ಸಾರಾಂಶ
ಧಾರವಾಡ:
ಇಲ್ಲಿಯ ಮದಿಹಾಳದ ಸಿದ್ಧಾರೂಢ ಕಾಲನಿಯಲ್ಲಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಡಿಯ ಅಂಗನವಾಡಿ ಕೇಂದ್ರಕ್ಕೆ ಬುಧವಾರ ಜಿಲ್ಲಾಧಿಕಾರಿ ದಿವ್ಯಪ್ರಭು ಹಾಗೂ ಜಿಪಂ ಸಿಇಒ ಭುವನೇಶ ಪಾಟೀಲ ಭೇಟಿ ನೀಡಿ ಮಕ್ಕಳ ಹಾಜರಾತಿ, ದಾಖಲಾತಿ ಪರಿಶೀಲಿಸಿದರು.ಅಂಗನವಾಡಿಯಲ್ಲಿ ಒಟ್ಟು 37 ಮಕ್ಕಳಿದ್ದು, ಅಂಗನವಾಡಿ ಶಿಕ್ಷಕಿಯರು ಮಕ್ಕಳಿಗೆ ಹಾಡು ಹಾಡಿಸಿ, ಹಾಡಿನೊಂದಿಗೆ ನೃತ್ಯವನ್ನು ಮಾಡಿಸಿದರು. ಮಕ್ಕಳೊಂದಿಗೆ ನೆಲದ ಮೇಲೆ ಕುಳಿತ ಜಿಲ್ಲಾಧಿಕಾರಿ, ಜಿಪಂ ಸಿಇಒ ಮಕ್ಕಳಿಗೆ ಸಿಹಿ ತಿನ್ನಿಸಿ ಹಾರೈಸಿದರು. ಮಕ್ಕಳ ಆಹಾರ ಮತ್ತು ಆರೋಗ್ಯದ ಕಡೆ ಗಮನ ಹರಿಸುವಂತೆ ಅಂಗನವಾಡಿ ಕಾರ್ಯಕರ್ತೆಯರಿಗೆ ಸೂಚಿಸಿದರು.
ಅಂಗನವಾಡಿ ಕೇಂದ್ರದ ಕಾರ್ಯವೈಖರಿ, ಪೌಷ್ಟಿಕ ಆಹಾರ ವಿತರಣೆಯ ವಿಧಾನ, ಮಕ್ಕಳ ಹಾಜರಾತಿ, ದಾಖಲೆ ಹಾಗೂ ಸ್ವಚ್ಛತೆ ಕುರಿತಂತೆ ಸಮಗ್ರ ಪರಿಶೀಲನೆ ನಡೆಸಲಾಯಿತು.ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಡಾ. ಎಚ್.ಎಚ್. ಕುಕನೂರ, ಜಿಲ್ಲೆಯಲ್ಲಿ 1,622 ಅಂಗನವಾಡಿ ಕೇಂದ್ರಗಳಿವೆ. ಈ ಪೈಕಿ ಗರ್ಭಿಣಿಯರು, ಬಾಣಂತಿಯರು ಹಾಗೂ 6 ವರ್ಷದೊಳಗಿನ ಮಕ್ಕಳು ಸೇರಿ ಒಟ್ಟು 1,22,298 ಫಲಾನುಭವಿಗಳು ದಾಖಲಾಗಿದ್ದಾರೆ. ಪೋಷಣ ಪ್ರ‍್ಯಾಕರ್ ಆ್ಯಪ್ ಮೂಲಕ ಫಲಾನುಭವಿಗಳನ್ನು ದಾಖಲು ಮಾಡಿಕೊಂಡು ಇಲಾಖೆಯ ಸೇವೆ ಒದಗಿಸಲಾಗುತ್ತಿದೆ. ಅದಕ್ಕೆ ಫೇಸ್ ರಿಕಾಗ್ನೈಜೆಷನ್ ಸಿಸ್ಟಮ್ ಅವಶ್ಯವಿದ್ದು ಜಿಲ್ಲೆಯ ಒಟ್ಟು 1,22,298 ಫಲಾನುಭವಿಗಳ ಪೈಕಿ 1,19,841 ಫಲಾನುಭವಿಗಳನ್ನು ಫೇಸ್ ರಿಕಾಗ್ನೈಜೆಷನ್ ಸಿಸ್ಟಮ್‌ನಲ್ಲಿ ದಾಖಲಿಸಲಾಗಿದೆ. ಇನ್ನುಳಿದ 