ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರುನಗರದಲ್ಲಿರುವಂತೆ ಜಿಲ್ಲೆಯ ಎಲ್ಲಾ ತಾಲೂಕು ಆಸ್ಪತ್ರೆಗಳಲ್ಲಿ ರಕ್ತ ನಿಧಿ ಕೇಂದ್ರ ಸ್ಥಾಪನೆಗೆ ಸಂಬಂಧಿಸಿದಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಆರೋಗ್ಯ ಇಲಾಖಾಧಿಕಾರಿಗಳಿಗೆ ಸೂಚನೆ ನೀಡಿದರು.ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸೋಮವಾರ ಆಯೋಜಿಸಿದ್ದ ರಕ್ತ ಸನ್ನದ್ದತಾ ಪಡೆ ಸಭೆ ಅಧ್ಯಕ್ಷತೆವಹಿಸಿ ಮಾತನಾಡಿದರು. ಜಿಲ್ಲೆಯ ಎಲ್ಲಾ ತಾಲೂಕಿನಲ್ಲಿ ರಕ್ತ ನಿಧಿ ಕೇಂದ್ರವನ್ನು ಸ್ಥಾಪಿಸಿದಲ್ಲಿ ಆಯಾ ತಾಲೂಕಿನ ರೋಗಿಗಳಿಗೆ ರಕ್ತದ ಅವಶ್ಯಕತೆ ಇದ್ದಾಗ ತುರ್ತಾಗಿ ಪೂರೈಕೆ ಮಾಡಲು ಅನುವಾಗುತ್ತದೆ. ದಾನಿಗಳಿಂದ ಸಂಗ್ರಹಿಸಲಾದ ರಕ್ತವನ್ನು ಕಡ್ಡಾಯವಾಗಿ ಡಬಲ್ ಸ್ಕ್ರೀನಿಂಗ್ ಪರೀಕ್ಷೆಗೊಳಪಡಿಸಬೇಕು ಎಂದರು.ರಕ್ತದ ಪರೀಕ್ಷೆಯಲ್ಲಿ ಎಚ್‌ಐವಿ ದೃಢಪಟ್ಟಲ್ಲಿ ಅಂಥವರಿಗೆ ಸಮಾಲೋಚನೆ ಮೂಲಕ ಐಸಿಟಿಸಿ ಕೇಂದ್ರದಲ್ಲಿ ಚಿಕಿತ್ಸೆ ನೀಡಲು ಕ್ರಮ ವಹಿಸಬೇಕು. ರಕ್ತ ಪರೀಕ್ಷೆಯಲ್ಲಿ ಯಾವುದೇ ಲೋಪ ಉಂಟಾಗದಂತೆ ಎಚ್ಚರಿಕೆ ವಹಿಸಬೇಕೆಂದು ಸೂಚನೆ ನೀಡಿದರು.ಜಿಲ್ಲಾ ಕ್ಷಯ ರೋಗ ನಿಯಂತ್ರಣಾಧಿಕಾರಿ ಹಾಗೂ ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ. ಸನತ್ ಕುಮಾರ್ ತಿಪಟೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ರಕ್ತ ನಿಧಿ ಕೇಂದ್ರ ಹಾಗೂ ವಿಧಳ ಕೇಂದ್ರದ ಸ್ಥಾಪನೆಗೆ ಸಿದ್ಧಪಡಿಸಿರುವ ಪ್ರಸ್ತಾವನೆಯನ್ನು ಜಿಲ್ಲಾಧಿಕಾರಿಗಳ ಪರಿಶೀಲನೆಗೆ ಸಲ್ಲಿಸಿ ಮಾತನಾಡಿ, ಜಿಲ್ಲೆಯಲ್ಲಿ 1 ಸರ್ಕಾರಿ ಬ್ಲಡ್ ಸೆಂಟರ್, 9 ಖಾಸಗಿ ಬ್ಲಡ್ ಸೆಂಟರ್, 9 ಸರ್ಕಾರಿ ರಕ್ತ ಶೇಖರಣಾ ಘಟಕ ಹಾಗೂ 9 ಖಾಸಗಿ ರಕ್ತ ಶೇಖರಣಾ ಘಟಕಗಳು