ಸಾರಾಂಶ
ಹಳಿಯಾಳ: ಬದುಕಿನಲ್ಲಿ ವಿದ್ಯಾರ್ಥಿ ಜೀವನವು ಅತ್ಯಂತ ಮಹತ್ವದ ಹಂತವಾಗಿದೆ. ಈ ಮಹತ್ವದ ಗಳಿಗೆಯನ್ನು ಸದುಪಯೋಗಪಡಿಸಿ ಕೊಂಡರೆ ಉತ್ತಮ ವ್ಯಕ್ತಿತ್ವ ನಿರ್ಮಾಣಕ್ಕೆ ಅಡಿಪಾಯ ಹಾಕಿದಂತಾಗುತ್ತದೆ ಎಂದು ಸಿಬಿಡಿ ಆರ್ಸೆಟಿ ಸಂಸ್ಥೆಯ ಹಿರಿಯ ಸಲಹೆಗಾರ ಅನಂತಯ್ಯ ಆಚಾರ್ಯ ಹೇಳಿದರು.
ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟಿ ಸಂಸ್ಥೆ ಹಳಿಯಾಳ ಮತ್ತು ವೆಸ್ಟ್ಕೊಸ್ಟ್ ಪೇಪರ್ ಮಿಲ್, ಲಿಮಿಟೆಡ್ ದಾಂಡೇಲಿ ಅವರ ಸಂಯುಕ್ತ ಆಶ್ರಯದಲ್ಲಿ ಪದವಿ ಅಂತಿಮ ವರ್ಷದ ವಿದ್ಯಾರ್ಥಿಗಳಿಗಾಗಿ ಸೋಮವಾರದಿಂದ ಆರಂಭಗೊಂಡ 6ದಿನಗಳ ನಾಯಕತ್ವ ಮತ್ತು ವ್ಯಕ್ತಿತ್ವ ವಿಕಸನ ತರಬೇತಿಯ ಉದ್ಘಾಟನಾ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಕಲಿಕೆಯೊಂದಿಗೆ ವ್ಯಕ್ತಿತ್ವ ಚಾರಿತ್ರ್ಯ ನಿರ್ಮಾಣಕ್ಕೂ ಕಾಳಜಿ ವಹಿಸಬೇಕು. ವ್ಯಕ್ತಿಗಿಂತ ವ್ಯಕ್ತಿತ್ವ ಮುಖ್ಯವಾದದ್ದು, ವ್ಯಕ್ತಿತ್ವ ಅನೇಕ ಶಕ್ತಿಗಳ ಸಂಗಮವಾಗಿದೆ. ಆದರ್ಶ, ಸದಾಚಾರ, ಶ್ರದ್ಧೆ, ನಿಷ್ಠೆ, ದಕ್ಷತೆ, ಸಾಮರ್ಥ್ಯ, ವೃತ್ತಿಪ್ರಿಯತೆ, ಪರೋಪಕಾರ ಬುದ್ಧಿ, ಪ್ರಾಮಾಣಿಕತೆ ಮೊದಲಾದವುಗಳು ವ್ಯಕ್ತಿತ್ವ ನಿರ್ಮಿಸುವ ಪ್ರಮುಖ ಶಕ್ತಿಗಳಾಗಿವೆ. ಅದಕ್ಕಾಗಿ ಶಿಕ್ಷಣದ ಜೊತೆಯಲ್ಲಿ ಉತ್ತಮ ವ್ಯಕ್ತಿತ್ವ ರೂಪಿಸಲು ಮೊದಲ ಆದ್ಯತೆ ನೀಡಬೇಕು ಎಂದರು.
