ಜಿಲ್ಲೆಯಲ್ಲಿ ಅರಣ್ಯ ನಾಶ ತಡೆಗಟ್ಟಲು ಕ್ರಮ ಕೈಗೊಳ್ಳಿ

| Published : Jan 04 2025, 12:31 AM IST

ಸಾರಾಂಶ

ಸಾಗರ: ಕಳೆದ ಮೂರು ವರ್ಷಗಳಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ೭೪.೫೦ ಕಿ.ಮೀ. ಅಂದರೆ ೧೮೭೦೦ ಎಕರೆ ಅರಣ್ಯ ಪ್ರದೇಶ ನಾಶವಾಗಿದೆ ಎಂದು ಭಾರತ ಸರ್ಕಾರದ ಭಾರತೀಯ ಅರಣ್ಯ ಸಮೀಕ್ಷೆ ವರದಿ ಪ್ರಕಟಿಸಿದೆ. ಈ ವರದಿ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಇನ್ನಷ್ಟು ಸಾವಿರ ಎಕರೆ ಅರಣ್ಯ ನಾಶವಾಗುವುದನ್ನು ತಡೆಗಟ್ಟಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ವೃಕ್ಷಲಕ್ಷ ಆಂದೋಲನ ಮನವಿ ಮಾಡಿದೆ.

ಸಾಗರ: ಕಳೆದ ಮೂರು ವರ್ಷಗಳಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ೭೪.೫೦ ಕಿ.ಮೀ. ಅಂದರೆ ೧೮೭೦೦ ಎಕರೆ ಅರಣ್ಯ ಪ್ರದೇಶ ನಾಶವಾಗಿದೆ ಎಂದು ಭಾರತ ಸರ್ಕಾರದ ಭಾರತೀಯ ಅರಣ್ಯ ಸಮೀಕ್ಷೆ ವರದಿ ಪ್ರಕಟಿಸಿದೆ. ಈ ವರದಿ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಇನ್ನಷ್ಟು ಸಾವಿರ ಎಕರೆ ಅರಣ್ಯ ನಾಶವಾಗುವುದನ್ನು ತಡೆಗಟ್ಟಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ವೃಕ್ಷಲಕ್ಷ ಆಂದೋಲನ ಮನವಿ ಮಾಡಿದೆ.

