ಸಾರಾಂಶ
ಕಟ್ಟಡ ಕಾರ್ಮಿಕರಿಗಾಗಿ ಸರ್ಕಾರ ಹಲವಾರು ಯೋಜನೆ ರೂಪಿಸಿದ್ದು, ಈ ಯೋಜನೆಗಳ ಸದುಪಯೋಗಪಡಿಸಿಕೊಳ್ಳುವಂತೆ ಶಾಸಕ ಮತ್ತು ಬೆಮುಲ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಸಲಹೆ ನೀಡಿದರು.
ಕನ್ನಡಪ್ರಭ ವಾರ್ತೆ ಮೂಡಲಗಿ
ಕಟ್ಟಡ ಕಾರ್ಮಿಕರಿಗಾಗಿ ಸರ್ಕಾರ ಹಲವಾರು ಯೋಜನೆ ರೂಪಿಸಿದ್ದು, ಈ ಯೋಜನೆಗಳ ಸದುಪಯೋಗಪಡಿಸಿಕೊಳ್ಳುವಂತೆ ಶಾಸಕ ಮತ್ತು ಬೆಮುಲ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಸಲಹೆ ನೀಡಿದರು.ಶುಕ್ರವಾರ ಪಟ್ಟಣದ ತಹಸೀಲ್ದಾರ ಕಚೇರಿ ಬಳಿ ಕಾರ್ಮಿಕ ಇಲಾಖೆಯಿಂದ ಕಿಟ್ ವಿತರಿಸಿ ಮಾತನಾಡಿದ ಅವರು, ಕಾರ್ಮಿಕರ ಏಳ್ಗೆಗಾಗಿ ಇರುವ ಸೌಲಭ್ಯಗಳನ್ನು ಪಡೆದುಕೊಳ್ಳುವಂತೆ ತಿಳಿಸಿದರು.
ಕಟ್ಟಡಗಳ ನಿರ್ಮಾಣದಲ್ಲಿ ಕಾರ್ಮಿಕರ ಪಾತ್ರ ಮಹತ್ವದ್ದಾಗಿದೆ. ಕಟ್ಟಡ ನಿರ್ಮಾಣದ ವಿವಿಧ ಕೆಲಸ ಮಾಡುವ ಕಾರ್ಮಿಕರು ಈ ಸೌಲಭ್ಯಗಳಿಗೆ ಅರ್ಹರಾಗಿದ್ದಾರೆ. 60 ವರ್ಷ ಮೇಲ್ಪಟ್ಟ ನೋಂದಾಯಿತ ಕಾರ್ಮಿಕರಿಗೆ ಸರ್ಕಾರ ಪ್ರತಿ ತಿಂಗಳು ₹3 ಸಾವಿರ ಪಿಂಚಣಿ ನೀಡುತ್ತಿದೆ. ಕಟ್ಟಡ ಕಾಮಗಾರಿ ನಡೆಯುವ ವೇಳೆ ಕಾರ್ಮಿಕರು ಮೃತಪಟ್ಟರೆ ₹5 ಲಕ್ಷ ವರೆಗೆ ವಿಮಾ ಸೌಲಭ್ಯವಿದೆ. ₹2 ಲಕ್ಷವರೆಗಿನ ಆರೋಗ್ಯ ವೆಚ್ಚವನ್ನು ಇಲಾಖೆಯೇ ಭರಿಸಲಿದೆ. ಕಟ್ಟಡ ನಿರ್ಮಾಣ ಮಾಡುವ ಕಾರ್ಮಿಕರು ಕಾರ್ಮಿಕ ಇಲಾಖೆಯಲ್ಲಿ ತಮ್ಮ ಹೆಸರು ನೋಂದಾಯಿಸಿ ಗುರುತಿನ ಚೀಟಿ ಪಡೆದರೆ ಮಾತ್ರ ಸರ್ಕಾರಿ ಸೌಲಭ್ಯ ಪಡೆಯಲು ಸಾಧ್ಯವಾಗಲಿದೆ ಎಂದು ಹೇಳಿದರು.ಇದೇ ವೇಳೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು 2023-24ನೇ ಸಾಲಿಗೆ ಕಾರ್ಮಿಕರಿಗೆ 1200 ಕಿಟ್ ವಿತರಿಸಿದರು.
ಕಾರ್ಮಿಕ ನಿರೀಕ್ಷಿಕ ಅಶೋಕ ವಡ್ಡರ, ಸಮರ್ಥ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ಕಾರ್ಯದರ್ಶಿ ಸುಭಾಸ ಗೋಡ್ಯಾಗೋಳ, ಹಣಮಂತ ಗುಡ್ಲಮನಿ, ಅನ್ವರ್ ನದಾಫ್, ಜೈ ಭವಾನಿ ಕಾರ್ಮಿಕರ ಸಂಘದ ಅಧ್ಯಕ್ಷ ರಮೇಶ ದುಮಾಳಿ. ಕಾರ್ಮಿಕ ಇಲಾಖೆ ಸಿಬಂದಿ ಈರಪ್ಪ ಮಾಲೋಜಿ, ರಾಜು ಪೂಜೇರಿ ಮತ್ತು ಪುರಸಭೆ ಸದಸ್ಯರು, ಕಾರ್ಮಿಕರು ಇದ್ದರು.