2,449 ಬಾಕಿ ಉಳಿದಿರುವ ಫಲಾನುಭವಿಗಳ ಪೈಕಿ, ಕೆಲವು ಆಧಾರ್ ಕಾರ್ಡ್ ಸಮಸ್ಯೆ, ಜನನ ಪ್ರಮಾಣ ಪತ್ರ ಇಲ್ಲದಿರುವುದು, ಆಧಾರ ತಿದ್ದುಪಡಿ ಕಾರಣಗಳಿಂದ ಬಾಕಿ ಉಳಿದಿವೆ ಎಂದು ಮಾಹಿತಿ ನೀಡಿದರು. ಅಂಗನವಾಡಿ ಕೇಂದ್ರಕ್ಕೆ ಆಗಮಿಸಿದ್ದ ಗೊಲ್ಲ, ದುರ್ಗಮುರಗಿ ಹಾಗೂ ಇತರ ಅಲೆಮಾರಿ ಸಮಯದಾಯಗಳ ಗರ್ಭಿಣಿಯರು ಹಾಗೂ ಬಾಣಂತಿಯರನ್ನು ಮಾತನಾಡಿಸಿದ ಜಿಲ್ಲಾಧಿಕಾರಿ, ಅವರ ಮಕ್ಕಳ ಹಾಗೂ ಮಹಿಳಾ ಫಲಾನುಭವಿಗಳ ಫೇಸ್ ರಿಕಾಗ್ನೈಜೆಷನ್ ಸಿಸ್ಟಮ್ ಮಾಡುವ ಸಂದರ್ಭದಲ್ಲಿ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚಿಸಿ, ಮಾಹಿತಿ ಪಡೆದುಕೊಂಡರು. ಸೂಕ್ತ ಕ್ರಮಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.ಮಧ್ಯಾಹ್ನದ ಬಿಸಿಯೂಟದಲ್ಲಿ ಅನ್ನ, ಸಾರು, ಮೊಟ್ಟೆ ಹಾಗೂ ಬಾಳೆಹಣ್ಣುನ್ನು ಸ್ವತಃ ಜಿಲ್ಲಾಧಿಕಾರಿ ಹಾಗೂ ಜಿಪಂ ಸಿಇಒ ಸೇವಿಸಿದರು. ಮಕ್ಕಳಿಗೆ, ಗರ್ಭಿಣಿಯರಿಗೆ, ಬಾಣಂತಿಯರಿಗೆ ಕೊಡುವ ಆಹಾರ ಸರ್ಕಾರದ ನಿಯಮಾನುಸಾರ ಇರಬೇಕು. ಆಹಾರದ ತೂಕ ಮತ್ತು ಪೌಷ್ಟಿಕಾಂಶದಲ್ಲಿ ವ್ಯತ್ಯಾಸ ಆಗಬಾರದು. ಅಂಗನವಾಡಿ ಕೇಂದ್ರಕ್ಕೆ ಬರುವ ಮಕ್ಕಳನ್ನು, ಗರ್ಭಿಣಿಯರನ್ನು ತಾಯಿಯಂತೆ ಮಾತೃ ಹೃದಯದಿಂದ ಕಾಣಬೇಕು ಎಂಬ ಸೂಚನೆಗಳನ್ನು ಅಧಿಕಾರಿಗಳಿಗೆ ನೀಡಿದರು. ತಹಸೀಲ್ದಾರ್ ಡಾ. ಡಿ.ಎಚ್. ಹೂಗಾರ, ಅಧಿಕಾರಿಗಳಾದ ಡಾ. ಕಮಲಾ ಬೈಲೂರ, ಸುನಿತಾ ಪಾಟೀಲ, ಭಾಗ್ಯಶ್ರೀ ಹುಗ್ಗಿ, ಶಾಂತಗೌಡ ಬಿರಾದಾರ, ರೇಣುಕಾ ಅಸುಂಡಿ, ನೇತ್ರಾವತಿ ಎಚ್.ಎಸ್., ರೇಣುಕಾ ವಾಲ್ಮೀಕಿ, ರತ್ನವ್ವ ಶಿರನೂರ, ರತ್ನಾ ಕೋಟಿ ಇದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))