣ ಸೇರಿದಂತೆ ತಾಲೂಕಿನ ಬಹುತೇಕ ಗ್ರಾಮಗಳಲ್ಲಿರುವ ಎಗ್ ರೈಸ್ ಅಂಗಡಿಗಳಲ್ಲಿಯೂ ಸಾರಾಯಿ ಮಾರಾಟ ನಡೆಯುತ್ತಿದೆ. ಶಾಲಾ-ಕಾಲೇಜಿನಿಂದ ಬರುವ ವಿದ್ಯಾರ್ಥಿನಿಯರಿಗೆ ಯುವಕರು ಚುಡಾಯಿಸುವ ದೂರುಗಳು ಸಹಿತ ನನ್ನ ಗಮನಕ್ಕೆ ಬಂದಿದ್ದು, ಕೂಡಲೇ ಕಾರ್ಯ ಪ್ರವೃತ್ತರಾಗುವ ಮೂಲಕ ಇಂತಹ ಅಕ್ರಮ ಚಟುವಟಿಕೆಗೆ ಕಡಿವಾಣ ಹಾಕಬೇಕು. ಪಟ್ಟಣದಲ್ಲಿ ಬಹಳಷ್ಟು ಕಳ್ಳತನ ಪ್ರಕರಣಗಳು ನಡೆಯುತ್ತಿದ್ದು, ಇವುಗಳ ನಿಯಂತ್ರಣಕ್ಕೆ ಮುಂದಾಗಬೇಕು ಎಂದು ಸೂಚನೆ ನೀಡಿದರು.
ಅಬಕಾರಿ ಇಲಾಖೆಯ ಅಧಿಕಾರಿಗಳು ಅಕ್ರಮ ಸಾರಾಯಿ ಮಾರಾಟ ಮಾಡುವುದನ್ನು ನಿಯಂತ್ರಣಕ್ಕೆ ತರುವಂತಹ ಕೆಲಸವಾಗಬೇಕು. ಮಕ್ಕಳು ಸೇರಿದಂತೆ ಯುವಜನರು ಸಹಿತ ಸಾರಾಯಿ ಚಟಕ್ಕೆ ಬಲಿಯಾಗುತ್ತಿದ್ದು, ಕುಟುಂಬ ನಿರ್ವಹಣೆ ಕಷ್ಟಸಾಧ್ಯವಾಗುತ್ತಿದೆ. ಕೂಡಲೇ ಅಕ್ರಮ ಸಾರಾಯಿ ಮಾರಾಟಗಾರರ ವಿರುದ್ಧ ಸೂಕ್ರ ಕ್ರಮಕೈಗೊಂಡು ನಿಯಂತ್ರಣಕ್ಕೆ ತರುವ ಕೆಲಸ ಮಾಡಬೇಕು ಎಂದರು.ನಾಮನಿರ್ದೇಶಿತ ಸದಸ್ಯರು ಮಾತನಾಡಿ, ಇಲಾಖೆಯ ಅಧಿಕಾರಿಗಳು ಅನುಪಾಲನಾ ವರದಿ ಕೊಟ್ಟಿಲ್ಲ. ಮುಂದಿನ ಸಭೆಯಲ್ಲಿ ಹೀಗಾದರೆ ಸಭೆ ನಡೆಸುವುದು ಬೇಡ ಎಂದರು.
ಶಾಸಕ ದೊಡ್ಡನಗೌಡ ಪಾಟೀಲ ಅವರು ತಾಪಂ ಇಒ ಪಂಪಾಪತಿ ಹಿರೇಮಠ ಅವರಿಗೆ ಮುಂದಿನ ಸಭೆಯಲ್ಲಿ ಕಡ್ಡಾಯವಾಗಿ ಅನುಪಾಲನಾ ವರದಿ ಸಮೇತ ಸಭೆಗೆ ಹಾಜರಾಗಬೇಕು ಎಂದು ಸೂಚನೆ ನೀಡಿದರು.ತಾಲೂಕಿನ ಕೆಲವು ಅಂಗಡಿಗಳಲ್ಲಿ ದಿನಾಂಕ ಮುಗಿದ ಕ್ರೀಮಿನಾಶಕಗಳನ್ನು ಮಾರಾಟ ಮಾಡುತ್ತಿರುವುದು ಕಂಡು ಬರುತ್ತಿದೆ. ಅಧಿಕಾರಿಗಳು ಸೂಕ್ತ ಕ್ರಮಕ್ಕೆ ಮುಂದಾಗಬೇಕು. ಅವರ ಅಂಗಡಿಗಳ ಮೇಲೆ ದಾಳಿ ಮಾಡಬೇಕು. ಸರಕಾರದಿಂದ ಬಂದ ಅನುದಾನವನ್ನು ರೈತರಿಗೆ ಮುಟ್ಟಿಸುವ ಕೆಲಸವಾಗಬೇಕು. ವಾಪಸ್ ಕಳುಹಿಸಬಾರದು. ಕೃಷಿ ಹೊಂಡಗಳನ್ನು ದುಡ್ಡಿಗಾಗಿ ಮಾತ್ರ ಮಾಡಿಕೊಳ್ಳುತ್ತಿದ್ದಾರೆ. ಅವುಗಳು ಉಪಯೋಗಕ್ಕೆ ಬರುತ್ತಿಲ್ಲ. ಇದನ್ನು ಸಹಿತ ಪರಿಶೀಲಿಸಿ ಅನುದಾನ ದುರ್ಬಳಕೆಯಾಗದಂತೆ ನೋಡಿಕೊಳ್ಳುವ ಕೆಲಸವನ್ನು ಕೃಷಿ ಇಲಾಖೆಯ ಅಧಿಕಾರಿಗಳು ಮಾಡಬೇಕು ಎಂದರು.