ಚೆನ್ನಬಸವೇಶ್ವರ ಇಂಗ್ಲಿಷ್ ಮಾದ್ಯಮ ಶಾಲೆಯ ಆಡಳಿತಾಧಿಕಾರಿ ಕರಿಯಪ್ಪ ಕೆ. ವಾಲ್ಮೀಕಿ ಮಾತನಾಡಿ, ಪ್ರತಿ ವ್ಯಕ್ತಿಗೆ ಶಿಕ್ಷಣ ಅತ್ಯಗತ್ಯ. ನಾವು ನಮ್ಮ ಗುರಿಯನ್ನು ಸಾಧಿಸಲು ನಿರಂತರ ಶ್ರಮ ಮಾಡಬೇಕು. ಜೀವನದಲ್ಲಿ ಎದುರಾಗುವ ಸವಾಲುಗಳನ್ನು ಗಟ್ಟಿಯಾಗಿ ಎದುರಿಸಬೇಕು ಎಂದರು.ದಾಂಡೇಲಿ ವೆಸ್ಟ್‌ಕೋಸ್ಟ್ ಪೇಪರ್ ಮಿಲ್ ಅಧಿಕಾರಿ ಖಲೀಲ ಕುಲಕರ್ಣಿ ಮಾತನಾಡಿ, ವಿದ್ಯಾರ್ಥಿಗಳು ಅನಗತ್ಯ ವಿಷಯಗಳಿಗೆ ಆಸಕ್ತರಾಗದೇ ಅವರ ಭವಿಷ್ಯ ನಿರ್ಮಾಣಕ್ಕೆ ಬೇಕಾದ ವಿಷಯಗಳ ಬಗ್ಗೆ ಕೇಂದ್ರೀಕೃತವಾಗಬೇಕು. ವ್ಯಕ್ತಿತ್ವ ವಿಕಸನ, ಮುಖಂಡತ್ವ ನಿರ್ಮಾಣದಂತಹ ಶಿಬಿರಗಳ ಪ್ರಯೋಜನ ಪಡೆದುಕೊಳ್ಳಬೇಕೆಂದರು.
ಸಿಬಿಡಿ ಆರ್ಸೆಟಿ ಸಂಸ್ಥೆಯ ಯೋಜನಾ ಸಂಯೋಜಕ ವಿನಾಯಕ ಚವ್ಹಾಣ, ಸಂಸ್ಥೆಯ ಚಟುವಟಿಕೆಗಳು ಹಾಗೂ ಕಾರ್ಯಾಗಾರದ ಉದ್ದೇಶಗಳ ಬಗ್ಗೆ ಮಾಹಿತಿ ನೀಡಿ ಆರು ದಿನಗಳ ಕಾರ್ಯಾಗಾರದಲ್ಲಿ ನಾಯಕತ್ವ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವುದು ಮತ್ತು ಪರಿಣಾಮಕಾರಿ ನಾಯಕನ ಗುಣಗಳು, ಸಂಪರ್ಕ ಮತ್ತು ಪ್ರಭಾವಶಾಲಿ ಸಂವಹನ ತಂತ್ರಗಳು, ಸಮಯವನ್ನು ಸಮರ್ಪಕವಾಗಿ ನಿರ್ವಹಿಸುವುದು, ಟೀಮ್ ವರ್ಕ್ ಮತ್ತು ಸಹಕಾರದ ಮಹತ್ವವನ್ನು ಅರ್ಥಮಾಡಿಕೊಳ್ಳುವುದು, ಗುರಿ ಹೊಂದಿಕೆ ಮತ್ತು ಯಶಸ್ಸಿನ ತಂತ್ರಗಳು, ವ್ಯಕ್ತಿತ್ವ ವಿಕಾಸ ಮತ್ತು ಆತ್ಮವಿಶ್ವಾಸವನ್ನು ಬೆಳೆಸುವುದು ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ಮತ್ತು ಎದುರಿಸುವ ತಂತ್ರಗಳು ಮೊದಲಾದ ವಿಷಯಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಲಾಗುವುದು ಎಂದರು.ದಾಂಡೇಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಬಂಗೂರ ನಗರ ಪದವಿ ಕಾಲೇಜಿನ ವಿದ್ಯಾರ್ಥಿಗಳು ಈ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು. ಸಂಸ್ಥೆಯ ತರಬೇತಿ ಸಂಯೋಜಕ ಕೊಂಡು ಕೋಕರೆ, ಉಳವಯ್ಯಾ ಬೇಂಡಿಗೇರಿ ಮತ್ತು ಸಂತೋಷ ಸಿದ್ನೆಕೋಪ್ಪ, ವಿಷ್ಣು ಮಡಿವಾಳ ಮೊದಲಾದವರು ಇದ್ದರು.