ಪಿಂಚಣಿ ಅದಾಲತ್‌ನ ಪ್ರಯೋಜನ ಪಡೆದುಕೊಳ್ಳಿ: ಡಾ.ದಿಲೀಷ್ ಶಶಿ

| Published : Oct 30 2025, 02:30 AM IST

ಸಾರಾಂಶ

ಪಿಂಚಣಿದಾರರು ತಮ್ಮ ಸಮಸ್ಯೆಗಳ ಬಗ್ಗೆ ಅದಲಾತ್ ನಲ್ಲಿ ಮಾತ್ರವಲ್ಲದೇ ಕಚೇರಿಗೆ ಬಂದು ಮಾಹಿತಿ ನೀಡಿದರೆ ಅಕೌಂಟ್ ಜನರಲ್ ಅಧಿಕಾರಿಗಳೊಂದಿಗೆ ಚರ್ಚಿಸಿ ಅವರ ಸಮಸ್ಯೆ ಬಗೆಹರಿಸಲು ಪ್ರಾಮಾಣಿ ಪ್ರಯತ್ನ ಮಾಡಲಾಗುವುದು.

ಕನ್ನಡಪ್ರಭ ವಾರ್ತೆ ಕಾರವಾರ

ಅಕೌಂಟ್ ಜನರಲ್ ಅಧಿಕಾರಿಗಳು ಮುಂದಿನ ತಿಂಗಳು ಕಾರವಾರದಲ್ಲಿ ಪಿಂಚಣಿ ಅದಾಲತ್ ನಡೆಸಲಿದ್ದು, ಈ ಅದಾಲತ್‌ನಲ್ಲಿ ಪಿಂಚಣಿದಾರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತಮ್ಮ ಸಮಸ್ಯೆ ಬಗೆಹರಿಸಿಕೊಳ್ಳುವಂತೆ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ದಿಲೀಷ್ ಶಶಿ ತಿಳಿಸಿದರು.

ಮಂಗಳವಾರ ಜಿಪಂ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಜಾಗೃತಿ ಅರಿವು ಸಪ್ತಾಹ ಮತ್ತು ರಾಷ್ಟ್ರವ್ಯಾಪಿ ಡಿಜಿಟಲ್ ಲೈಪ್ ಸರ್ಟಿಫಿಕೇಟ್ ಅಭಿಯಾನ 4.0 ಕಾರ್ಯಕ್ರಮದಲ್ಲಿ ಮಾತನಾಡಿದರು.

ಪಿಂಚಣಿದಾರರು ತಮ್ಮ ಸಮಸ್ಯೆಗಳ ಬಗ್ಗೆ ಅದಲಾತ್ ನಲ್ಲಿ ಮಾತ್ರವಲ್ಲದೇ ಕಚೇರಿಗೆ ಬಂದು ಮಾಹಿತಿ ನೀಡಿದರೆ ಅಕೌಂಟ್ ಜನರಲ್ ಅಧಿಕಾರಿಗಳೊಂದಿಗೆ ಚರ್ಚಿಸಿ ಅವರ ಸಮಸ್ಯೆ ಬಗೆಹರಿಸಲು ಪ್ರಾಮಾಣಿ ಪ್ರಯತ್ನ ಮಾಡಲಾಗುವುದು ಎಂದರು.

ಅಕೌಂಟ್ ಜನರಲ್ ಕಚೇರಿಯ ಹಿರಿಯ ಉಪ ಅಕೌಂಟ್ ಜನರಲ್ ವಿಘ್ನೇಶರನ್ ಜೆ., ಪಿಂಚಣಿದಾರರು ತಮ್ಮ ಪಿಂಚಣಿ ಸೌಲಭ್ಯ ಪಡೆಯಲು ಸಲ್ಲಿಸುವ ದಾಖಲಾತಿಗಳು, ಅಗತ್ಯ ಮಾಹಿತಿಯೊಂದಿಗೆ ಭರ್ತಿ ಮಾಡಲಾಗಿರುವ ಬಗ್ಗೆ ಹಾಗೂ ಸೇವಾ ಪುಸ್ತಕದಲ್ಲಿನ ಮಾಹಿತಿಗಳು ಸರಿಯಾಗಿ ಬರೆಯಲಾಗಿದೆ ಎಂಬುದನ್ನು ಖಾತರಿಪಡಿಕೊಳ್ಳಬೇಕು. ಸಂಬಂಧಿಸಿದ ಕಚೇರಿಯ ಮುಖ್ಯಸ್ಥರು ಸಿಬ್ಬಂದಿಯ ಸೇವಾ ಪುಸ್ತಕದಲ್ಲಿ ಸರಿಯಾದ ಮಾಹಿತಿ ಒದಗಿಸಿರುವ ಬಗ್ಗೆ ಆಗಾಗ ಪರಿಶೀಲನೆ ಮಾಡಬೇಕು, ಇದರಿಂದ ಪಿಂಚಣಿ ಸೌಲಭ್ಯ ಪಡೆಯಲು ಆಗುವ ಸಮಸ್ಯೆಗಳನ್ನು ಕಡಿಮೆ ಮಾಡಲು ಸಾಧ್ಯ ಎಂದರು.

ಪಿಂಚಣಿದಾರರು ತಮ್ಮ ಜೀವನ ಪ್ರಮಾಣ ಪತ್ರವನ್ನು ಸಲ್ಲಿಸುವ ಪ್ರಕ್ರಿಯೆ ಸರಳಗೊಳಿಸಲು ಡಿಜಿಟಲ್ ಲೈಪ್ ಸರ್ಟಿಫಿಕೇಟ್ ಜಾರಿಗೆ ತರಲಾಗಿದ್ದು, ಭಾರತ ಸರ್ಕಾರ ಅಧಿಕೃತ ಆ್ಯಪ್‌ ಮೂಲಕ ಪಿಂಚಣಿದಾರರು ಜೀವನ ಪ್ರಮಾಣಪತ್ರವನ್ನು ಬ್ಯಾಂಕ್‌ಗಳಿಗೆ ಸಲ್ಲಿಸುವ ಮೂಲಕ ತಮ್ಮ ಪಿಂಚಣಿ ಸೌಲಭ್ಯ ನಿರಂತರವಾಗಿ ಪಡೆಯಬಹುದಾಗಿದೆ ಎಂದರು.

ಸಹಾಯಕ ಅಕೌಂಟ್ ಅಧಿಕಾರಿ ಸುನೀಲ ಕುಮಾರ್, ಪಿಂಚಣಿದಾರರು ಮನೆಯಲ್ಲಿಯೇ ತಮ್ಮ ಮೊಬೈಲ್ ಮೂಲಕ ಡಿಜಿಟಲ್ ಲೈಪ್ ಸರ್ಟಿಫಿಕೇಟ್ ಪಡೆಯಬಹುದಾಗಿದೆ ಎಂದರು.

ಜಿಪಂ ಮುಖ್ಯ ಲೆಕ್ಕಾಧಿಕಾರಿ ಆನಂದಸಾ ಹಬೀಬ್, ಮುಖ್ಯ ಯೋಜನಾಧಿಕಾರಿ ಸೋಮಶೇಖರ ಮೇಸ್ತಾ, ಅಕೌಂಟ್ ಜನರಲ್ ಕಚೇರಿಯ ಅಧಿಕಾರಿ ಸಚೀನ ಮಲ್ನಾಡ, ನಿವೃತ್ತ ನೌಕರರ ಸಂಘದ ಜಿಲ್ಲಾಧ್ಯಕ್ಷ ವಿ.ಎಂ. ಹೆಗಡೆ ಇದ್ದರು.