ಸಾರಾಂಶ
ಹಾನಗಲ್ಲ: ಅಂಗನವಾಡಿಗಳಲ್ಲಿ ಮಧ್ಯಾಹ್ನದ ಮಕ್ಕಳ ಊಟದ ನಂತರ ಕಡ್ಡಾಯವಾಗಿ ಸೊಳ್ಳೆ ಪರದೆ ಕಟ್ಟಿಯೇ ಮಕ್ಕಳನ್ನು ವಿಶ್ರಾಂತಿಗೆ ಮಲಗಿಸಬೇಕಲ್ಲದೆ, ಪ್ರತಿ ಗ್ರಾಮಗಳಲ್ಲಿ ಸ್ವಚ್ಛತೆಯ ಬಗೆಗೆ ಅರಿವು ಮೂಡಿಸುವ ಅಗತ್ಯವಿದ್ದು, ಶಿಶು ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕರು ಹಾಗೂ ಯೋಜನಾಧಿಕಾರಿಗಳೂ ಆರೋಗ್ಯ ಇಲಾಖೆಯ ಸಿಬ್ಬಂದಿ ಸಹಕಾರದೊಂದಿಗೆ ಕಾಳಜಿಯಿಂದ ಕೆಲಸ ಮಾಡುವಂತೆ ತಾಲೂಕು ವೈದ್ಯಾಧಿಕಾರಿ ಡಾ. ಲಿಂಗರಾಜ ತಿಳಿಸಿದರು.ಹಾನಗಲ್ಲಿನ ಆರೋಗ್ಯ ಇಲಾಖೆಯ ಕಾರ್ಯಾಲಯದಲ್ಲಿ ನಡೆದ ಆರೋಗ್ಯ ಜಾಗೃತಿ ಸಭೆಯಲ್ಲಿ ಮಾತನಾಡಿದ ಅವರು, ರೋಗ ಹರಡುವ ಮುನ್ನವೇ ಮುನ್ನೆಚ್ಚರಿಕೆ ಕ್ರಮ ಜರುಗಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಅರಿತೋ ಅರಿಯದೆಯೋ ಮನೆ ಹಾಗೂ ಮನೆಯ ಸುತ್ತಮುತ್ತ ಕೊಳಚೆ ಹಾಗೂ ಶುದ್ಧವಿಲ್ಲದ ನೀರಿನ ಸಂಗ್ರಹ ಕಾಣಿಸುತ್ತವೆ. ಅಂತಹವುಗಳನ್ನು ಕೂಡಲೇ ತೆರವುಗೊಳಿಸಲು ಮುಂದಾಗಬೇಕು. ನೀರು ನಿಲ್ಲದಂತೆ ಕ್ರಮ ಜರುಗಿಸಬೇಕು. ಸೊಳ್ಳೆ ಉತ್ಪತ್ತಿಯಾಗುವಂತಹ ಸ್ಥಳಗಳನ್ನು ಸ್ವಚ್ಛಗೊಳಿಸಲು ಕ್ರಮ ಜರುಗಿಸಬೇಕು. ತೆಂಗಿನ ಚಿಪ್ಪು ಹಾಗೂ ಚಿಕ್ಕ ಚಿಕ್ಕ ನೀರು ನಿಲ್ಲುವ ವಸ್ತುಗಳನ್ನು ತೆರವುಗೊಳಿಸಬೇಕು. ಏರ್ ಕೂಲರ್, ಒಡೆದ ಟೈರ್‌ಗಳಲ್ಲಿ ಅರಿವಿಲ್ಲದೆ ನೀರು ಸಂಗ್ರಹವಾಗಿ ಡೆಂಘೀ ಸೊಳ್ಳೆಯ ಉತ್ಪತ್ತಿ ಸಾಧ್ಯತೆಗಳಿವೆ ಎಂದು ಎಚ್ಚರಿಸಿದರು.ಪ್ರತಿ ಗ್ರಾಮಗಳಲ್ಲಿ ಗ್ರಾಮ ಪಂಚಾಯಿತಿಗಳ ಮೂಲಕ ಫಾಗಿಂಗ್ ಮಾಡಿಸಲು ಮುಂದಾಗಬೇಕು. ಅಂಗನವಾಡಿಗಳಲ್ಲಿ ಮಕ್ಕಳನ್ನು ಮಧ್ಯಾಹ್ನದ ಊಟದ ನಂತರ ವಿಶ್ರಾಂತಿಗಾಗಿ ಮಲಗಿಸುವ ಸಂದರ್ಭದಲ್ಲಿ ಕಡ್ಡಾಯವಾಗಿ ಸೊಳ್ಳೆ ಪರದೆ ಕಟ್ಟಿ ರಕ್ಷಣೆ ನೀಡಿ ಮಕ್ಕಳಿಗೆ ಮಲಗಲು ಅವಕಾಶ ಮಾಡಬೇಕು. ಅಂಗನವಾಡಿಗಳ ಸುತ್ತ ಸ್ವಚ್ಛತೆ ಕಾಪಾಡಬೇಕು. ಈಗ ಎಲ್ಲೆಡೆ ಡೆಂಘೀ ಹರಡುತ್ತಿರುವುದರಿಂದ ಸಂಬಂಧಿಸಿದ ಎಲ್ಲ ಇಲಾಖೆಯ ನೌಕರರು ಅನಿವಾರ್ಯವಾಗಿ ಸ್ವಚ್ಛತಾ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಲ್ಲಿಕಾರ್ಜುನ ಕೆಂಪೆಳ್ಳೇರ ಮಾತನಾಡಿ, ಕಳೆದ ಎರಡು ವರ್ಷಗಳ ಹಿಂದೆಯೇ ಎಲ್ಲ ಅಂಗನವಾಡಿಗಳಿಗೆ ಸೊಳ್ಳೆ ಪರದೆಗಳನ್ನು ವಿತರಿಸಲಾಗಿದೆ. ಎಲ್ಲ ಅಂಗನವಾಡಿಗಳಲ್ಲಿ ಕಡ್ಡಾಯವಾಗಿ ಸೊಳ್ಳೆ ಪರದೆ ಕಟ್ಟಿಯೇ ಮಧ್ಯಾಹ್ನದ ಊಟದ ನಂತರ ಮಕ್ಕಳ ವಿಶ್ರಾಂತಿಗೆ ಅನುವು ಮಾಡಿಕೊಡಬೇಕು. ತಪ್ಪಿದಲ್ಲಿ ಆಗುವ ಅನಾನುಕೂಲಕ್ಕೆ ಅಂಗನವಾಡಿ ಮೇಲ್ವಿಚಾರಕರೇ ಹೊಣೆಯಾಗಬೇಕಾಗುತ್ತದೆ. ಮಕ್ಕಳ ಆರೋಗ್ಯಕ್ಕಾಗಿ ಹೆಚ್ಚು ಕಾಳಜಿ ಜವಾಬ್ದಾರಿ ವಹಿಸುವಂತೆ ಸೂಚಿಸಿದರು.