ಸಾರಾಂಶ
ಕಾರಟಗಿ:
ಹಿಂದುಳಿದ ಮಕ್ಕಳ ಬಗ್ಗೆ ಗಮನ ಹರಿಸಿ ಓದುವ, ಬರೆಯುವ ಬಗ್ಗೆ ಒತ್ತು ನೀಡಿ. ಈಗಿನಿಂದಲೇ ಫಲಿತಾಂಶ ಸುಧಾರಣೆಗೆ ಕ್ರಮವಹಿಸಿ ಎಂದು ಜಿಪಂ ಸಿಇಒ ವರ್ಣಿತ್ ನೇಗಿ ಶಿಕ್ಷಕರಿಗೆ ಸೂಚಿಸಿದ್ದಾರೆ.ತಾಲೂಕಿನ ಸಿದ್ದಾಪುರ ಗ್ರಾಮಕ್ಕೆ ಗುರುವಾರ ಭೇಟಿ ನೀಡಿದ ಅವರು, ವಿವಿಧ ಕಾಮಗಾರಿ ಪರಿಶೀಲಿಸಿದ ಬಳಿಕ ಸರ್ಕಾರಿ ಪ್ರೌಢಶಾಲೆಗೆ ಭೆಟಿ ನೀಡಿ ಮಕ್ಕಳ ಕಲಿಕೆ ಗುಣಮಟ್ಟ ಪರೀಕ್ಷೆ ಮಾಡಿ ಮಾತನಾಡಿದರು.
ಈ ವೇಳೆ ಶಿಕ್ಷಕರನ್ನು ತರಾಟೆಗೆ ತೆಗೆದುಕೊಂಡು ಅವರು ಕೆಲ ಕಟ್ಟುನಿಟ್ಟಿನ ಸೂಚನೆ ನೀಡಿದರು. ಶಾಲಾ ಮಕ್ಕಳಿಗೆ ಇಂದಿಗೂ ಓದಲು, ಬರೆಯಲು ಬರುವುದಿಲ್ಲ. . ಹೀಗಾದರೆ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆ ಹೇಗೆ ಸಾಧ್ಯವೆಂದು ಶಿಕ್ಷಕರನ್ನು ಪ್ರಶ್ನಿಸಿದರು. ಮೊದಲೇ ಪ್ರಯತ್ನ ಮಾಡಿದ್ದರೆ ಮಕ್ಕಳು ಮೊದಲ ಪ್ರಯತ್ನದಲ್ಲಿಯೇ ಯಶಸ್ಸು ಪಡೆಯುತ್ತಿದ್ದರು. ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಒತ್ತು ನೀಡಿ ಓದುವ, ಬರೆಯುವ ಬಗ್ಗೆ ಹೆಚ್ಚಿನ ಗಮನ ನೀಡಬೇಕು. ಈಗಿನಿಂದಲೇ ಶಾಲಾ ಫಲಿತಾಂಶ ಸುಧಾರಣೆಗೆ ಕ್ರಮವಹಿಸಿ ಎಂದು ಸೂಚಿಸಿದ್ದರು.ಇದಕ್ಕೂ ಮೊದಲು ಗ್ರಾಪಂ ಕಚೇರಿಗೆ ಭೇಟಿ ನೀಡಿ, ಗ್ರಾಪಂ ಸಿಬ್ಬಂದಿಯಿಂದ ನಾನಾ ಕಾಮಗಾರಿಗಳ ಕುರಿತು ಮಾಹಿತಿ ಪಡೆದರು. ನಂತರ ಕೂಸಿನ ಮನೆಗೆ ಭೇಟಿ ನೀಡಿ, ಅಲ್ಲಿನ ವಸ್ತುಸ್ಥಿತಿ ವೀಕ್ಷಿಸಿದರು. ಮಕ್ಕಳಿಗೆ ನೀಡಲಾಗುವ ಆಹಾರದ ಕುರಿತು ಮಾಹಿತಿ ಪಡೆದರು. ನಂತರ ಪಕ್ಕದಲ್ಲಿನ ಕಸ್ತೂರಿ ಬಾ ಗಾಂಧಿ ವಿದ್ಯಾಲಯಕ್ಕೆ ಭೇಟಿ ನೀಡಿ, ಮಕ್ಕಳ ಕಲಿಕೆ ಕುರಿತು ಮತ್ತು ಫಲಿತಾಂಶದ ಬಗ್ಗೆ ಶಾಲಾ ಮುಖ್ಯಶಿಕ್ಷಕ ಚಂದ್ರಶೇಖರ ಗಣವಾರಿಯಿಂದ ಮಾಹಿತಿ ಪಡೆದರು. ನಂತರದಲ್ಲಿ ಸರ್ಕಾರಿ ಪ್ರೌಢಶಾಲೆಗೆ ಭೇಟಿ ನೀಡಿ ಫಲಿತಾಂಶ ಸುಧಾರಣೆಗೆ ಸಂಬಂಧಿಸಿದಂತೆ ಶಿಕ್ಷಕರಿಗೆ ಸೂಚನೆ ನೀಡಿದರು. ನಂತರದಲ್ಲಿ ಅಂಗನವಾಡಿಗೆ ಭೇಟಿ ನೀಡಿ, ಮಕ್ಕಳ ಸಂಖ್ಯೆ, ಆಹಾರ ವಿತರಣೆ, ಮೊಟ್ಟೆಯ ಗಾತ್ರ ಸೇರಿ ಇತರೆ ವಿಷಯಗಳ ಕುರಿತು ಮಾಹಿತಿ ಪಡೆದರು.
ನಂತರದಲ್ಲಿ ಸಿದ್ದಾಪುರ ಗ್ರಾಪಂ ಕಚೇರಿ ವ್ಯಾಪ್ತಿಯಲ್ಲಿನ ಜೈ ಕಿಸಾನ್ ತಾಂಡ ಹಾಗೂ ಸಿದ್ದಾಪುರದಲ್ಲಿ ನಿರ್ಮಿಸಿದ ಜೆಜೆಎಂ ಕಾಮಗಾರಿ ವೀಕ್ಷಿಸಿ ಗ್ರಾಪಂ ಸಿಬ್ಬಂದಿಗೆ ಕೆಲ ಸೂಚನೆ ನೀಡಿದರು.ಈ ವೇಳೆ ಗ್ರಾಪಂ ಅಧ್ಯಕ್ಷೆ ಶಿವಗಂಗಾ ಪಂಪಾಪತಿ, ಪಿಡಿಒ ಜ್ಯೋತಿ ರಡ್ಡಿ, ಸಿಬ್ಬಂದಿ ವೀರೇಶ್ ಗಿಂಡಿಮಠ, ಪ್ರಕಾಶ ಸಜ್ಜನ್ ಸೇರಿ ಇತರರಿದ್ದರು.