ರಾಜನಹಳ್ಳಿಯಲ್ಲಿ ಮಹರ್ಷಿ ವಾಲ್ಮೀಕಿ ಜಾತ್ರೆಯನ್ನು ಫೆ.8, 9ರಂದು ಏರ್ಪಡಿಸಿದ್ದು, ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ತಮಗೆ ವಹಿಸಿದ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಿ ಜಾತ್ರೆ ಯಶಸ್ವಿಗೊಳಿಸುವಂತೆ ಶ್ರೀ ಮಹರ್ಷಿ ವಾಲ್ಮೀಕಿ ಜಾತ್ರೆ ಆಚರಣಾ ಸಮಿತಿ ಅಧ್ಯಕ್ಷ, ಕರ್ನಾಟಕ ರಾಜ್ಯ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಸವಗೌಡ ದದ್ದಲ್ ತಿಳಿಸಿದರು.
ಕನ್ನಡಪ್ರಭ ವಾರ್ತೆ ಹರಿಹರ
ರಾಜನಹಳ್ಳಿಯಲ್ಲಿ ಮಹರ್ಷಿ ವಾಲ್ಮೀಕಿ ಜಾತ್ರೆಯನ್ನು ಫೆ.8, 9ರಂದು ಏರ್ಪಡಿಸಿದ್ದು, ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ತಮಗೆ ವಹಿಸಿದ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಿ ಜಾತ್ರೆ ಯಶಸ್ವಿಗೊಳಿಸುವಂತೆ ಶ್ರೀ ಮಹರ್ಷಿ ವಾಲ್ಮೀಕಿ ಜಾತ್ರೆ ಆಚರಣಾ ಸಮಿತಿ ಅಧ್ಯಕ್ಷ, ಕರ್ನಾಟಕ ರಾಜ್ಯ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಸವಗೌಡ ದದ್ದಲ್ ತಿಳಿಸಿದರು.ತಾಲೂಕಿನ ರಾಜನಹಳ್ಳಿಯ ಮಹರ್ಷಿ ವಾಲ್ಮೀಕಿ ಗುರುಪೀಠದಲ್ಲಿ ನಡೆದ ಮಹರ್ಷಿ ವಾಲ್ಮೀಕಿ ಜಾತ್ರೆ-2026ರ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು
ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ ಮತ್ತು ಇತರ ಇಲಾಖೆಯ ಅಧಿಕಾರಿಗಳೊಂದಿಗೆ ಜಾತ್ರೆಯನ್ನು ಯಶಸ್ವಿಯಾಗಿ ನಡೆಸುವ ಕುರಿತು ಚರ್ಚಿಸಲಾಗಿದೆ. ಕಳೆದ ಏಳು ವರ್ಷಗಳಿಂದ ದಾವಣಗೆರೆ ಜಿಲ್ಲೆಯ ಅಧಿಕಾರಿಗಳು ಜಾತ್ರೆಯನ್ನು ಯಶಸ್ವಿಯಾಗಿ ನಡೆಯಲು ಶ್ರಮಿಸಿದ್ದಾರೆ. ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ, ಸಚಿವರು , ಶಾಸಕರು, ಸಂಸದರು, ಕೇಂದ್ರ ಸಚಿವರು ಮತ್ತು ವಿರೋಧ ಪಕ್ಷದ ನಾಯಕರು ಸೇರಿದಂತೆ ಎಲ್ಲಾ ಪಕ್ಷದ ನಾಯಕರನ್ನು ಜಾತ್ರೆಗೆ ಆಹ್ವಾನಿಸಲಾಗಿದೆ ಎಂದರು.ಜಾತ್ರೆಗೆ ಬರುವ ಭಕ್ತರಿಗಾಗಿ, ವಿಶೇಷವಾಗಿ ಮಹಿಳೆಯರಿಗಾಗಿ ರಾಜ್ಯಾದಾದ್ಯಂತ ಉಚಿತ ಬಸ್ ಸೌಲಭ್ಯ ಒದಗಿಸುವ ಬಗ್ಗೆ ಕೆಎಸ್ಆರ್ಟಿಸಿ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ಹರಿಹರ ಮತ್ತು ದಾವಣಗೆರೆಯಿಂದ ಜಾತ್ರಾ ಸ್ಥಳಕ್ಕೆ ಹೆಚ್ಚಿನ ಬಸ್ ಗಳನ್ನು ಸಂಚರಿಸಲು ಸೂಚಿಸಲಾಗಿದೆ ಎಂದರು.
