ಸಾರಾಂಶ
ಕಳೆದ 2021 ರಿಂದ 2025ರ ಸೆಪ್ಟೆಂಬರ್ ವರೆಗೂ 18 ವರ್ಷದ ಒಳಗಿನ ಮಕ್ಕಳು ಒಟ್ಟು 299 ಮಕ್ಕಳು ಕಾಣೆಯಾಗಿದ್ದಾರೆ. ಅದರಲ್ಲಿ ಹುಡುಗರು 97 ಹುಡಿಗಿಯರು 202 ಮಕ್ಕಳು ಕಾಣೆಯಾಗಿದ್ದಾರೆ. ಅದರಲ್ಲಿ 287 ಮಕ್ಕಳು ಪತ್ತೆಯಾಗಿದ್ದಾರೆ.
ಹೊಸಪೇಟೆ: ಕಾಣೆಯಾದ ಮಕ್ಕಳನ್ನು ಕೂಡಲೇ ಪತ್ತೆಗೆ ಪ್ರತಿಯೊಬ್ಬ ಠಾಣಾಧಿಕಾರಿಗಳು ಮುಂದಾಗಬೇಕು ಎಂದು ಎಸ್ಪಿ ಎಸ್. ಜಾಹ್ನವಿ ಸೂಚನೆ ನೀಡಿದರು.
ಮಕ್ಕಳ ರಕ್ಷಣಾ ನಿರ್ದೇಶನಾಲಯ, ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆ, ಕಾನೂನು ಸೇವಾ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸೇರಿದಂತೆ ಇತರೆ ಇಲಾಖೆಗಳಿಂದ ನಗರದ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಕಾಣೆಯಾದ ಮಕ್ಕಳ ಪತ್ತೆ ವಿಶೇಷ ಕಾರ್ಯಪಡೆ ಸಮಿತಿಯ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಮಕ್ಕಳನ್ನು ಕಳೆದುಕೊಂಡು ಬಂದಂತಹ ಪಾಲಕರು ಪೊಲೀಸ್ ಠಾಣೆಗೆ ಬಂದಾಗ ಕೂಡಲೇ ದೂರು ದಾಖಲಿಸಿಕೊಂಡು ತನಿಖೆ ಕೈಗೊಳ್ಳಬೇಕು. ವಿನಾಕಾರಣ ಅವರಿಗೆ ಓಡಾಟ ಮಾಡಿಸಬಾರದು. ಕಾಣೆಯಾಗಿ 2 ರಿಂದ 3 ದಿನಗಳ ಒಳಗಾಗಿ ಹುಡುಕಾಟ ನಡೆಸಿದರೆ; ಮಕ್ಕಳು ಸಿಗುವ ಅವಕಾಶಗಳು ಹೆಚ್ಚಾಗಿರುತ್ತವೆ. ಈ ನಿಟ್ಟಿನಲ್ಲಿ ಕೂಡಲೇ ಕಾರ್ಯ ಪ್ರವೃತ್ತಾಗಬೇಕು ಎಂದರು.
ಕಳೆದ 2021 ರಿಂದ 2025ರ ಸೆಪ್ಟೆಂಬರ್ ವರೆಗೂ 18 ವರ್ಷದ ಒಳಗಿನ ಮಕ್ಕಳು ಒಟ್ಟು 299 ಮಕ್ಕಳು ಕಾಣೆಯಾಗಿದ್ದಾರೆ. ಅದರಲ್ಲಿ ಹುಡುಗರು 97 ಹುಡಿಗಿಯರು 202 ಮಕ್ಕಳು ಕಾಣೆಯಾಗಿದ್ದಾರೆ. ಅದರಲ್ಲಿ 287 ಮಕ್ಕಳು ಪತ್ತೆಯಾಗಿದ್ದಾರೆ. ಇನ್ನು 12 ಮಕ್ಕಳು ಪತ್ತೆ ಹಚ್ಚಬೇಕಿದೆ. ಈ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲಾ ಪೊಲೀಸ್ ಠಾಣಾ ಅಧಿಕಾರಿಗಳು ಕೂಡಲೇ ಪತ್ತೆ ಹಚ್ಚಬೇಕು ಎಂದರು.ಸಿಐಡಿ ಘಟಕದ ಸಂಪನ್ಮೂಲ ವ್ಯಕ್ತಿ ರೋಹಿತ್ ತರಬೇತಿ ನೀಡಿದರು. ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ಸುದೀಪ್ ಕುಮಾರ್, ಗ್ರಾಮೀಣ ಪೊಲೀಸ್ ಠಾಣೆ ಪಿಐ ಗುರುರಾಜ್, ಮರಿಯಮ್ಮನಹಳ್ಳಿ ಪೊಲೀಸ್ ಠಾಣೆ ಪಿಎಸ್ಐ ತಾರಾ ಬಾಯಿ, ವಿಜಯಲಕ್ಷ್ಮೀ ಮೈದೂರು, ಸಿದ್ದಪ್ಪ ಬೆಳಗಲ್, ರೇಣುಕಾ ರಾಣಿ, ಶ್ರೀಕಾಂತ್, ಚಿದಾನಂದ ಇತರರಿದ್ದರು.