ಕುಡಿಯುವ ನೀರಿನ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಿ

| Published : Oct 11 2023, 12:45 AM IST

ಸಾರಾಂಶ

ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಈಗಾಗಲೇ ಬಿಡುಗಡೆಯಾಗಿರುವ ₹೧ ಕೋಟಿ ವೆಚ್ಚದ ಕಾಮಗಾರಿಗಳನ್ನು ಆದ್ಯತೆ ಮೇರೆಗೆ ಕೈಗೊಳ್ಳಲು ಶಾಸಕ ಶ್ರೀನಿವಾಸ ಮಾನೆ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗದ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಹಾನಗಲ್ಲ

ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಈಗಾಗಲೇ ಬಿಡುಗಡೆಯಾಗಿರುವ ₹೧ ಕೋಟಿ ವೆಚ್ಚದ ಕಾಮಗಾರಿಗಳನ್ನು ಆದ್ಯತೆ ಮೇರೆಗೆ ಕೈಗೊಳ್ಳಲು ಶಾಸಕ ಶ್ರೀನಿವಾಸ ಮಾನೆ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗದ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಮಳೆ ಇಲ್ಲದೆ ಹಲವೆಡೆ ಕುಡಿಯುವ ನೀರಿನ ಅಭಾವ ಕಂಡು ಬರುವ ಬಹುತೇಕ ಸಾಧ್ಯತೆಗಳಿದ್ದು ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗದ ಅಧಿಕಾರಿಗಳು ಗ್ರಾಪಂ ಅಧಿಕಾರಿಗಳೊಂದಿಗೆ ಸಮಾಲೋಚಿಸಿ ಶೀಘ್ರ ಕಾಮಗಾರಿ ಕೈಕೊಳ್ಳುವಂತೆ ಸೂಚಿಸಿದ್ದಲ್ಲದೆ, ಎಲ್ಲಿಯೂ ಕುಡಿಯುವ ನೀರಿನ ಕೊರತೆಯಾಗದಂತೆ ನಿಗಾ ವಹಿಸಬೇಕು. ಹಿಂದೆ ಇಂತಹ ಬರ ಅಥವಾ ಮಳೆ ಕೊರತೆ ಸಂದರ್ಭದಲ್ಲಿ ಕೊಳವೆ ಭಾವಿಗಳಿಂದ ನೀರು ಪೂರೈಸಲಾಗದೆ ತೊಂದರೆಯಾದ ಸಂದರ್ಭ ಗಮನದಲ್ಲಿಟ್ಟುಕೊಂಡು, ಕೂಡಲೇ ಅಂತಹ ಗ್ರಾಮಗಳನ್ನು ಗುರುತಿಸಿ ನಿಗಾ ವಹಿಸಬೇಕು. ಮತ್ತೆಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆಯೋ ಅಂತಹ ಗ್ರಾಮಗಳಿಗೆ ಅಗತ್ಯವಿದ್ದರೆ ಕೊಳವೆ ಭಾವಿ ಕೊರೆಯಿಸಿ, ದೂರದಿಂದಲಾದರೂ ನೀರು ತಂದು ಪೂರೈಸಲು ಮುಂದಾಗಬೇಕು. ನೀರಿನ ಪೂರೈಕೆಗೆ ವ್ಯತ್ಯಯ ಉಂಟಾಗದಂತೆ ಕಾಳಜಿ ವಹಿಸಿಬೇಕು. ಗ್ರಾಮ ಪಂಚಾಯಿತಿಗಳೊಂದಿಗೆ ಸಮನ್ವಯದಿಂದ ಕೆಲಸ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ತಾಲೂಕಿನಲ್ಲಿ ಮನೆ, ಮನೆಗೆ ಗಂಗೆ ಯೋಜನೆಯ ಪ್ರಗತಿ ಪರಿಶೀಲಿಸಿದ ಶಾಸಕ ಮಾನೆ, ಅಕ್ಕಿಆಲೂರು, ಬೆಳಗಾಲಪೇಟೆ, ಉಪ್ಪುಣಸಿ, ಕೂಡಲ ಮತ್ತು ಆಡೂರು ಗ್ರಾಮಗಳಲ್ಲಿ ಯೋಜನೆಯ ಅನುಷ್ಠಾನ ಪೂರ್ವ ಹಂತದ ಕುರಿತು ಮಾಹಿತಿ ಪಡೆದರು. ಹಂಸಭಾವಿ ಬಹುಗ್ರಾಮ ಕುಡಿಯುವ ನೀರು ಯೋಜನೆಯಡಿ ತಾಲೂಕಿನ ೧೬ ಗ್ರಾಮಗಳು ಒಳಪಟ್ಟಿದ್ದು, ಯೋಜನೆಯ ಪ್ರಗತಿ ವಿವರವನ್ನೂ ಸಭೆಯಲ್ಲಿ ಪಡೆದರು. ಕೆಲ ಗ್ರಾಮಗಳಲ್ಲಿ ಮನೆ, ಮನೆಗೆ ಗಂಗೆ ಯೋಜನೆಯ ಪೈಪಲೈನ್ ಕಾಮಗಾರಿ ಅಳವಡಿಸಲು ರಸ್ತೆ ಅಗೆದು ಹಾಗೆಯೇ ಬಿಡಲಾಗಿದ್ದು, ಸಂಚಾರಕ್ಕೆ ಅಡೆತಡೆ ಉಂಟಾಗಿದೆ. ತಕ್ಷಣವೇ ಸಂಬಂಧಪಟ್ಟ ಗುತ್ತಿಗೆದಾರರಿಗೆ ರಸ್ತೆ ಸರಿಪಡಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಸೂಚನೆ ನೀಡಿದರು.

ಹಾನಗಲ್ಲ ತಾಲೂಕಿನಲ್ಲಿ ಮಹತ್ವಾಕಾಂಕ್ಷೆಯ ಮನೆ, ಮನೆಗೆ ಗಂಗೆ ಯೋಜನೆ ಯಶಸ್ವಿ ಅನುಷ್ಠಾನ ಹಂತದಲ್ಲಿದೆ. ಕೆಲವೇ ಗ್ರಾಮಗಳಲ್ಲಿ ಯೋಜನೆಯ ಅನುಷ್ಠಾನ ಬಾಕಿ ಇದ್ದು, ತ್ವರಿತ ಕ್ರಮಕ್ಕೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಯೋಜನೆ ಅನುಷ್ಠಾನ ಪೂರ್ಣಗೊಂಡ ಬಳಿಕ ನದಿ ನೀರು ಪೂರೈಕೆ ಆರಂಭಗೊಂಡರೆ ನೀರಿನ ಸಮಸ್ಯೆ ಉದ್ಭವಿಸದು. ಕುಡಿಯುವ ನೀರಿಗೆ ಕೊರತೆ ಆಗದಂತೆ ಎಲ್ಲ ಸಿದ್ಧತಾ ಕ್ರಮಕ್ಕೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಮಾನೆ ತಿಳಿಸಿದರು.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿ ಸಿ.ಎಸ್. ನೆಗಳೂರ ಹಾಗೂ ಅಧಿಕಾರಿಗಳು ಈ ಸಂದರ್ಭದಲ್ಲಿದ್ದರು.