ಜಿಲ್ಲೆಯಲ್ಲಿ ಕಾಡುಪ್ರಾಣಿಗಳು ಮಾನವನ ಮೇಲೆ ದಾಳಿ ಮಾಡುವಂತಹ ಪ್ರಕರಣಗಳು ಮರುಕಳಿಸದಂತೆ ಎಲ್ಲಾ ಮುಂಜಾಗ್ರತ ಕ್ರಮಗಳನ್ನು ಕಟ್ಟುನಿಟ್ಟಾಗಿ ತೆಗೆದುಕೊಳ್ಳುವಂತೆ ಪಶುಸಂಗೋಪನೆ, ರೇಷ್ಮೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಜಿಲ್ಲೆಯಲ್ಲಿ ಕಾಡುಪ್ರಾಣಿಗಳು ಮಾನವನ ಮೇಲೆ ದಾಳಿ ಮಾಡುವಂತಹ ಪ್ರಕರಣಗಳು ಮರುಕಳಿಸದಂತೆ ಎಲ್ಲಾ ಮುಂಜಾಗ್ರತ ಕ್ರಮಗಳನ್ನು ಕಟ್ಟುನಿಟ್ಟಾಗಿ ತೆಗೆದುಕೊಳ್ಳುವಂತೆ ಪಶುಸಂಗೋಪನೆ, ರೇಷ್ಮೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್ ಅಧಿಕಾರಿಗಳಿಗೆ ತಾಕೀತು ಮಾಡಿದರು.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇತ್ತೀಚೆಗೆ ತಾಳುಬೆಟ್ಟದಿಂದ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳುವ ಕಾಲ್ನಡಿಗೆ ಮಾರ್ಗದಲ್ಲಿ ಯುವಕನೋರ್ವನ ಮೇಲೆ ಚಿರತೆ ದಾಳಿ ಮಾಡಿ ಮರಣವನ್ನಪ್ಪಿದ ಹಿನ್ನೆಲೆ ಹಾಗೂ ಮಾನವ ಪ್ರಾಣಿ ಸಂಘರ್ಷದ ಹಿನ್ನೆಲೆಯಲ್ಲಿ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿ ಮಾತನಾಡಿದರು.
ಜಿಲ್ಲೆಯಲ್ಲಿ ಮಾನವ ಪ್ರಾಣಿ ಸಂಘರ್ಷದ ಪ್ರಕರಣಗಳು ಮರುಕಳಿಸುತ್ತಲೇ ಇವೆ. ಜನರಿಗೆ ಕಾಡುಪ್ರಾಣಿಗಳಿಂದ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ಅರಣ್ಯ ಅಧಿಕಾರಿಗಳ ಮೇಲಿದೆ. ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳುತ್ತಿದ್ದ ಭಕ್ತಾಧಿಯೊಬ್ಬರ ಮೇಲೆ ಚಿರತೆ ದಾಳಿಯಂತಹ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಅರಣ್ಯ ಅಧಿಕಾರಿಗಳು ಪರಿಗಣಿಸಬೇಕು. ಇನ್ನು ಮುಂದೆ ಇಂತಹ ಘಟನೆಗಳು ನಡೆಯದಂತೆ ಸಕಲ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಬೇಕು ಎಂದು ಉಸ್ತುವಾರಿ ಸಚಿವರು ಸೂಚಿಸಿದರು.ಕಾಲ್ನಡಿಗೆಯಲ್ಲಿ ತೆರಳುವ ಭಕ್ತಾಧಿಗಳಿಗೆ ಯಾವುದೇ ತೊಂದರೆಯಾಗದಂತೆ ಗಸ್ತು ಹೆಚ್ಚಳ ಮಾಡಬೇಕು. ಬೇಲಿ ಅಳವಡಿಕೆಯಂತಹ ಕ್ರಮಗಳಿಗೆ ಮುಂದಾಗಬೇಕು. ವನ್ಯಜೀವಿಗಳ ಹಾವಳಿ ತಪ್ಪಿಸಲು ಅತ್ಯಾಧುನಿಕ ಸಲಕರಣೆ ವ್ಯವಸ್ಥೆಯನ್ನು ಮಾಡಿಕೊಳ್ಳಬೇಕು. ಇದಕ್ಕೆ ಎಲ್ಲ ನೆರವು ನೀಡಲಾಗುವುದು. ಭಕ್ತಾಧಿಗಳ ರಕ್ಷಣೆಗೆ ಅವಶ್ಯವಿರುವ ಎಲ್ಲ ತುರ್ತು ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ತಿಳಿಸಿದರು.
