ಸಾರಾಂಶ
ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ
ಸಹಕಾರ ರಂಗವು ದೇಶಕ್ಕೆ ಬಹುದೊಡ್ಡ ಕೊಡುಗೆ ನೀಡಿದೆ. ಇಂದು ಕೆಲ ಸಹಕಾರಿ ಸಂಘದವರು ಅವ್ಯವಹಾರ ಮಾಡುತ್ತಿರುವುದರಿಂದಾಗಿ ಇಂದು ಸಹಕಾರ ರಂಗದ ಮೇಲೆ ಜನತೆ ವಿಶ್ವಾಸ ಕಳೆದುಕೊಳ್ಳುತ್ತಿರುವುದು ವಿಷಾದನೀಯ. ಸಹಕಾರ ರಂಗದಲ್ಲಿರುವವರು ಈ ರೀತಿಯಾಗದಂತೆ ನೋಡಿಕೊಂಡು ಸಹಕಾರ ರಂಗದ ವಿಶ್ವಾಸ ಕಳೆದುಕೊಳ್ಳದಂತೆ ನೋಡಿಕೊಳ್ಳಬೇಕು ಎಂದು ಸಚಿವ ಶಿವಾನಂದ ಪಾಟೀಲ ಹೇಳಿದರು.ತಾಲೂಕಿನ ಮನಗೂಳಿ ಪಟ್ಟಣದ ವಿನಾಯಕ ವಿವಿದೋದ್ಧೇಶ ಸಹಕಾರಿ ಸಂಘದ ನೂತನ ಕಟ್ಟಡವನ್ನು ಗುರುವಾರ ಉದ್ಘಾಟಿಸಿದ ನಂತರ ಶತಾಯುಷಿ ಸಂಗನಬಸವ ಶಿವಾಚಾರ್ಯ ಮಂಗಲ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ದಶಮಾನೋತ್ಸವ ಸಂಭ್ರಮಾಚರಣೆಯ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಹಿಂದಿನ ಕಾಲದಲ್ಲಿ ಜನತೆ ಸರ್ಕಾರಕ್ಕಿಂತಲೂ ಸಹಕಾರ ರಂಗದ ಮೇಲೆ ಬಹಳ ಅವಲಂಬಿತರಾಗಿದ್ದರು. ಸಹಕಾರ ರಂಗದಿಂದ ಬಹಳ ಜನರು ಜೀವನ ರೂಪಿಸಿಕೊಂಡಿದ್ದಾರೆ. ದೇಶದಲ್ಲಿ ಒಂದು ಹೊತ್ತಿನ ಊಟಕ್ಕೆ ತತ್ವಾರ ಇರುವ ಸಂದರ್ಭದಲ್ಲಿ ಬೇರೆ ದೇಶಗಳಿಂದ ಗೋಧಿ, ಬಟ್ಟೆ ತರಿಸಿಕೊಳ್ಳುವ ಪರಿಸ್ಥಿತಿಯಿತ್ತು. ಸಹಕಾರ ರಂಗದಿಂದ ಆಹಾರ ಉತ್ಪಾದನೆಯಲ್ಲಿ ಪ್ರಗತಿಯಾಯಿತು. ಇಂದು ಬೇರೆ ದೇಶಗಳಿಗೆ ಆಹಾರ ರಪ್ತು ಆಗುವಷ್ಟು ಪ್ರಗತಿಯಾಗಿದೆ. ಇದರಲ್ಲಿ ಸಹಕಾರ ರಂಗದ ಪಾತ್ರ ಮರೆಯುವಂತಿಲ್ಲ ಎಂದರು. ೨೦೧೩ರಲ್ಲಿ ₹೮ ಲಕ್ಷ ಶೇರು ಬಂಡವಾಳದೊಂದಿಗೆ ಆರಂಭವಾಗಿರುವ ವಿನಾಯಕ ವಿವಿದೋದ್ಧೇಶಗಳ ಸಹಕಾರಿ ಸಂಘವು ಇಂದು ₹೨೦ ಕೋಟಿ ವ್ಯವಹಾರ ಮಾಡುತ್ತಿರುವುದು ಶ್ಲಾಘನೀಯ. ಪ್ರಾಂಜಲ ಮನಸ್ಸಿನಿಂದ ಮಾಡುವ ಕಾರ್ಯ ಯಶಸ್ವಿಯಾಗುತ್ತದೆ ಎಂಬುವುದಕ್ಕೆ ಈ ಸಹಕಾರ ಸಂಘವೇ ನಿರ್ದೇಶನ. ಈ ಸಹಕಾರ ಸಂಘದ ಆಡಳಿತ ಮಂಡಳಿಯ ಪರಿಶ್ರಮ, ಜನರ ಸಹಕಾರದಿಂದ ಇದು ಪ್ರಗತಿಯಾಗಿದೆ. ಮುಂಬರುವ ದಿನಗಳಲ್ಲಿ ಇದು ಅರ್ಬನ್ ಬ್ಯಾಂಕ್‌ಯಾದರೇ ಹೆಚ್ಚು ಜನರಿಗೆ ಇದರ ಸದುಪಯೋಗವಾಗುತ್ತದೆ. ಇದು ಮನಗೂಳಿ ಪಟ್ಟಣಕ್ಕೆ ಮುಕುಟ ಪ್ರಾಯವಾಗಲೆಂದು ಶುಭ ಹಾರೈಸಿದರು.ವಿನಾಯಕ ವಿವಿದೋದ್ಧೇಶ ಸಹಕಾರಿ ಸಂಘದ ಅಧ್ಯಕ್ಷ ವಿಶ್ವನಾಥಗೌಡ ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿ, ಆಡಳಿತ ಮಂಡಳಿಯ ಸಹಕಾರ, ಸರ್ವ ಸದಸ್ಯರ ವಿಶ್ವಾಸದಿಂದ ನಮ್ಮ ಸಂಘವು ಪ್ರಗತಿಯತ್ತ ದಾಪುಗಾಲು ಹಾಕುತ್ತಿದೆ. ಕೇವಲ ೧೧ ವರ್ಷದಲ್ಲಿ ₹೧.೫೦ ಕೋಟಿ ವೆಚ್ಚದಲ್ಲಿ ನೂತನ ಸ್ವಂತ ಕಟ್ಟಡ ನಿರ್ಮಾಣವಾಗಿದೆ. ನಮ್ಮ ಸಂಘದ ಮೇಲೆ ಜನರು ವಿಶ್ವಾಸ, ಪ್ರೀತಿ ಇಡುವ ಮೂಲಕ ಸಾಕಷ್ಟು ಜನರು ಠೇವಣಿ ಮಾಡಿದ್ದಾರೆ. ಸಂಘದ ಪ್ರಗತಿಗೆ ಸಚಿವರ ಸಹಕಾರ ಮರೆಯುವಂತಿಲ್ಲ. ಈ ವರ್ಷವು ₹೩೨.೬೫ ಲಕ್ಷ ನಿವ್ವಳ ಲಾಭವಾಗಿದೆ. ನಾನು ಸಂಘವು ಆರಂಭವಾದಗಿನಿಂದಲೂ ಎಲ್ಲ ಸಹಕಾರದೊಂದಿಗೆ 3ನೇ ಬಾರಿಗೆ ಅಧ್ಯಕ್ಷನಾಗಿ ಕಾರ್ಯನಿರ್ವಹಿಸುವ ಮೂಲಕ ಸಂಘದ ಪ್ರಗತಿಗೆ, ಸದಸ್ಯರ ವಿಶ್ವಾಸಕ್ಕೆ ಧಕ್ಕೆ ಬಾರದಂತೆ ಕಾರ್ಯನಿರ್ವಹಿಸುವುದಾಗಿ ಭರವಸೆ ನೀಡಿದರು.ಸಂಗನಬಸವ ಸ್ವಾಮೀಜಿ, ಡಾ.ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ, ಸಂಗನಬಸವ ಶಿವಾಚಾರ್ಯ ಸ್ವಾಮೀಜಿ, ಸಿದ್ದಲಿಂಗ ದೇವರು ಸಾನಿಧ್ಯ ವಹಿಸಿ ಮಾತನಾಡಿದರು.ಶಾಸಕ ಭೀಮನಗೌಡ(ರಾಜುಗೌಡ)ಪಾಟೀಲ, ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಸೋಮನಗೌಡ(ಅಪ್ಪುಗೌಡ) ಪಾಟೀಲ ಮಾತನಾಡಿದರು.