ಸರಕಾರಿ ಆಸ್ಪತ್ರೆಗೆ ಕುಷ್ಟಗಿ, ರೋಣ, ಯಲಬುರ್ಗಾ, ಗಜೇಂದ್ರಗಡ, ಇಲಕಲ್ಲ ತಾಲೂಕಿನ ಅನೇಕ ಗರ್ಭಿಣಿಯರು ಹೆರಿಗೆ ಸಲುವಾಗಿ ಬರುತ್ತಾರೆ. ದುಡ್ಡು ಕೊಟ್ಟರೆ ಮಾತ್ರ ಹೆರಿಗೆ ಮಾಡಿಸಿಕೊಳ್ಳುತ್ತಿದ್ದಾರೆ. ಇಲ್ಲವಾದರೆ ಜಿಲ್ಲಾಸ್ಪತ್ರೆಗೆ ಕಳಿಸಿಕೊಡುವ ಸಂಸ್ಕೃತಿ ಸಿಬ್ಬಂದಿ ಕಲಿತಿದ್ದು ನಿಯಂತ್ರಣ ಮಾಡಬೇಕು ಎಂದು ಟಿಎಚ್ಒ ಡಾ ಆನಂದ ಗೋಟೂರಗೆ ಸೂಚಿಸಿದರು.ತಾಲೂಕಿನಲ್ಲಿ ಎಲ್ಆ್ಯಂಡ್‌ಟಿ ಕಂಪನಿಯ ಪೈಪ್‌ಲೈನ್ ಕಾಮಗಾರಿ ಸರಿಯಾದ ರೀತಿಯಲ್ಲಿ ನಡೆಯುತ್ತಿಲ್ಲ. ಜೆಜೆಎಂ ಕಾಮಗಾರಿ ಅರೆಬರೆಯಾಗಿ ನಡೆದಿದ್ದು, ಇನ್ನೂ ಎಲ್ಲ ಗ್ರಾಮಗಳಿಗೂ ನೀರು ಕೊಟ್ಟಿಲ್ಲ. ಒಡೆದುಹಾಕಿರುವ ಸಿಸಿ ರಸ್ತೆಯನ್ನು ನಿರ್ಮಾಣ ಮಾಡಿಲ್ಲ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಿದರು.
ಕೆಇಬಿ ಎಇಇ ಕೆಂಚಪ್ಪ ಬಾವಿಮನಿ ಅವರಿಗೆ ವಿದ್ಯುತ್ ಸರಬರಾಜನ್ನು ಸಮರ್ಪಕವಾಗಿ ಕೊಡಬೇಕು. ತಾಲೂಕಿನ ಅನೇಕ ಗ್ರಾಮಗಳಲ್ಲಿ ಕಂಬಗಳು ಶಿಥಿಲಗೊಂಡಿದ್ದು, ಕೂಡಲೇ ಕಂಬಗಳ ದುರಸ್ತಿ ಕಾರ್ಯ ಮಾಡಿಕೊಡಬೇಕು ಎಂದು ಸೂಚಿಸಿದರು.ಇದೇ ಸಂದರ್ಭದಲ್ಲಿ ಶಿಕ್ಷಣ ಇಲಾಖೆ, ಸಿಡಿಪಿಒ ಕಚೇರಿ ಸೇರಿದಂತೆ ಅನೇಕ ಇಲಾಖೆಗಳ ಅಧಿಕಾರಿಗಳು ವರದಿ ಒಪ್ಪಿಸಿದರು. ಗ್ರಾಮ ಪಂಚಾಯಿತಿ ಪಿಡಿಒಗಳು ತಮ್ಮ ಸಮಸ್ಯೆಗಳನ್ನು ಶಾಸಕರು ಎದುರು ಹಂಚಿಕೊಂಡು ಸೂಕ್ತ ಕ್ರಮಕ್ಕೆ ಮುಂದಾಗಲು ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಅಶೋಕ ಶಿಗ್ಗಾಂವಿ, ತಾಲೂಕು ಪಂಚಾಯಿತಿ ಇಒ ಪಂಪಾಪತಿ ಹಿರೇಮಠ, ನಾಮನಿರ್ದೇಶಿತ ಸದಸ್ಯರು, ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು, ಪಿಡಿಒಗಳು ಇದ್ದರು.ಹರಟೆ..
ಶಾಸಕ ದೊಡ್ಡನಗೌಡ ಪಾಟೀಲ ಅವರ ಅಧ್ಯಕ್ಷತೆಯಲ್ಲಿ ನಡೆದ ತ್ರೈಮಾಸಿಕ ಸಭೆಯಲ್ಲಿ ಶಾಸಕರು ಸೇರಿದಂತೆ ಅಧಿಕಾರಿಗಳು ಚರ್ಚೆಯಲ್ಲಿ ತೊಡಗಿದ್ದರೆ ಕೆಲ ಅಧಿಕಾರಿಗಳು ತಮಗೆ ಹಾಗೂ ಕೆಡಿಪಿ ಸಭೆಗೆ ಸಂಬಂದವಿಲ್ಲವೆಂಬಂತೆ ಮೊಬೈಲ್‌ನಲ್ಲಿ ತಲ್ಲೀನರಾಗಿದ್ದು ಕಂಡು ಬಂತು.