ಸಾರಾಂಶ
ಆಡಳಿತ ಪಾರದರ್ಶಕವಾಗಿ ಸರಳ ಮತ್ತು ಸುಲಭವಾಗಿ ನಡೆಯಬೇಕು ಎಂದು ಶಾಸಕ ಆರ್.ವಿ. ದೇಶಪಾಂಡೆ ಹೇಳಿದರು.
ಹಳಿಯಾಳ: ರಾಜ್ಯ ಸರ್ಕಾರ ರಾಜ್ಯದೆಲ್ಲೆಡೆ ತಾಲೂಕು ಕಚೇರಿ ಮತ್ತು ಸರ್ವೇ ಮತ್ತು ನೋಂದಣಿ ಇಲಾಖೆಗಳ ಎಲ್ಲ ಭೂ ದಾಖಲೆಗಳ ಡಿಜಿಟಲೀಕರಣ ಮಾಡುವ ಮೂಲಕ ಜನಸಾಮಾನ್ಯರಿಗೆ ಭೂದಾಖಲೆಗಳನ್ನು ಪಡೆದುಕೊಳ್ಳಲು ಅನುಕೂಲವಾಗಿಸುವ ದಿಸೆಯಲ್ಲಿ ಜಾರಿಗೊಳಿಸಿರುವ ಡಿಜಿಟಲೀಕರಣ ಯೋಜನೆಯ ಸದುಪಯೋಗವನ್ನು ಸರ್ವರೂ ಪಡೆಯಬೇಕು ಎಂದು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಹಾಗೂ ಹಿರಿಯ ಶಾಸಕ ಆರ್.ವಿ. ದೇಶಪಾಂಡೆ ಕರೆ ನೀಡಿದರು.
ಶುಕ್ರವಾರ ತಾಲೂಕು ಆಡಳಿತ ಸೌಧದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭೂ ದಾಖಲೆಗಳ ಡಿಜಿಲೀಕರಣ ಸೇವೆಗೆ ಚಾಲನೆ ನೀಡಿ ಮಾತನಾಡಿದರು.ಆಡಳಿತ ಪಾರದರ್ಶಕವಾಗಿ ಸರಳ ಮತ್ತು ಸುಲಭವಾಗಿ ನಡೆಯಬೇಕು. ಜನಸಾಮಾನ್ಯರು ತಮ್ಮ ಭೂದಾಖಲೆಗಳು ಸೇರಿದಂತೆ ಇತರೇ ಕೆಲಸಗಳಿಗಾಗಿ ಕಚೇರಿಗಳನ್ನು ಅಲೆದಾಡಬಾರದು ಎಂಬುವುದು ನಮ್ಮ ಸರ್ಕಾರದ ಉದ್ದೇಶವಾಗಿದೆ. ಈ ದಿಸೆಯಲ್ಲಿ ಜಾರಿಗೊಳಸಿರುವ ಈ ಭೂ ದಾಖಲೆಗಳ ಡಿಜಿಟಲೀಕರಣ ಯೋಜನೆ ಸರ್ವರಿಗೂ ಅನುಕೂಲಕರವಾಗಲಿದೆ. ಸಾರ್ವಜನಿಕರು ಸರ್ಕಾರ ನಿಗದಿಪಡಿಸಿದ ಶುಲ್ಕ ನೀಡಿ ದಾಖಲೆಗಳನ್ನು ಪಡೆಯಬೇಕು ಎಂದರು.
ಹಳಿಯಾಳ ತಹಸೀಲ್ದಾರ್ ಪ್ರವೀಣ ಹುಚ್ಚಣ್ಣನವರ, ಗ್ರೇಡ್-2 ತಹಸೀಲ್ದಾರ್ ಹನುಮಂತ ಪಾರೋಡಕರ, ಸಾಂಬ್ರಾಣಿ ವಲಯ ಉಪ ತಹಸೀಲ್ದಾರ್ ಅಶೋಕ ಚನ್ನಬಸವಣ್ಣನವರ, ಮುರ್ಕವಾಡ ವಲಯ ಉಪ ತಹಸೀಲ್ದಾರ ಎಫ್.ಎಚ್. ಗುಡುದರ, ಭೂ ದಾಖಲೆ ವಿಭಾಗದ ಶಿರಸ್ತೆದಾರ ಲಕ್ಷ್ಮೀ ಡೊಂಕಣ್ಣನವರ, ಭೂ ದಾಖಲೆ ವಿಭಾಗದ ಪರಶುರಾಮ ಶಿಂಧೆ, ಮಂಜುನಾಥ ಕೈಸೆರೆ ಹಾಗೂ ಸಿಬ್ಬಂದಿ, ಜನಪ್ರತಿನಿಧಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳ ಇದ್ದರು.ಉದ್ಘಾಟನಾ ಸಮಾರಂಭದ ನಂತರ ಶಾಸಕರು ಭೂ ದಾಖಲೆಗಳ ಅಭಿಲೇಖಾಲಯಕ್ಕೆ ಭೇಟಿ ನೀಡಿ, ಅಲ್ಲಿ ಭೂ ದಾಖಲೆಗಳ ಸಂಗ್ರಹಣೆ ಪರಿಶೀಲಿಸಿದರು.