ಜಲ ಜೀವನ್ ಯೋಜನೆ ಸದ್ಬಳಕೆ ಮಾಡಿಕೊಳ್ಳಿ

| Published : Aug 30 2024, 01:07 AM IST

ಸಾರಾಂಶ

ಜಲಜೀವನ್ ಯೋಜನೆಯನ್ನು ಜನರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಕರೆ ನೀಡಿದರು.

ತುರುವೇಕೆರೆ: ಜಲಜೀವನ್ ಯೋಜನೆಯನ್ನು ಜನರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಕರೆ ನೀಡಿದರು.

ತಾಲೂಕಿನ ತಾವರೇಕೆರೆ ಜನತಾ ಕಾಲೋನಿ, ಲೋಕಮ್ಮನಹಳ್ಳಿ, ಲೋಕಮ್ಮನಹಳ್ಳಿ ಗೊಲ್ಲರಹಟ್ಟಿ, ಗಂಗನಹಳ್ಳಿ, ಮಂತ್ರಿಕೇನಹಳ್ಳಿ ಗೊಲ್ಲರಹಟ್ಟಿ, ಪಿ.ಕಲ್ಲಳ್ಳಿ ಮತ್ತು ಹುಳಿಸಂದ್ರದ ನಾಗರಿಕರಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸುವ ಜಲಜೀವನ್ ಯೋಜನೆಯಡಿಯಲ್ಲಿ ನಡೆಯುವ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

೧೫೦ ಲಕ್ಷ ರು. ವೆಚ್ಚದಲ್ಲಿ ಸುಮಾರು ಏಳುನೂರಕ್ಕೂ ಹೆಚ್ಚು ಮನೆಗಳಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸುವ ಕಾಮಗಾರಿಯನ್ನು ಕೈಗೊಳ್ಳಲಾಗಿದೆ. ಇದು ಕೇಂದ್ರ ಸರ್ಕಾರದ ಯೋಜನೆಯಾಗಿದ್ದು, ಮನೆಮನೆಗೆ ಗಂಗೆಯನ್ನು ಹರಿಸುವ ಉತ್ತಮ ಯೋಜನೆಯಾಗಿದೆ ಎಂದರು.

ಅಧಿಕಾರಿಗಳು ಮತ್ತು ಗುತ್ತಿಗೆದಾರರು ಉತ್ತಮ ಗುಣಮಟ್ಟದಲ್ಲಿ ಕಾಮಗಾರಿ ನೆರವೇರಿಸಬೇಕು. ಇದು ಸುಮಾರು ೧೫ ವರ್ಷಗಳ ಕಾಲ ಗುಣಮಟ್ಟ ಕಾಯ್ದುಕೊಳ್ಳಬೇಕು ಎಂದು ಸೂಚನೆ ನೀಡಿದರು.ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಇಂಜಿನಿಯರ್ ರವಿಕುಮಾರ್, ಲೋಕಮ್ಮನಹಳ್ಳಿ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷೆ ವನಮಾಲಾ, ಮಾಜಿ ಅಧ್ಯಕ್ಷರಾದ ಕೆಂಪೇಗೌಡ, ಗಂಗಾಧರಯ್ಯ, ಸದಸ್ಯರಾದ ರೇಣುಕಯ್ಯ, ಮಂಜುಳಮ್ಮ, ಕೋಮಲ, ಕೃಷ್ಣಪ್ಪ, ಮುಖಂಡರಾದ ಚನ್ನೇಗೌಡ, ಜೆಡಿಎಸ್ ಪಕ್ಷದ ವಕ್ತಾರ ವೆಂಕಟಾಪುರ ಯೋಗೀಶ್ ಉಪಸ್ಥಿತರಿದ್ದರು.

ಪಾಪಿ ಸರ್ಕಾರದಿಂದ ಅಭಿವೃದ್ಧಿ ಶೂನ್ಯ

ಶಾಸಕ ಎಂ.ಟಿ.ಕೃಷ್ಣಪ್ಪ ಜಲಜೀವನ್ ಯೋಜನೆಯಡಿಯ ಕಾಮಗಾರಿಗಳಿಗೆ ಗ್ರಾಮಗಳಿಗೆ ತೆರಳಿ ಭೂಮಿ ಪೂಜೆ ನೆರವೇರಿಸುವ ವೇಳೆ ಪಿ.ಕಲ್ಲಳ್ಳಿಯ ಮಹಿಳೆಯರು ತಮ್ಮ ಗ್ರಾಮಕ್ಕೆ ಹೊಸದಾಗಿ ರಸ್ತೆ ನಿರ್ಮಿಸಿಕೊಡಬೇಕೆಂದು ಮನವಿ ಮಾಡಿದರು. ಇದಕ್ಕೆ ಉತ್ತರಿಸಿದ ಶಾಸಕ ಎಂ.ಟಿ.ಕೃಷ್ಣಪ್ಪ, ಇದೊಂದು ದರಿದ್ರ ಸರ್ಕಾರವಾಗಿದೆ. ಒಂದು ನಯಾ ಪೈಸೆ ಸಹ ಕೊಡುತ್ತಿಲ್ಲ, ಹಾಗಾಗಿ ಈ ಸರ್ಕಾರದಲ್ಲಿ ಅಭಿವೃದ್ಧಿ ಎಂಬುದು ಸಾಧ್ಯವೇ ಇಲ್ಲ. ಗೆದ್ದು ಒಂದೂವರೆ ವರ್ಷವಾಗಿದೆ. ಯಾವ ಗ್ರಾಮಕ್ಕೂ ರಸ್ತೆ, ಚರಂಡಿ ಮಾಡಲೂ ಸಾಧ್ಯವಾಗುತ್ತಿಲ್ಲ. ಈ ಪಾಪಿ ಸರ್ಕಾರದಿಂದಾಗಿ ಜನರಿಗೆ ಮುಖ ತೋರಿಸಲೂ ಆಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.