ಜಾತ್ರೆಗೆ ಪ್ರತಿದಿನ ಸುಮಾರು 3ರಿಂದ 4 ಲಕ್ಷ ಜನ ಬಂದುಹೋಗುವ ನಿರೀಕ್ಷೆ ಇದೆ. ಸುರಕ್ಷತೆ ಮತ್ತು ನಿರ್ವಹಣೆ ದೃಷ್ಟಿಯಿಂದ ಆಹಾರ, ಕುಡಿಯುವ ನೀರು ಮತ್ತು ತಾತ್ಕಾಲಿಕ ಪ್ರಾಥಮಿಕ ಆರೋಗ್ಯ ಕೇಂದ್ರ ತೆರೆದು ನುರಿತ ವೈದ್ಯರು ಮತ್ತು ಸಿಬ್ಬಂದಿಗಳನ್ನು ನಿಯೋಜಿಸಿ ಸಾಕಷ್ಟು ಪ್ರಮಾಣದಲ್ಲಿ ಔಷಧಿಗಳನ್ನು ಶೇಖರಿಸಿರುವಮತೆ ಅಧಿಕಾರಿಗಳಿಗೆ ತಿಳಿಸಿದರು.ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಮಾತನಾಡಿ, ಕಾರ್ಯಕ್ರಮದಲ್ಲಿ ಅನೇಕ ಗಣ್ಯರು ಭಾಗವಹಿಸಲಿದ್ದಾರೆ. ಲಕ್ಷಾಂತರ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಜಿಲ್ಲಾಡಳಿತವು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ ಎಂದರು.
ಈ ಬಾರಿ ವಿಶೇಷವಾಗಿ ಫೆಬ್ರವರಿ 8 ರಂದು ಮಹಿಳಾ ಗೋಷ್ಠಿ, ನೌಕರರ ಗೋಷ್ಠಿ, ವೈದ್ಯರ ಗೋಷ್ಠಿ, ಕಾನೂನು ಗೋಷ್ಠಿ, ಸಂಜೆ 5ರ ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ನಾಟಕವನ್ನು ಏರ್ಪಡಿಸಲಾಗಿದೆ. ಫೆ. 9ರಂದು ರಥೋತ್ಸವ ಜರುಗಲಿವೆ ಎಂದರು.ಗುರುಪೀಠದ ಪಕ್ಕದಲ್ಲಿ ವಾಹನಗಳ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ, ಭಾರಿ ವಾಹನಗಳ ಸಂಚಾರವನ್ನು ಸುರಕ್ಷತಾ ದೃಷ್ಠಿಯಿಂದ ಮುಖ್ಯ ರಸ್ತೆಯವರಿಗೆ ಮಾತ್ರ ಸಂಚಾರ ಇದ್ದು ಲಘು ವಾಹನಗಳು ಗುರುಪೀಠದವರಿಗೆ ಬರಲಿದೆ, ಸುರಕ್ಷತಾ ದೃಷ್ಠಿಯಿಂದ ಸಿಸಿಟಿವಿಗಳನ್ನು ಅಳವಡಿಸಬೇಕು ಎಂದರು.
ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಮಾತನಾಡಿದರು. ಪ್ರಸನ್ನಾನಂದ ಶ್ರೀ ಸಾನಿಧ್ಯ ವಹಿಸಿದ್ದರು. ಜಾತ್ರಾ ಸಮಿತಿ ಸಂಚಾಲಕ ಎಂ.ಜಿ.ಪಂಪಾಪತಿ, ಮಠದ ಧರ್ಮದರ್ಶಿ ಕೆ.ಬಿ.ಮಂಜುನಾಥ, ಹೊದಿಗೆರೆ ರಮೇಶ್, ಸಿಇಒ ಗಿತ್ತೆ ಮಾಧವ ವಿಠಲ್ ರಾವ್, ರಮೇಶ್, ಸಮುದಾಯದ ಮುಖಂಡರು ಹಾಜರಿದ್ದರು.