ಕೈಗಾರಿಕಾ ಪ್ರದೇಶಕ್ಕೆ ನೀರು ಬಿಡಲು ಕ್ರಮ ವಹಿಸಿ: ಡಿಸಿ ಚಂದ್ರಶೇಖರ ನಾಯಕ

| Published : Jan 19 2024, 01:48 AM IST

ಕೈಗಾರಿಕಾ ಪ್ರದೇಶಕ್ಕೆ ನೀರು ಬಿಡಲು ಕ್ರಮ ವಹಿಸಿ: ಡಿಸಿ ಚಂದ್ರಶೇಖರ ನಾಯಕ
Share this Article
  • FB
  • TW
  • Linkdin
  • Email

ಸಾರಾಂಶ

ರಾಯಚೂರು ಗ್ರೋಥ್ ಸೆಂಟರ್‌ ಜಮೀನು ಒತ್ತುವರಿ ಮಾಡಿಕೊಂಡವರಿಗೆ ನೋಟೀಸ್ ನೀಡುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದರು. ರಾಯಚೂರಿನ ಡಿಸಿ ಕಚೇರಿ ಸಭಾಂಗಣದಲ್ಲಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ವತಿಯಿಂದ ಜಿಲ್ಲಾಮಟ್ಟದ ಏಕಗವಾಕ್ಷಿ ಸಭೆ ನಡೆಯಿತು.

ಕನ್ನಡಪ್ರಭ ವಾರ್ತೆ ರಾಯಚೂರು

ರಾಯಚೂರು ಮತ್ತು ದೇವಸುಗೂರು ಕೈಗಾರಿಕಾ ಪ್ರದೇಶಗಳಿಗೆ ನೀರು ಸರಬರಾಜು ಮಾಡಲು ಮಂಡಳಿಯಿಂದ ಪೈಪ್‌ಲೈನ್ ಅಳವಡಿಕೆ ಕಾರ್ಯ ಪೂರ್ಣಗೊಂಡಿದ್ದು, ನೀರಿನ ಸಂಪರ್ಕ ಒದಗಿಸುವಂತೆ ಹಾಗೂ ರಾಯಚೂರು ಗ್ರೋಥ್ ಸೆಂಟರ್‌ನಲ್ಲಿರುವ ಜಮೀನನ್ನು ಒತ್ತುವರಿ ಮಾಡಿಕೊಂಡವರಿಗೆ ನೋಟಿಸ್ ನೀಡುವಂತೆ ಜಿಲ್ಲಾಧಿಕಾರಿ ಎಲ್.ಚಂದ್ರಶೇಖರ ನಾಯಕ ಸಂಬಂಧಪಟ್ಟ ಅಧಿಕಾರಿಗೆ ಸೂಚನೆ ನೀಡಿದರು.

ಸ್ಥಳೀಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ವತಿಯಿಂದ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಏಕಗವಾಕ್ಷಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೆಐಎಡಿಬಿಯಿಂದ ನಿರ್ಮಿಸಲಾದ ವಸತಿ ಗೃಹ ಹಾಗೂ ನಿವೇಶನಗಳಿಗೆ ಪೂರ್ಣ ಹಣ ಸಂದಾಯ ಮಾಡಿದವರಿಗೆ ಹಂಚಿಕೆ ಪತ್ರಗಳನ್ನು ನೀಡಬೇಕು. ಹಣ ಸಂದಾಯ ಮಾಡದವರಿಗೆ ಪೂರ್ತಿ ಹಣ ಸಂದಾಯ ಮಾಡಿದ ನಂತರ ಹಂಚಿಕೆ ಪತ್ರಗಳನ್ನು ನೀಡಲು ಕ್ರಮ ಕೈಗೊಳ್ಳುವಂತೆ ತಿಳಿಸಿದರು.

ಜಿಲ್ಲೆಯಲ್ಲಿ ಮೆಗಾ ಟೆಕ್ಸ್‌ಟೈಲ್‌ ಪಾರ್ಕ್ ಸ್ಥಾಪನೆಗಾಗಿ ಇಲ್ಲಿಯವರೆಗೆ 690 ಎಕರೆ 13 ಗುಂಟೆ ಜಮೀನನ್ನು ಸ್ವಾಧೀನಪಡಿಸಿಕೊಳ್ಳಲು 28/2 ನೋಟೀಸ್ ನೀಡಲಾಗಿದೆ. ಜೆಎಂಸಿ ಕಾರ್ಯವನ್ನು ಸರ್ವೆ ಇಲಾಖೆಯ ಮುಖಾಂತರ ಬೇಗನೆ ಪ್ರಾರಂಭಿಸಬೇಕು. ಜವಳಿ ಪಾರ್ಕ್ ಸ್ಥಾಪನೆಗಾಗಿ ಜಿಲ್ಲೆಯಲ್ಲಿ 1000 ಎಕರೆ ಭೂಮಿ ಸೇರಿದಂತೆ ಅಗತ್ಯತೆಯ ವಿದ್ಯುತ್ ಹಾಗೂ ನೀರಿನ ಸರಬರಾಜಿನ ಕುರಿತು ಆದಷ್ಟು ತ್ವರಿತವಾಗಿ ಪ್ರಸ್ತಾವನೆ ಕಳುಹಿಸುವಂತೆ ತಿಳಿಸಿದರು.

