ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ಕೊಡಗು ಜಿಲ್ಲೆಯ ಯುವ ಫುಟ್ಬಾಲ್ ಆಟಗಾರರಿಗೆ ಮಿನಿ ಒಲಿಂಪಿಕ್ಸ್ ಫುಟ್ಬಾಲ್ ಕ್ರೀಡಾಕೂಟದಲ್ಲಿ ಭಾಗವಹಿಸಲು ಅವಕಾಶ ದೊರೆತ್ತಿದ್ದು, ಹೆಮ್ಮೆಯ ವಿಷಯವಾಗಿದೆ. ಜಿಲ್ಲಾ ಫುಟ್ಬಾಲ್ ಸಂಸ್ಥೆಯ ಅಂಡರ್- 14 ಬಾಲಕ ಮತ್ತು ಬಾಲಕಿಯರ ತಂಡದ ಆಟಗಾರರು ಮಿನಿ ಒಲಿಂಪಿಕ್ಸ್ ಕ್ರೀಡಾಕೂಟವನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಕೊಡಗು ಜಿಲ್ಲಾ ಫುಟ್ಬಾಲ್ ಸಂಸ್ಥೆಯ ಮಹಾಪೋಷಕ ನೆಲ್ಲಮಕ್ಕಡ ಮೋಹನ್ ಅಯ್ಯಪ್ಪ ಕರೆ ನೀಡಿದ್ದಾರೆ.ಬೆಂಗಳೂರಿನಲ್ಲಿ ನಡೆಯಲಿರುವ ಮಿನಿ ಒಲಿಂಪಿಕ್ಸ್ ಫುಟ್ಬಾಲ್ ಕ್ರೀಡಾಕೂಟಕ್ಕೆ ಅಮ್ಮತ್ತಿಯ ಜಿಲ್ಲಾ ಫುಟ್ಬಾಲ್ ಸಂಸ್ಥೆಯ ಮೈದಾನದಲ್ಲಿ ನಡೆದ, ಮಿನಿ ಒಲಿಂಪಿಕ್ಸ್ ಫುಟ್ಬಾಲ್ ಕ್ರೀಡಾಕೂಟದಲ್ಲಿ ಭಾಗವಹಿಸುವ ಕೊಡಗು ತಂಡದ ಬಾಲಕ ಮತ್ತು ಬಾಲಕಿಯರ ತಂಡದ ಆಟಗಾರರಿಗೆ ಫುಟ್ಬಾಲ್ ಕಿಟ್ ವಿತರಿಸಿ ಅವರು ಮಾತನಾಡಿದರು.
ಕೊಡಗಿನ ಗ್ರಾಮೀಣ ಪ್ರತಿಭೆಗಳಿಗೆ ಇದು ಒಳ್ಳೆಯ ಅವಕಾಶವಾಗಿದ್ದು, ಗ್ರಾಮೀಣ ಭಾಗದಲ್ಲಿ ಆಡಿ ಬೆಳೆದಿರುವ ಯುವ ಆಟಗಾರರಿಗೆ ತಮ್ಮ ಆಟದ ಕೌಶಲಗಳನ್ನು ಬೆಳೆಸಲು ಮಿನಿ ಒಲಿಂಪಿಕ್ಸ್ ಉತ್ತಮ ವೇದಿಕೆಯಾಗಿದೆ. ಕೊಡಗು ತಂಡವನ್ನು ಪ್ರತಿನಿಧಿಸುತ್ತಿರುವ ಆಟಗಾರರು ಉತ್ತಮ ಪ್ರದರ್ಶನ ತೋರುವುದರ ಮೂಲಕ ಕೊಡಗು ಜಿಲ್ಲಾ ಫುಟ್ಬಾಲ್ ಸಂಸ್ಥೆ ಮತ್ತು ಕೊಡಗು ಜಿಲ್ಲೆಗೆ ಉತ್ತಮ ಹೆಸರು ತರಬೇಕು ಎಂದು ಮೋಹನ್ ಅಯ್ಯಪ್ಪ ಹೇಳಿದರು.