ಹರಪನಹಳ್ಳಿ: ತಾಲೂಕಿನ ಅರಸೀಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಿಮ್ಮಲಾಪುರ ಗ್ರಾಮದ ದೊಡ್ಡಕೆರೆಯಲ್ಲಿ ವಿಬಿಜಿ ರಾಮ್ ಜಿ ಯೋಜನೆಯಡಿ ಪುನಶ್ಚೇತನಗೊಳಿಸುತ್ತಿರುವ ಕಾಮಗಾರಿ ಸ್ಥಳಕ್ಕೆ ತಾಪಂ ಇಒ ಚಂದ್ರಶೇಖರ್ ವೈ.ಎಚ್. ಹಾಗೂ ಎಡಿ ಸೋಮಶೇಖರ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕಾಮಗಾರಿ ಸ್ಥಳದಲ್ಲಿ ಕೈಗೊಂಡಿರುವ ಕೆಲಸದ ಪ್ರಗತಿಯನ್ನು ಪರಿಶೀಲಿಸಿದ ಅಧಿಕಾರಿಗಳು ಎನ್‌ಎಂಆರ್‌ನಲ್ಲಿ ಹೆಸರು ನಮೂದಾಗಿರುವ ಎಲ್ಲ ಕೂಲಿಕಾರರು ಕಡ್ಡಾಯವಾಗಿ ಕೆಲಸದಲ್ಲಿ ತೊಡಗಿಸಿಕೊಳ್ಳಬೇಕು. ಪ್ರತಿಯೊಬ್ಬಅರ್ಹ ಕೂಲಿಕಾರನಿಗೆ ಕೆಲಸ ಸಿಗುವಂತೆ ನೋಡಿಕೊಳ್ಳುವುದು ಮತ್ತು ಕೆಲಸದ ಸ್ಥಳದಲ್ಲಿ ಶಿಸ್ತು ಹಾಗೂ ಪಾರದರ್ಶಕತೆ ಕಾಯ್ದುಕೊಳ್ಳುವುದು ಪ್ರತಿಯೊಬ್ಬ ಮೇಟಿಯ ಮುಖ್ಯ ಜವಾಬ್ದಾರಿಯಾಗಿದೆ ಎಂದು ಕಟ್ಟುನಿಟ್ಟಿನ ನಿರ್ದೆಶನ ನೀಡಿದರು.

ಕೆಲಸದ ಸ್ಥಳದಲ್ಲಿ ಶುದ್ಧ ಕುಡಿಯುವ ನೀರು, ನೆರಳಿನ ವ್ಯವಸ್ಥೆ, ಪ್ರಥಮ ಚಿಕಿತ್ಸೆ ಪೆಟ್ಟಿಗೆ ಹಾಗೂ ಮಗುವಿನ ಆರೈಕೆ ಸೌಲಭ್ಯಗಳನ್ನು ಗ್ರಾಮ ಪಂಚಾಯಿತಿಯಿಂದ ಒದಗಿಸುವುದು ಕಡ್ಡಾಯವಾಗಿದೆ. ನಿಗದಿತ ಸಮಯಕ್ಕೆ ಸರಿಯಾಗಿ ವೇತನ ಪಾವತಿಯಾಗಲಿದ್ದು, ಕೂಲಿಕಾರರು ಸಂಪೂರ್ಣೂವಾಗಿ ಯೋಜನೆಯ ಸೌಲಭ್ಯ ಪಡೆದುಕೊಂಡು ತಮ್ಮ ಆರ್ಥಿಕ ಮಟ್ಟವನ್ನು ಹೆಚ್ಚಿಸಿಕೊಳ್ಳಬೇಕು ಎಂದು ಅಧಿಕಾರಿಗಳು ತಿಳಿಸಿದರು.ತಾಲೂಕಿನಲ್ಲಿ ಈಗಾಗಲೇ 2026-27ನೇ ಸಾಲಿನಲ್ಲಿ 96ರಿಂದ 100 ಮಾನವ ದಿನ ಪೂರೈಸಿದ 117 ಕೂಲಿಕಾರರಿಗೆ 125 ದಿನ ಆಗುವವರಿಗೆ ಕೆಲಸ ನೀಡಲು ಎಲ್ಲ ಪಿಡಿಒಗಳಿಗೆ ಸೂಚನೆ ನೀಡಲಾಗಿದೆ. ಮುಂದೆಯೂ 100 ದಿನ ಪೂರೈಸುವ ಎಲ್ಲರಿಗೂ ಇನ್ನೂ 25 ದಿನ ಕೆಲಸ ನೀಡಿ ಗುರಿ ತಲುಪಲು ತಿಳಿಸಲಾಗಿದೆ ಎಂದು ತಿಳಿಸಿದರು.

ಸಹಾಯಕ ನಿರ್ದೆಶಕ ಸೋಮಶೇಖರ್ ಯು.ಎಚ್. ಮಾತನಾಡಿ, ವಿಬಿಜಿ ರಾಮ್ ಜಿ ಯೋಜನೆಯು ಕೇವಲ ಸಮುದಾಯದ ಕೆರೆ, ರಸ್ತೆ, ಚರಂಡಿ ಅಭಿವೃದ್ಧಿಗಷ್ಟೇ ಸೀಮಿತವಾಗಿಲ್ಲ. ಈ ಯೋಜನೆಯಡಿ ಲಭ್ಯವಿರುವ ವೈಯಕ್ತಿಕ ಕಾಮಗಾರಿಗಳಾದ ದನದ ಕೊಟ್ಟಿಗೆ, ಮೇಕೆ ಕೊಟ್ಟಿಗೆ, ಕೋಳಿ ಶೆಡ್, ಕೃಷಿ ಹೊಂಡ, ಹಣ್ಣಿನ ಗಿಡ ನೆಡುವುದು ಹಾಗೂ ಇಂಗು ಗುಂಡಿ ನಿರ್ಮಾಣದಂತಹ ಸೌಲಭ್ಯಗಳನ್ನು ಪ್ರತಿಯೊಬ್ಬ ರೈತರು ಮತ್ತು ಕೂಲಿಕಾರರು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು. ಈ ಯೋಜನೆಯಡಿ ಗ್ರಾಮೀಣ ಪ್ರದೇಶದ ಕೂಲಿಕಾರರಿಗೆ ಸಿಗುವ ವಿವಿಧ ಹಕ್ಕುಗಳು ಹಾಗೂ ಸೌಲಭ್ಯಗಳ ಕುರಿತು ಜಾಗೃತಿ ಮೂಡಿಸಲಾಯಿತು.

ಈ ಸಂದರ್ಭದಲ್ಲಿ ತಾಲೂಕು ಮಾಹಿತಿ, ಶಿಕ್ಷಣ ಮತ್ತು ಸಂವಹನ ಸಂಯೋಜಕ ಕೆ. ವಸಿಗೇರಪ್ಪ ಚಾಗನೂರು, ಅರಸೀಕೆರೆ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಶಿವಲೀಲಾ, ಷಣ್ಮುಖಪ್ಪ, ಡಿಇಒ ಶಶಿಕುಮಾರ್ ಸೇರಿದಂತೆ ಗ್ರಾಪಂ ಸಿಬ್ಬಂದಿ ಹಾಗೂ ಮೇಟಿಗಳು, ಕೂಲಿಕಾರರು ಉಪಸ್ಥಿತರಿದ್ದರು.