ಸಾರಾಂಶ
ಆಲ್ ಬೆಂಡಜೋಲ್ ಮಾತ್ರೆ ಮಕ್ಕಳಲ್ಲಿ ರಕ್ತಹೀನತೆಯನ್ನು ತಡೆಗಟ್ಟುತ್ತದೆ, ಪೌಷ್ಟಿಕಾಂಶದ ವೃದ್ಧಿ, ಏಕಾಗ್ರತೆ, ಕಲಿಯುವ ಸಾಮರ್ಥ್ಯ ಉತ್ತಮಗೊಳಿಸುವುದರೊಂದಿಗೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ನೆರವಾಗುತ್ತದೆ. ಆದ್ದರಿಂದ ಎಲ್ಲಾ ಮಕ್ಕಳೂ ಈ ಮಾತ್ರೆಯನ್ನು ಸೇವಿಸಿ ಸದೃಢರಾಗುವಂತೆ ಕರೆ ನೀಡಿದರು.
ರಾಮನಗರ: ಜಂತುಹುಳು ನಿರ್ಮೂಲನೆಗೆ ಆಲ್ ಬೆಂಡಜೋಲ್ ಮಾತ್ರೆಗಳನ್ನು 1 ರಿಂದ 19 ವರ್ಷದೊಳಗಿನ ಮಕ್ಕಳಿಗೆ ಉಚಿತವಾಗಿ ವಿತರಿಸಲಾಗುತ್ತಿದೆ, ಅರ್ಹ ಫಲಾನುಭವಿಗಳು ಇದರ ಸದುಪಯೋಗ ಪಡೆಯುವಂತೆ ರಾಮನಗರ ತಾಲೂಕು ಆರೋಗ್ಯಾಧಿಕಾರಿ ಡಾ. ಉಮಾ ಹೇಳಿದರು.
ಮೆಹಬೂಬ್ ನಗರದಲ್ಲಿರುವ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಿದ್ದ 2ನೇ ಹಂತದ ರಾಷ್ಟ್ರೀಯ ಜಂತುಹುಳು ನಿರ್ಮೂಲನಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಆಲ್ ಬೆಂಡಜೋಲ್ ಮಾತ್ರೆ ಮಕ್ಕಳಲ್ಲಿ ರಕ್ತಹೀನತೆಯನ್ನು ತಡೆಗಟ್ಟುತ್ತದೆ, ಪೌಷ್ಟಿಕಾಂಶದ ವೃದ್ಧಿ, ಏಕಾಗ್ರತೆ, ಕಲಿಯುವ ಸಾಮರ್ಥ್ಯ ಉತ್ತಮಗೊಳಿಸುವುದರೊಂದಿಗೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ನೆರವಾಗುತ್ತದೆ. ಆದ್ದರಿಂದ ಎಲ್ಲಾ ಮಕ್ಕಳೂ ಈ ಮಾತ್ರೆಯನ್ನು ಸೇವಿಸಿ ಸದೃಢರಾಗುವಂತೆ ಕರೆ ನೀಡಿದರು.
ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಅರ್ಪಿತ ಮಾತನಾಡಿ, ಆಹಾರವನ್ನು ತಯಾರಿಸುವ ಹಾಗೂ ಸೇವಿಸುವ ಮೊದಲು ಸಾಬೂನಿನಿಂದ ಕೈಗಳನ್ನು ಸ್ವಚ್ಛವಾಗಿ ತೊಳೆದುಕೊಳ್ಳಬೇಕು, ಬರಿಗಾಲಿನಲ್ಲಿ ಓಡಾಡದೇ ಚಪ್ಪಲಿಗಳನ್ನು ಬಳಸಬೇಕು, ಬಯಲಿನಲ್ಲಿ ಮಲವಿಸರ್ಜನೆ ಮಾಡದಿರುವುದು, ಶೌಚಾಲಯವನ್ನು ಬಳಸಿದ ನಂತರ ಸಾಬೂನಿನಿಂದ ಕೈಗಳನ್ನು ಸ್ವಚ್ಛವಾಗಿ ತೊಳೆಯುವುದರಿಂದ ಜಂತು ಹುಳು ಬಾಧೆಯನ್ನು ತಡೆಗಟ್ಟಬಹುದು ಎಂದರು.ವೈದ್ಯಾಧಿಕಾರಿ ಡಾ. ಹರ್ಷಿತ್ ಮಾತನಾಡಿ, 1 ರಿಂದ 2 ವರ್ಷದ ಮಕ್ಕಳಿಗೆ ಅರ್ಧ ಆಲ್ ಬೆಂಡಜೋಲ್ (200 ಮಿಗ್ರಾ) ಮಾತ್ರೆಯನ್ನು 2 ರಿಂದ 19 ವರ್ಷದ ಮಕ್ಕಳಿಗೆ ಆಲ್‌ಬೆಂಡಜೋಲ್ (400 ಮಿಗ್ರಾ) ಮಾತ್ರೆಯನ್ನು ನೀಡಲಾಗುವುದು ಎಂದು ಹೇಳಿದರು.
ಫ್ಲೋರೋಸಿಸ್ ಘಟಕದ ಬಾಬು, ಎನ್ ಡಿಡಿ ಸಂಯೋಜಕ ಪುರುಷೋತ್ತಮ್, ಆರ್ ಬಿಎಸ್ ಕೆ ಆಶಾ, ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಉಮಾ, ಆಶಾ ಮೇಲ್ವಿಚಾರಕರು ಮತ್ತು ಆರೋಗ್ಯ ಸಿಬ್ಬಂದಿ, ಆಶಾ ಕಾರ್ಯಕರ್ತರು ಹಾಗೂ ಫಲಾನುಭವಿಗಳು ಹಾಜರಿದ್ದರು.