ಕನ್ನಡಪ್ರಭ ವಾರ್ತೆ ಮೂಡಲಗಿ ಅರಭಾವಿ ಮತಕ್ಷೇತ್ರದಲ್ಲಿ ನಡೆಯುತ್ತಿರುವ ಅಕ್ರಮ ಮದ್ಯ ಸಾರಾಯಿಯನ್ನು ಕೂಡಲೇ ನಿಷೇಧಿಸಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಕೊಳ್ಳುವಂತೆ ಶಾಸಕ ಬಾಲಚಂದ್ರ ಜಾರಕಿಹೊಳಿಯವರು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು.

ಕನ್ನಡಪ್ರಭ ವಾರ್ತೆ ಮೂಡಲಗಿ

ಅರಭಾವಿ ಮತಕ್ಷೇತ್ರದಲ್ಲಿ ನಡೆಯುತ್ತಿರುವ ಅಕ್ರಮ ಮದ್ಯ ಸಾರಾಯಿಯನ್ನು ಕೂಡಲೇ ನಿಷೇಧಿಸಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಕೊಳ್ಳುವಂತೆ ಶಾಸಕ ಬಾಲಚಂದ್ರ ಜಾರಕಿಹೊಳಿಯವರು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು.ತಾಲೂಕಿನ ಯಾದವಾಡ ಗ್ರಾಮದಲ್ಲಿ ಸೋಮವಾರ ನಡೆಸಿದ ಮೂಡಲಗಿ ಮತ್ತು ಗೋಕಾಕ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಾರ್ವಜನಿಕರು ಪ್ರತಿಭಟಿಸುವ ಮುನ್ನವೇ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲು ಸೂಚನೆ ನೀಡಿದರು.ಮತಕ್ಷೇತ್ರದಲ್ಲಿ ಹಲವು ವರ್ಷಗಳಿಂದ ಅಕ್ರಮ ಸಾರಾಯಿ ದಂಧೆ ನಡೆಯುತ್ತಿದೆ. ಕಾನೂನು ವಿರೋಧಿ ಚಟುವಟಿಕೆಗಳನ್ನು ಮಾಡುತ್ತಿರುವ ಅಂತಹ ಮಾರಾಟಗಾರರ ವಿರುದ್ಧ ಯಾವುದೇ ಮುಲಾಜಿಲ್ಲದೇ ನಿರ್ದಾಕ್ಷಿಣ್ಯ ಕ್ರಮಗಳನ್ನು ಕೈಗೊಳ್ಳುವಂತೆ ಖಡಕ್ ಸೂಚನೆಗಳನ್ನು ನೀಡಿದರು.ಸಾರಾಯಿ ದಂಧೆಯಿಂದಾಗಿ ಹಲವು ಕುಟುಂಬಗಳು ಬೀದಿಗೆ ಬರುತ್ತಿವೆ. ಇದರ ಬಗ್ಗೆ ಮಹಿಳೆಯರು ತಮ್ಮ ಗಮನಕ್ಕೆ ತಂದಿದ್ದಾರೆ. ನಮ್ಮ ಕ್ಷೇತ್ರದಲ್ಲಿ ಇಂತಹ ಕಾನೂನು ವಿರೋಧಿ ಚಟುವಟಿಕೆಗಳು ನಡೆಯಬಾರದು. ಯಾರ ಪ್ರಭಾವಕ್ಕೂ ಮಣೆ ಹಾಕದೇ ಸಾರ್ವಜನಿಕರ ದೂರಿನನ್ವಯ ಅಗತ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಲು ಶಾಸಕರು ಸೂಚಿಸಿದರು.ಬರುವ ಬೇಸಿಗೆಯಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರಿನ ತೊಂದರೆಯಾಗದಂತೆ ಈಗಿನಿಂದಲೇ ಸೂಕ್ತವಾದ ಕ್ರಮಗಳನ್ನು ಕೈಕೊಳ್ಳಬೇಕು. ಸ್ಥಳೀಯವಾಗಿ ಗ್ರಾಮ ಪಂಚಾಯತಿ ಮಟ್ಟದ ಅಧಿಕಾರಿಗಳು ಈ ಬಗ್ಗೆ ಗಮನಹರಿಸಬೇಕು. ಎಲ್ಲೆಲ್ಲಿ ನೀರಿನ ಸಮಸ್ಯೆಗಳು ಇವೆಯೋ ಅವುಗಳನ್ನು ಗುರುತಿಸಿ ತಹಸೀಲ್ದಾರ್‌ ಅವರಿಗೆ ವರದಿ ಸಲ್ಲಿಸಬೇಕು ಎಂದು ಅವರು ಸೂಚನೆಗಳನ್ನು ನೀಡಿದರು.