ಮಲೆ ಮಹದೇಶ್ವರ ಬೆಟ್ಟಕ್ಕೆ ಸಾಕಷ್ಟು ಭಕ್ತಾಧಿಗಳು ಕಾಲ್ನಡಿಗೆಯಲ್ಲಿ ಬರುವುದು ಸಂಪ್ರಾದಾಯವಾಗಿದೆ. ಇದನ್ನು ಗಮನಿಸಬೇಕಿದೆ. ಕಾಲ್ನಡಿಗೆಯಲ್ಲಿ ತೆರಳಲು ಸಮಯ ನಿಗದಿ ಮಾಡುವ ಸಂಬಂಧ ಸೂಕ್ತ ನಿರ್ಧಾರ ಕೈಗೊಳ್ಳಬೇಕಿದೆ. ಯಾವುದೇ ಅನಾಹುತಗಳು ಆಗದಂತೆ ಜನರಿಗೆ ಜಾಗೃತಿ ಗೊಳಿಸುವ ಕೆಲಸವನ್ನು ಅಧಿಕಾರಿಗಳು ಮಾಡಬೇಕು. ಭಕ್ತರ ಹಾಗೂ ಜನರ ರಕ್ಷಣೆ ಆದ್ಯತೆಯಾಗಬೇಕು. ಈ ನಿಟ್ಟಿನಲ್ಲಿ ಅರಣ್ಯ ಅಧಿಕಾರಿಗಳು ಹೊಣೆಗಾರಿಕೆಯಿಂದ ಕೆಲಸ ಮಾಡಬೇಕು ಎಂದು ತಿಳಿಸಿದರು.ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬಿಶ್ವಜಿತ್ ಮಿಶ್ರಾ ಮಾತನಾಡಿ, ಗಸ್ತು ನಿಗಾ ಕಾರ್ಯವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಮಾಡಲಾಗುವುದು. ವನ್ಯಜೀವಿ ಮಾನವ ಸಂಘರ್ಷ ತಪ್ಪಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ಜಿಲ್ಲಾಧಿಕಾರಿ ಶ್ರೀರೂಪ, ಚಾಮರಾಜನಗರ ವೃತ್ತದ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಮಾಲತಿ ಪ್ರಿಯ ಅವರು ಮಾತನಾಡಿದರು.ಇದೇ ವೇಳೆ ಚಿರತೆ ದಾಳಿಯಿಂದ ಮೃತಪಟ್ಟ ಯುವಕನ ಪೋಷಕರಿಗೆ 20 ಲಕ್ಷ ರು. ಪರಿಹಾರ ಮೊತ್ತದ ಪೈಕಿ ಮೊದಲ 5 ಲಕ್ಷ ರು. ಗಳ ಚೆಕ್ ಅನ್ನು ಸಚಿವರು ನೀಡಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ. ಎಂ. ಮುತ್ತುರಾಜ್, ಅರಣ್ಯ ಸಂರಕ್ಷಣಾಧಿಕಾರಿಗಳಾದ ಡಾ. ಭಾಸ್ಕರ್, ಸುರೇಂದ್ರ, ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎನ್. ಶಶಿಧರ್, ತಹಶೀಲ್ದಾರರಾದ ಚೈತ್ರ, ಬಸವರಾಜು, ಗಿರಿಜ, ತನ್ಮಯ್ ಉಪಸ್ಥಿತರಿದ್ದರು.