ಈ ಕುರಿತು ಸ್ಥಳಕ್ಕೆ ಭೇಟಿ ನೀಡಿ, ಸಾಗರ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಮೂಲಕ ಅರಣ್ಯ ಮತ್ತು ಪರಿಸರ ಖಾತೆ ಸಚಿವ ಈಶ್ವರ ಖಂಡ್ರೆಗೆ ಮನವಿ ಸಲ್ಲಿಸಿರುವ ವೃಕ್ಷಲಕ್ಷ ಆಂದೋಲನ ತಜ್ಞರ ತಂಡ, ಜಿಲ್ಲೆಯಲ್ಲಿ ಕಂದಾಯ ಅರಣ್ಯಗಳು ವಿನಾಶದ ಅಂಚಿನಲ್ಲಿವೆ. ಸಾಗರ, ಹೊಸನಗರ, ತೀರ್ಥಹಳ್ಳಿ, ಸೊರಬ ತಾಲೂಕುಗಳಲ್ಲಿ ಕಾನು ಬೆಟ್ಟ ಸೊಪ್ಪಿಗೆ ಮುಫತ್ತು, ಗೋಚರ, ಕಾಫಿಕಾನು ಇನ್ನಿತರೆ ಹೆಸರಿನಲ್ಲಿ ಒಂದು ಲಕ್ಷ ಎಕರೆಗಿಂತ ಹೆಚ್ಚು ಕಂದಾಯ ಅರಣ್ಯಗಳಿವೆ. ಪರಿಭಾವಿತ ಅರಣ್ಯ ಪಟ್ಟಿಯಲ್ಲಿ ಇವುಗಳು ಅರ್ಧಭಾಗ ಸೇರಿವೆ. ಪಾರಂಪರಿಕವಾಗಿ ಹಳ್ಳಿಗಳ ಜನರೇ ಈ ಕಾನು ಅರಣ್ಯಗಳ ನಿರ್ವಹಣೆ ಮಾಡುತ್ತಿದ್ದರು. ಆದರೆ ಕಳೆದ ೩೦ ವರ್ಷಗಳಲ್ಲಿ ಕೃಷಿ ಒತ್ತುವರಿ ಹೆಚ್ಚಾಗಿ ಕಂದಾಯ ಅರಣ್ಯಗಳು ವಿನಾಶದ ಹಂತಕ್ಕೆ ಬಂದಿವೆ ಎಂದು ಮನವಿಯಲ್ಲಿ ತಿಳಿಸಲಾಗಿದೆ. ಅರಣ್ಯ ಇಲಾಖೆ ೨೦೧೦ರಿಂದ ೨೦೧೩ರವರೆಗೆ ಕಾನು ಸಂರಕ್ಷಣೆ ಮತ್ತು ಅಭಿವೃದ್ಧಿ ಯೋಜನೆ ಜಾರಿ ಮಾಡಿತ್ತು. ಸುಮಾರು ೧೨೦ ಹಳ್ಳಿಗಳ ೨೦ಸಾವಿರ ಎಕರೆ ಕಂದಾಯ ಅರಣ್ಯಗಳಿಗೆ ರಕ್ಷಣಾ ಕವಚ ಸಿಕ್ಕಿತ್ತು. ಗ್ರಾಮ ಜನರ ಸಹಕಾರವೂ ಇದಕ್ಕೆ ದೊರಕಿತ್ತು. ೨೦೧೫ರ ನಂತರ ಕಾನು ಅರಣ್ಯ ಅಭಿವೃದ್ಧಿ ಯೋಜನೆ ಹೆಸರಿನಲ್ಲಿ ಕಾನು ಅರಣ್ಯ ನಾಶ ಹೆಚ್ಚಾಗುತ್ತಾ ಬಂದಿದೆ. ಕಳೆದ ಐದು ವರ್ಷಗಳಲ್ಲಿ ವೃಕ್ಷಲಕ್ಷ ಆಂದೋಲನದ ಮೂಲಕ ಕಂದಾಯ ಅರಣ್ಯ ರಕ್ಷಣೆಗೆ ಪುನಃ ಪುನಃ ಮನವಿ ಮಾಡಿದರೂ, ರಾಜ್ಯ ಅರಣ್ಯ ಇಲಾಖೆ ಕಾನುಭೂಮಿ ರಕ್ಷಣೆಗೆ ಮುಂದಾಗಲಿಲ್ಲ. ಹಂತಹಂತವಾಗಿ ಕಾಡಿನ ನಾಶ ಹೆಚ್ಚುತ್ತಿದೆ ಎಂದು ಆತಂಕ ವ್ಯಕ್ತಪಡಿಸಲಾಗಿದೆ. ಕಂದಾಯ ಇಲಾಖೆಯವರು ಕಾನು ಅರಣ್ಯ ಭೂಮಿ ರಕ್ಷಣೆಗೆ ಸಹಕಾರ ನೀಡುತ್ತಿಲ್ಲ ಎಂದು ಅರಣ್ಯ ಇಲಾಖೆ ಹೇಳುತ್ತಿದೆ. ಕಂದಾಯ ಇಲಾಖೆ ಅರಣ್ಯ ಇಲಾಖೆ ಸಹಕಾರ ನೀಡುತ್ತಿಲ್ಲ ಎನ್ನುತ್ತಿದೆ. ಒಟ್ಟಾರೆ ಇಲಾಖೆಗಳ ಸಹಭಾಗಿತ್ವ ಕೊರತೆಯಿಂದ ಅರಣ್ಯ ನಾಶ ಹೆಚ್ಚಾಗುತ್ತಿದೆ. ಪ್ರತಿವರ್ಷ ೧೦ ಕೋಟಿ ರು. ಕಾನು ಅರಣ್ಯ ಯೋಜನೆಗೆ ನೀಡಬೇಕು. ಮುಂದಿನ ಮೂರು ವರ್ಷಗಳಲ್ಲಿ ೩೦ಸಾವಿರ ಎಕರೆ ಅರಣ್ಯ ರಕ್ಷಣೆ ಸಾಧ್ಯವಾಗಲಿದೆ. ಇದರ ಜೊತೆಗೆ ೬೦ಕೋಟಿಗೂ ಹೆಚ್ಚು ಗಿಡಮರ ರಕ್ಷಣೆ ಮಾಡುವ ಅಕವಾಶವಿದೆ ಎಂದು ತಿಳಿಸಲಾಗಿದೆ.ಕಾನು ಅರಣ್ಯ ಸಂರಕ್ಷಣೆಗೆ ಕಂದಾಯ ಮತ್ತು ಅರಣ್ಯ ಇಲಾಖೆ ಕಾರ್ಯದರ್ಶಿಗಳು ಜಂಟಿ ಸಭೆ ನಡೆಸಿ ಸ್ಥಳಭೇಟಿ ಮಾಡಬೇಕು. ೧೧೦ ಹಳ್ಳಿಗಳಲ್ಲಿ ಗ್ರಾಮ ಅರಣ್ಯ ಸಮಿತಿ ರಚಿಸಬೇಕು. ಪಂಚಾಯತ್ ಜೀವ ವೈವಿಧ್ಯ ಸಮಿತಿಗಳಿಗೆ ಜೀವ ತುಂಬಬೇಕು. ಜಿಲ್ಲಾ ಸಾಮಾಜಿಕ ಅರಣ್ಯ ವಿಭಾಗವನ್ನು ಪುನಶ್ಚೇತನಗೊಳಿಸಬೇಕು. ಜಿಲ್ಲಾ ಸಾಮಾಜಿಕ ಅರಣ್ಯ ವಿಭಾಗ ಪುನರ್ ಕಾರ್ಯನಿರ್ವಹಿಸಲು ಯೋಜನೆ ರೂಪಿಸಬೇಕು. ಎಂಪಿಎಂ ಮತ್ತು ಕೆಪಿಸಿ ಬಳಿ ಇರುವ ಸಾವಿರಾರು ಎಕರೆ ಅರಣ್ಯಭೂಮಿ ಅನಾಥವಾಗಿದೆ. ಇದನ್ನು ರಕ್ಷಣೆ ಮಾಡಬೇಕು. ಎಂಪಿಎಂ ಬಳಿ ೭೦ಸಾವಿರ ಎಕರೆ ಕಂದಾಯ ಅರಣ್ಯಭೂಮಿ ಇದೆ. ಕಳೆದ ಆರು ವರ್ಷಗಳಿಂದ ಎಂಪಿಎಂ ಸಕ್ರಿಯವಾಗಿಲ್ಲ. ಅದಕ್ಕೆ ಸಂಬಂಧಿಸಿದ ಅರಣ್ಯಭೂಮಿ ಬಗ್ಗೆ ಗಮನ ಹರಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.ಪಶ್ಚಿಮಘಟ್ಟದ ಅರಣ್ಯಗಳ ರಕ್ಷಣೆ ಬಗ್ಗೆ ವಿಧಾನಸಬಾ ಅಧಿವೇಶನದಲ್ಲಿ ಒಂದು ದಿನ ಸಮಯ ಮೀಸಲಿಡಬೇಕು. ಅರಣ್ಯ ಭವನದ ಉನ್ನತ ಅಧಿಕಾರಿಗಳಿಗೆ ಶಿವಮೊಗ್ಗ ಸೇರಿದಂತೆ ಪಶ್ಚಿಮಘಟ್ಟದ ಸೂಕ್ಷ್ಮ ಅರಣ್ಯ ವಿಭಾಗಗಳ ರಕ್ಷಣಾ ಜವಾಬ್ದಾರಿ ನೀಡಬೇಕು. ೨೦೨೫-೨೬ರಲ್ಲಿ ಹಸಿರು ಬಜೆಟ್ ಮಂಡಿಸಿ ಕಾನು ಅರಣ್ಯ ಸಂರಕ್ಷಣಾ ಅಭಿವೃದ್ಧಿ ಯೋಜನೆ ಜಾರಿಗೊಳಿಸಬೇಕು ಎಂದು ಆಗ್ರಹಿಸಿಲಾಗಿದೆ.

ಈ ಸಂದರ್ಭದಲ್ಲಿ ಅನಂತ ಹೆಗಡೆ ಅಶೀಸರ, ಪ್ರೊ.ಬಿ.ಎಂ.ಕುಮಾರಸ್ವಾಮಿ, ಡಾ.ಬಾಲಚಂದ್ರ ಸಾಯಿಮನೆ, ಡಾ.ಕೇಶವ ಕೊರ್ಸೆ, ಡಾ.ಟಿ.ವಿ.ರಾಮಚಂದ, ಡಾ.ಪ್ರಕಾಶ್ ಮೇಸ್ತ, ಕೆ.ವೆಂಕಟೇಶ್, ಶ್ರೀಪಾದ ಬಿಚ್ಚುಗತ್ತಿ, ಎಂ.ಆರ್.ಪಾಟೀಲ್ ಮತ್ತಿತರರಿದ್ದರು.