ಅರ್ಹ ಬಡ ಕುಟುಂಬಗಳ ಬದಲಾಗಿ ಆಹಾರ ಪಡಿತರ ಚೀಟಿಗಳು ಸಿರಿವಂತರ ಪಾಲಾಗುತ್ತಿವೆ. ಇದರಿಂದ ಅರ್ಹ ಫಲಾನುಭವಿಗಳಿಗೆ ಅನ್ಯಾಯವಾಗುತ್ತಿವೆ. ಅಧಿಕಾರಿಗಳು ಈ ಬಗ್ಗೆ ಗಂಭೀರವಾಗಿ ಪರಿಗಣಿಸಿ ಬಡ ಕುಟುಂಬಗಳಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು. ಹೊಸ ಪಡಿತರ ಚೀಟಿಗಳಲ್ಲಿ ಯಾವ ಕಾರಣಕ್ಕೂ ಅರ್ಹ ಬಡ ಕುಟುಂಬಗಳಿಗೆ ಮೋಸವಾಗಲು ಬಿಡುವುದಿಲ್ಲ ಎಂದು ಅಧಿಕಾರಿಗಳ ವಿರುದ್ಧ ಹರಿಹಾಯ್ದರು.ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರು ನಿಗದಿತ ಸಮಯಕ್ಕೆ ಹಾಜರಾಗುತ್ತಿಲ್ಲ. ಕುಂಟು ನೆಪಗಳನ್ನು ಒಡ್ಡಿ ಆಸ್ಪತ್ರೆಗಳಿಂದ ತಪ್ಪಿಸಿಕೊಳ್ಳುವ ಸಂಚನ್ನು ವೈದ್ಯಾಧಿಕಾರಿಗಳನ್ನು ಮಾಡುತ್ತಿದ್ದಾರೆ. ಈ ಬಗ್ಗೆ ಸಾರ್ವಜನಿಕರಿಂದ ವ್ಯಾಪಕವಾದ ದೂರುಗಳು ಬರುತ್ತಿವೆ. ಇದರಿಂದ ಬಡ ರೋಗಿಗಳ ಚಿಕಿತ್ಸೆಗಾಗಿ ಅಡಚಣೆಗಳು ಆಗುತ್ತಿವೆ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಗೈರು ಹಾಜರಾಗುವ ವೈದ್ಯರ ವಿರುದ್ಧ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದರು.ರೈತರಿಗೆ ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡಬೇಕು. ರೈತರು, ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ವಿದ್ಯುತ್ ಪೂರೈಕೆ ಮಾಡಲು ಅಧಿಕಾರಿಗಳು ಮುಂದಾಗುವಂತೆ ಅವರು ಸೂಚನೆಗಳನ್ನು ನೀಡಿದರು.ಮೂಡಲಗಿ ತಹಸೀಲ್ದಾರ್‌ ಶ್ರೀಶೈಲ ಗುಡುಮೆ, ಗೋಕಾಕ ತಹಸೀಲ್ದಾರ್‌ ಮೋಹನ್ ಭಸ್ಮೆ, ಮೂಡಲಗಿ ತಾಪಂ ಇಒ ಫಕೀರಪ್ಪ ಚಿನ್ನನವರ, ಗೋಕಾಕ ತಾಪಂ ಇಒ ಪರಶುರಾಮ ಗಸ್ತೆ, ಮೂಡಲಗಿ ಕೆಡಿಸಿ ನಾಮ ನಿರ್ದೇಶಿತ ಸದಸ್ಯರಾದ ಪರ್ವತಗೌಡ ಪಾಟೀಲ, ಕಲ್ಲಪ್ಪ ಲಕ್ಕಾರ, ಮೂಡಲಗಿ- ಗೋಕಾಕ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು, ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಆಡಳಿತ ಅಧಿಕಾರಿಗಳು, ಅಭಿಯಂತರರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.