ಹೊಸ ಕೈಗಾರಿಕಾ ಪ್ರದೇಶದ ನಿರ್ಮಾಣಕ್ಕಾಗಿ ಜೆಎಮ್‌ಸಿ ಕಾರ್ಯವು ಪ್ರಗತಿಯಲ್ಲಿದ್ದು, ಹೊಸ ಕೈಗಾರಿಕಾ ಪ್ರದೇಶಕ್ಕಾಗಿ ಬೇಕಾದ ಅಗತ್ಯ ದಾಖಲೆಗಳನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ತಿಳಿಸಿದರು.

ಕೆಐಎಡಿಬಿಯಿಂದ ನಿರ್ಮಿಸಲಾದ ವಸತಿ ಗೃಹ ಮತ್ತು ನಿವೇಶನ ಹಂಚಿಕೆ ವಿಷಯಕ್ಕೆ ಸಂಬಂಧಿಸಿದಂತೆ ಒಟ್ಟು 173 ಅರ್ಜಿಗಳು ಸ್ವೀಕೃತವಾಗಿದೆ. ಇದರಲ್ಲಿ 24 ಅರ್ಜಿದಾರರು ಶೇ.20% ಮತ್ತು 49 ಜನರು ಶೇ.100% ರಷ್ಟು ಹಣವನ್ನು ಬರಿಸಿದ ಅರ್ಜಿದಾರರಿಗೆ ಹಂಚಿಕೆ ಪತ್ರ ನೀಡಲಾಗಿದೆ. ನಿವೇಶನ ಹಂಚಿಕೆಯಲ್ಲಿ ಪ್ರಗತಿ ಸಾಧಿಸುವಂತೆ ಕ್ರಮ ಕೈಗೊಳ್ಳಬೇಕು ಎಂದರು.

ಕೈಗಾರಿಕೆ ಪ್ರದೇಶದಲ್ಲಿ ಕೈಗಾರಿಕೆಯನ್ನು ಸ್ಥಾಪಿಸಲು ಅರ್ಜಿ ಸಲ್ಲಿಸಿದವರಿಗೆ ಕೈಗಾರಿಕಾ ಪ್ರದೇಶದಲ್ಲಿ ಜಾಗ ನೀಡಲು ಎಲ್ಲಾ ದಾಖಲೆಗಳನ್ನು ಪರಿಶೀಲನೆ ಮಾಡಬೇಕು. ಅರ್ಜಿ ಸಲ್ಲಿಸಿ ಹಣ ಭರಿಸಿದವರಿಗೆ ಜಾಗ ನೀಡಲು ಯಾವುದೇ ವಿಳಂಬವಾಗಬಾರದು ಎಂದು ಸಂಬAಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ರೈಸ್ ಕ್ಲಸ್ಟರ್ ಸ್ಥಾಪನೆ ಸರ್ಕಾರದ ಯೋಜನೆಗಳ ಭಾಗವಾಗಿದ್ದು, ಇದಕ್ಕಾಗಿ 15 ರಿಂದ 20 ಎಕರೆ ಜಮೀನನ್ನು ಹಂಚಿಕೆ ಮಾಡುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ. 10 ಎಕರೆ ಸ್ಥಳವನ್ನು ಬೇಗನೆ ಹಂಚಿಕೆ ಮಾಡುವ ಸಲುವಾಗಿ ಪರಿಶೀಲನೆ ನಡೆಸಲಾಗುವುದು ಮತ್ತು ಆದಷ್ಟು ಬೇಗ ಹಂಚಿಕೆ ಮಾಡಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ಜಿಪಂ ಸಿಇಒ ರಾಹುಲ್ ತುಕಾರಾಮ ಪಾಂಡ್ವೆ, ಜಿಲ್ಲಾ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಜಂಟಿ ನಿರ್ದೇಶಕ ಮನಿಕ್.ವಿ ರಘೂಜಿ, ಉಪನಿರ್ದೇಶಕ ಬಸವರಾಜ ಯಂಕಂಚಿ, ಸಹಾಯಕ ನಿರ್ದೇಶಕ ಲಕ್ಷ್ಮೀಕಾಂತ ಕುಲಕರ್ಣಿ, ಕೈಗಾರಿಕಾ ಮತ್ತು ವಾಣಿಜ್ಯ ಉದ್ಯಮಿಗಳಾದ ಸಾವಿತ್ರಿ ಪುರುಷೋತ್ತಮ, ತ್ರಿವಿಕ್ರಮ ಜೋಷಿ, ಲಕ್ಷ್ಮೀರೆಡ್ಡಿ, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.