ಕಾರ್ಯಕ್ರಮದಲ್ಲಿ ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ, ಸಿದ್ದಲಿಂಗ ಸ್ವಾಮೀಜಿ, ಐ.ಸಿ.ಪಟ್ಟಣಶೆಟ್ಟಿ, ಶಿವನಗೌಡ ಬಿರಾದಾರ, ರಾಜಶೇಖರ ಗುಡದಿನ್ನಿ, ಸಿ.ಎಸ್.ಪಾಟೀಲ, ಸಂಗನಬಸು ತಳೇವಾಡ, ಎಸ್.ಎಸ್.ಹಂಗರಗಿ, ಸಿದ್ದಣ್ಣ ನಾಗಠಾಣ, ಸಂಘದ ಸರ್ವ ಆಡಳಿತ ಮಂಡಳಿ ಸದಸ್ಯರು ಇತರರು ಇದ್ದರು. ವಿಶಾಲ ಚಿಕ್ಕೊಂಡ ಪ್ರಾರ್ಥಿಸಿದರು. ವಿಡಿಸಿಸಿ ಬ್ಯಾಂಕಿನ ನಿರ್ದೇಶಕ ಚಂದ್ರಶೇಖರಗೌಡ ಪಾಟೀಲ ಸ್ವಾಗತಿಸಿದರು. ಎಸ್.ಐ.ಬಿರಾದಾರ, ಡಾ.ಮಾಧವ ಗುಡಿ ನಿರೂಪಿಸಿದರು. ಸಂಘದ ಆಡಳಿತ ಮಂಡಳಿಯ ಅಧ್ಯಕ್ಷ ವಿಶ್ವನಾಥಗೌಡ ಪಾಟೀಲ, ಉಪಾಧ್ಯಕ್ಷ ಶ್ರೀಕಾಂತ ಸಾರವಾಡ, ನಿರ್ದೇಶಕರಾದ ಶಿವನಗೌಡ ಗುಜಗೊಂಡ, ರಾಜಶೇಖರ ಶಿರೋಳ, ಸಂಗನಬಸಪ್ಪ ತಪಶೆಟ್ಟಿ, ಮಹಾಲಿಂಗಪ್ಪ ಕೊರ್ತಿ, ಯಲ್ಲಪ್ಪ ರೊಳ್ಳಿ, ಅಶ್ವಿನಿ ಬಿರಾದಾರ, ಪುಷ್ಪಾ ನಂದಿಕೋಲಮಠ, ಯಲ್ಲಪ್ಪ ಮಬ್ರುಕರ ಅವರನ್ನು ಸನ್ಮಾನಿಸಲಾಯಿತು.ರಾಜ್ಯದಲ್ಲಿ ೨೧ ಡಿಸಿಸಿ ಬ್ಯಾಂಕ್‌ಗಳಿದ್ದರೂ ಎಲ್ಲ ಬ್ಯಾಂಕುಗಳ ರೈತರಿಗೆ ಸಾಲ ನೀಡುವುದಿಲ್ಲ. ಇದರಲ್ಲಿ ಕೇವಲ ೪-೫ ಬ್ಯಾಂಕ್‌ಗಳಲ್ಲಿ ಮಾತ್ರ ಸಾಲ ನೀಡುವುದನ್ನು ಕಾಣುತ್ತೇವೆ. ಅವಳಿ ಜಿಲ್ಲೆಯ ಡಿಸಿಸಿ ಬ್ಯಾಂಕಲ್ ಕೇವಲ ₹೬೩ ಸಾವಿರ ಬಂಡವಾಳದೊಂದಿಗೆ ಆರಂಭವಾಗಿ ಇಂದು ₹೧,೩೫೦ ಕೋಟಿ ವ್ಯವಹಾರ ಮಾಡುತ್ತಿದೆ. ಈ ವರ್ಷದಲ್ಲಿ ಡಿಸಿಸಿ ಬ್ಯಾಂಕ್ ₹೨೮ ಕೋಟಿ ಲಾಭ ಗಳಿಸಿದೆ. ಲಾಭಾಂಶದಲ್ಲಿ ಶೇರುದಾರರಿಗೆ ಶೇ.೪.೫ ರಷ್ಟು ಲಾಭಾಂಶ ನೀಡಲಾಗುತ್ತಿದೆ. ಶೂನ್ಯ, ಕಡಿಮೆ ಬಡ್ಡಿ ದರದಲ್ಲಿ ರೈತ ಬಾಂಧವರಿಗೆ ಸಾಲ ನೀಡುವ ಏಕೈಕ ರಾಜ್ಯ ನಮ್ಮದು. ಸಾಲ ಪಡೆದುಕೊಂಡವರು ಸಕಾಲಿಕವಾಗಿ ಸಾಲ ಮರುಪಾವತಿ ಮಾಡುವ ಮೂಲಕ ಸಹಕಾರ ಸಂಘದ ಪ್ರಗತಿಗೆ ಕೈಜೋಡಿಸಬೇಕು.-ಶಿವಾನಂದ ಪಾಟೀಲ,
ಸಚಿವ.