ಕಾರ್ಯನಿರ್ವಹಿಸುತ್ತಿವೆ. ಕಳೆದ 2023 ರ ಏಪ್ರಿಲ್‌ನಿಂದ ಮಾರ್ಚ್ 2024 ರವರೆಗೆ 3452 ಬ್ಲಡ್ ಯೂನಿಟ್‌ಗಳನ್ನು ಸ್ವೀಕರಿಸಲಾಗಿದ್ದು, ಈ ಪೈಕಿ 3409 ಬ್ಲಡ್ ಯುನಿಟ್‌ಗಳನ್ನು ಬಳಕೆ ಮಾಡಲಾಗಿದೆ ಎಂದು ತಿಳಿಸಿದರು2024 ರ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಜಿಲ್ಲಾಸ್ಪತ್ರೆ, ಸ್ವಯಂಪ್ರೇರಿತ ರಕ್ತದಾನಿ ಹಾಗೂ ವಿವಿಧ ಖಾಸಗಿ ಬ್ಲಡ್ ಬ್ಯಾಂಕುಗಳಿಂದ ಶೇಖರಿಸಲಾದ 3245 ಯೂನಿಟ್ ರಕ್ತದಲ್ಲಿ 4 ಪ್ರಕರಣಗಳಲ್ಲಿ ಹೆಚ್‌ಐವಿ ದೃಢಪಟ್ಟಿದ್ದು, ಎಚ್‌ಐವಿ ದೃಢಪಟ್ಟವರಿಗೆ ಸಮಾಲೋಚನೆ ನಡೆಸಿ ಐಸಿಟಿಸಿ ಕೇಂದ್ರಗಳಲ್ಲಿ ಚಿಕಿತ್ಸೆ ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಅಸ್ಗರ್ ಬೇಗ್ ಮಾತನಾಡಿ, 2023 ಏಪ್ರಿಲ್ ಮಾಹೆಯಿಂದ 2024 ರ ಮಾರ್ಚ್ ಅಂತ್ಯದವರೆಗೆ ಜಿಲ್ಲಾ ಆಸ್ಪತ್ರೆ ಬ್ಲಡ್ ಸೆಂಟರ್‌ನಿಂದ 5711, ವಿವಿಧ ಖಾಸಗಿ ಬ್ಲಡ್ ಸೆಂಟರ್‌ನಿಂದ 13596 ಹಾಗೂ 201 ಸ್ವಯಂ ಪ್ರೇರಿತ ರಕ್ತದಾನಿಗಳು ಸೇರಿ ಒಟ್ಟು 19508 ದಾನಿಗಳಿಂದ ರಕ್ತವನ್ನು ಸಂಗ್ರಹಿಸಲಾಗಿದೆ.ಇದರಲ್ಲಿ 14 ಜನರಲ್ಲಿ ಎಚ್‌ಐವಿ ಸೋಂಕಿರುವ ಬಗ್ಗೆ ದೃಢಪಟ್ಟಿದೆ. ಸಂಗ್ರಹಣೆಯಾದ ರಕ್ತದ ಯೂನಿಟ್‌ಗಳನ್ನು ಎಚ್‌ಐವಿ. ಎಚ್‌ಸಿವಿ, ಸಿಫಿಲೀಸ್, ಎಚ್‌ಬಿಎಸ್‌ಎಜಿ, ಮಲೇರಿಯಾ ಪರೀಕ್ಷೆಗೊಳಪಡಿಸಲಾಗುವುದು ಎಂದು ತಿಳಿಸಿದರು. ಸಂಜೀವಿನಿ ರಕ್ತನಿಧಿ ಕೇಂದ್ರದ ಪ್ರತಿನಿಧಿ ಮಾತನಾಡಿ, ಜಿಲ್ಲೆಯಲ್ಲಿರುವ ಕಾರ್ಖಾನೆಗಳಲ್ಲಿ ರಕ್ತದಾನ ಶಿಬಿರಗಳನ್ನು ಏರ್ಪಡಿಸುವಂತೆ ಕಾರ್ಖಾನೆಗಳ ಮಾಲೀಕರಿಗೆ ನಿರ್ದೇಶನ ನೀಡಬೇಕೆಂದು ಮನವಿ ಮಾಡಿದರು.
ಆರೋಗ್ಯ ಇಲಾಖೆಯ ಬಿ.ಎಂ. ಮೋಹನ್ ಕುಮಾರಿ, ರೂಪ ಸೇರಿ ವಿವಿಧ ಅಧಿಕಾರಿ ಹಾಗೂ ರಕ್ತನಿಧಿ ಕೇಂದ್ರದ ಪ್ರತಿನಿಧಿಗಳು ಉಪಸ್ಥಿತರಿದ್ದರು.