ಸಾರಾಂಶ
ಹಳಿಯಾಳ: ಕಣ್ಣು ಬದುಕಿನ ಬೆಳಕು. ಕಣ್ಣು ಮಾನವನ ಶರೀರದ ಪ್ರಮುಖ ಅಂಗ. ಕಣ್ಣಿಗೆ ತೊಂದರೆಯಾದರೆ ಜೀವನದ ಬೆಳಕನ್ನು ಕಳೆದುಕೊಂಡಂತೆ. ಆದ್ದರಿಂದ ಕಣ್ಣಿನ ಆರೋಗ್ಯದ ಕಡೆ ಗಮನ ಹರಿಸುವುದು ಅವಶ್ಯ ಎಂದು ಕೆನರಾ ಬ್ಯಾಂಕ್ ದೇಶಪಾಂಡೆ ಆರ್‌ಸೆಟಿ ಕಾರ್ಯಕಾರಿಣಿ ಮಂಡಳಿಯ ಅಧ್ಯಕ್ಷ ಪ್ರಸಾದ ಆರ್. ದೇಶಪಾಂಡೆ ತಿಳಿಸಿದರು.
ವಿಆರ್‌ಡಿಎಂ ಟ್ರಸ್ಟ್ ಸಂಸ್ಥಾಪಕರ ದಿನಾಚರಣೆ ಅಂಗವಾಗಿ ಮಂಗಳವಾರ ಕೆನರಾ ಬ್ಯಾಂಕ್ ದೇಶಪಾಂಡೆ ಆರ್‌ಸೆಟಿ ಸಂಸ್ಥೆಯ ಸಭಾಭವನದಲ್ಲಿ ಆಯೋಜಿಸಿದ್ದ ಉಚಿತ ಕಣ್ಣಿನ ಪೊರೆ ತಪಾಸಣೆ ಮತ್ತು ಶಸ್ತ್ರಚಿಕಿತ್ಸಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ವಿ.ಆರ್. ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್ ಹಾಗೂ ಕೆನರಾ ಬ್ಯಾಂಕ್ ದೇಶಪಾಂಡೆ ಆರ್‌ಸೆಟಿ ಸಂಸ್ಥೆಗಳು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿವೆ. ಪ್ರಸ್ತುತ ಆಯೋಜಿಸಿದ ಕಣ್ಣಿನ ಉಚಿತ ತಪಾಸಣಾ ಶಿಬಿರದ ಪ್ರಯೋಜನ ಪಡೆದುಕೊಳ್ಳಲು ಮನವಿ ಮಾಡಿದರು.ಕೆನರಾ ಬ್ಯಾಂಕ್ ದೇಶಪಾಂಡೆ ಆರ್‌ಸೆಟಿ ಸಂಸ್ಥೆಯ ನಿದೇಶಕ ಪ್ರಶಾಂತ ಬಡ್ಡಿ ಅವರು, ಸಂಸ್ಥೆಯಲ್ಲಿ ಸಿಗುವ ಸ್ವಾವಲಂಬಿ ಕೌಶಲ್ಯ ತರಬೇತಿಗಳ ಬಗ್ಗೆ ಮಾಹಿತಿ ನೀಡಿದರು.
ಮುಖ್ಯ ಅತಿಥಿ ಹುಬ್ಬಳ್ಳಿ ಎಂ.ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆಯ ವೈಧ್ಯ ಉತ್ತರಾ ಭಟ್ಟ ಮಾತನಾಡಿ, ಕಣ್ಣಿನ ಪೊರೆಯ ಬಗ್ಗೆ ಸರ್ಮಪಕ ಮಾಹಿತಿಯನ್ನು ತಿಳಿಸಿದರು. ಹುಬ್ಬಳ್ಳಿ ಎಂ.ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆಯ ಸಾರ್ವಜನಿಕ ಸಂಪರ್ಕಾಧಿಕಾರಿ ರಾಘು ಕೆಳಗೇರ ಮಾತನಾಡಿ, ಜೋಶಿ ವಿಜ್ಞಾನ ಸಂಸ್ಥೆಯಲ್ಲಿ ದೊರೆಯುವ ಸೌಲಭ್ಯಗಳನ್ನು ತಿಳಿಸಿದರು.ಶಿಬಿರದಲ್ಲಿ ಪಟ್ಟಣ ಹಾಗೂ ಗ್ರಾಮೀಣ ಭಾಗದ 148 ಜನರ ಕಣ್ಣಿನ ತಪಾಸಣೆ ಮಾಡಲಾಯಿತು. ಇದರಲ್ಲಿ ಉಚಿತ ಕಣ್ಣಿನ ಪೊರೆಯ ಶಸ್ತ್ರಚಿಕಿತ್ಸೆಗಾಗಿ 71 ಜನರಿಗೆ ಆಯ್ಕೆ ಮಾಡಲಾಯಿತು. ಇವರನ್ನು ಹುಬ್ಬಳ್ಳಿ ಎಂ.ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆಯ ಆಸ್ಪತ್ರೆಯಲ್ಲಿ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ಮಾಡಿಸಲಾಗುವುದು ಎಂದು ಸಂಘಟಕರು ತಿಳಿಸಿದರು.
ವಿ.ಆರ್. ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್, ಕೆನರಾ ಬ್ಯಾಂಕ್ ದೇಶಪಾಂಡೆ ಆರ್‌ಸೆಟಿ ಹಳಿಯಾಳ, ಜಿಲ್ಲಾ ಅಂಧತ್ವ ನಿವಾರಣಾ ವಿಭಾಗ ಕಾರವಾರ, ಎಸ್‌ಜಿಎಂಐ ಬ್ಯಾಂಕ್ ಮತ್ತು ಸಂಶೋಧನಾ ಸಂಸ್ಥೆ ಹುಬ್ಬಳ್ಳಿ ಮತ್ತು ಎಂ.ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆ ಹುಬ್ಬಳ್ಳಿ ಇವರು ಶಿಬಿರವನ್ನು ಜಂಟಿಯಾಗಿ ಆಯೋಜಿಸಿದ್ದರು.ವಿಆರ್‌ಡಿಎಂ ಟ್ರಸ್ಟ್ ಕಾರ್ಯದರ್ಶಿ ಶ್ಯಾಮ ಕಾಮತ, ಪ್ರಾಥಮಿಕ ಆರೋಗ್ಯ ಕೇಂದ್ರ ಸಾಂಬ್ರಾಣಿಯ ನೇತ್ರ ಸಹಾಯಕ ತಾಜುದ್ದಿನ ಬಳ್ಳಾರಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಯೋಜನಾ ಸಂಯೋಜಕ ವಿನಾಯಕ ಚವ್ಹಾಣ, ವಿಷ್ಣು ಮಡಿವಾಳ, ಕ್ಷೇತ್ರ ಮೇಲ್ವಿಚಾರಕ ಸಂತೋಷ ಸಿದ್ನೇಕೊಪ್ಪ, ವಿನೋದ ಅಗಸರ, ನಾರಾಯಣ ಗೊಂಧಳಿ ಮತ್ತು ಎಂ.ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆಯ ಸಿಬ್ಬಂದಿ ಇದ್ದರು.