ಜಿಲ್ಲಾ ಫುಟ್ಬಾಲ್ ಸಂಸ್ಥೆಯ ಉಪಾಧ್ಯಕ್ಷ ಮತ್ತು ಮಿನಿ ಒಲಿಂಪಿಕ್ಸ್ ಕೊಡಗು ಬಾಲಕರ ತಂಡದ ತರಬೇತುದಾರ ಕ್ರಿಸ್ಟೋಫರ್ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಬೆಳೆಯುತ್ತಿರುವ ಯುವ ಫುಟ್ಬಾಲ್ ಆಟಗಾರರನ್ನು ಹುಡುಕಿ ಅವರಿಗೆ ಉತ್ತಮ ವೇದಿಕೆಯನ್ನು ಮಾಡಿಕೊಡಲು ಜಿಲ್ಲಾ ಫುಟ್ಬಾಲ್ ಸಂಸ್ಥೆ ಪ್ರಯತ್ನಿಸುತ್ತಿದೆ. ಆ ನಿಟ್ಟಿನಲ್ಲಿ ಇದೀಗ ಮಿನಿ ಒಲಿಂಪಿಕ್ಸ್‌ನಲ್ಲಿ ಜಿಲ್ಲಾ ಫುಟ್ಬಾಲ್ ಸಂಸ್ಥೆಯ ಬಾಲಕ ಮತ್ತು ಬಾಲಕಿಯರ ತಂಡ ಭಾಗವಹಿಸಲು ಅವಕಾಶ ಮಾಡಿಕೊಡಲಾಗಿದೆ. ಕಳೆದ ಮೂರು ತಿಂಗಳಿಂದ ನಿರಂತರವಾಗಿ ಅಭ್ಯಾಸ ಮಾಡುತ್ತಿರುವ ಕೊಡಗಿನ ತಂಡದ ಆಟಗಾರರು ಬೆಂಗಳೂರಿನಲ್ಲಿ ಉತ್ತಮ ಪ್ರದರ್ಶನ ತೋರುವ ವಿಶ್ವಾಸ ಹೊಂದಿದ್ದೇವೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಫುಟ್ಬಾಲ್ ಸಂಸ್ಥೆಯ ಅಧ್ಯಕ್ಷ ಪಾಣತ್ತಲೆ ಜಗದೀಶ್ ಮಂದಪ್ಪ, ಕೊಡಗಿನ ಅಂಡರ್ 14 ಬಾಲಕ ಮತ್ತು ಬಾಲಕಿಯರ ತಂಡಕ್ಕೆ ಮಿನಿ ಒಲಿಂಪಿಕ್ಸ್ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಉತ್ತಮ ವೇದಿಕೆಯಾಗಿದೆ. ಕೊಡಗು ಜಿಲ್ಲಾ ಫುಟ್ಬಾಲ್ ಸಂಸ್ಥೆಯನ್ನು ಮಿನಿ ಒಲಿಂಪಿಕ್ಸ್ ನಲ್ಲಿ ಪ್ರತಿನಿಧಿಸುತ್ತಿರುವ ಆಟಗಾರರಿಗೆ ಜಿಲ್ಲಾ ಫುಟ್ಬಾಲ್ ಸಂಸ್ಥೆಯ ಸಂಪೂರ್ಣ ಕಿಟ್ ಮತ್ತು ಎಲ್ಲಾ ವ್ಯವಸ್ಥೆಗಳನ್ನು ಉಚಿತವಾಗಿ ಮಾಡಲಾಗಿದೆ ಎಂದರು.ಜಿಲ್ಲಾ ಫುಟ್ಬಾಲ್ ಸಂಸ್ಥೆಯ ಕಾರ್ಯದರ್ಶಿ ಪಿ.ಎ. ನಾಗೇಶ್ ನಿರೂಪಿಸಿದರು. ಸದಸ್ಯ ಮಹೇಂದ್ರ ಸ್ವಾಗತಿಸಿದರು.
ರಾಜ್ಯ ಫುಟ್ಬಾಲ್ ಸಂಸ್ಥೆಯ ಸದಸ್ಯ ಜಗದೀಶ್ ಕೊಡಗರಹಳ್ಳಿ, ಜಿಲ್ಲಾ ಫುಟ್ಬಾಲ್ ಸಂಸ್ಥೆಯ ಖಜಾಂಜಿ ದೀಪು ಮಾಚಯ್ಯ, ರಾಜ್ಯ ಫುಟ್ಬಾಲ್ ಸಂಸ್ಥೆಯ ತೀರ್ಪುಗಾರ ಇಸ್ಮಾಯಿಲ್ ಕಂಡಕರೆ, ವಿಜು ಅಮ್ಮತ್ತಿ ಮತ್ತು ಲೋಹಿತ್ ಹಾಜರಿದ್ದರು.