ನಿಮ್ಮ ತಟ್ಟೆಯಲ್ಲಿ ಕತ್ತೆ ಬಿದ್ದಿದೆ ಅದನ್ನ ನೋಡಿಕೊಳ್ಳಿ: ಶಾಸಕ ರಾಜು ಕಾಗೆ

| Published : Aug 13 2024, 12:58 AM IST

ನಿಮ್ಮ ತಟ್ಟೆಯಲ್ಲಿ ಕತ್ತೆ ಬಿದ್ದಿದೆ ಅದನ್ನ ನೋಡಿಕೊಳ್ಳಿ: ಶಾಸಕ ರಾಜು ಕಾಗೆ
Share this Article
  • FB
  • TW
  • Linkdin
  • Email

ಸಾರಾಂಶ

ಕಾಗವಾಡತಮ್ಮ ತಟ್ಟೆಯಲ್ಲಿ ಕತ್ತೆ ಬಿದ್ದಿದೆ. ಬೇರೆಯವರ ತಟ್ಟೆಯಲ್ಲಿನ ನೋಣದ ಬಗ್ಗೆ ಮಾತನಾಡುವುದು ಎಷ್ಟು ಸರಿ ಎಂದು ಬಿಜೆಪಿ ನಾಯಕರಿಗೆ ಕಾಗವಾಡ ಶಾಸಕ ರಾಜು ಕಾಗೆ ತರಾಟೆಗೆ ತೆಗೆದುಕೊಂಡಿದ್ದಾರೆ.

ಕನ್ನಡಪ್ರಭ ವಾರ್ತೆ ಕಾಗವಾಡ

ತಮ್ಮ ತಟ್ಟೆಯಲ್ಲಿ ಕತ್ತೆ ಬಿದ್ದಿದೆ. ಬೇರೆಯವರ ತಟ್ಟೆಯಲ್ಲಿನ ನೋಣದ ಬಗ್ಗೆ ಮಾತನಾಡುವುದು ಎಷ್ಟು ಸರಿ ಎಂದು ಬಿಜೆಪಿ ನಾಯಕರಿಗೆ ಕಾಗವಾಡ ಶಾಸಕ ರಾಜು ಕಾಗೆ ತರಾಟೆಗೆ ತೆಗೆದುಕೊಂಡಿದ್ದಾರೆ.

ಸೋಮವಾರ ಮದಬಾವಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿದ ಅಂಗನವಾಡಿ ಕಟ್ಟಡ ಉದ್ಘಾಟಿಸಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೂಡಾ ಹಗರಣ ಕುರಿತು ಸಿಎಂ ಸಿದ್ದರಾಮಯ್ಯ ವಿರುದ್ಧ ಪಾದಯಾತ್ರೆ ಹಮ್ಮಿಕೊಂಡ ಬಿಜೆಪಿ ನಾಯಕರ ವರ್ತನೆ ಸರಿಯಲ್ಲ. ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪನವರ ಕೊರಳಿಗೆ ಆರೋಪಗಳ ಸರಮಾಲೆಯೇ ಇದೆ. ರಾಜ್ಯದಲ್ಲಿ ನೂರಾರು ಸಮಸ್ಯೆಗಳಿವೆ, ನೆರೆ, ಬರ ಸಮಸ್ಯೆ ಬಗ್ಗೆ ಯಾರೂ ಮಾತನಾಡುತ್ತಿಲ್ಲ. ನೆರೆ ಹಾವಳಿಯಲ್ಲಿ ಸಾವಿರಾರು ಎಕರೆ ಭೂ ಪ್ರದೇಶದ ಬೆಳೆಗಳು ನಾಶವಾಗಿವೆ. ಇತ್ತ ಬಸವೇಶ್ವರ ಏತ ನೀರಾವರಿ ಕುರಿತು ಯಾರೂ ಧ್ವನಿ ಎತ್ತುತ್ತಿಲ್ಲ, ಹೋದ ವರ್ಷವೇ ಯೋಜನೆ ಆರಂಭವಾಗಬೇಕಿತ್ತು. ಆದರೆ, ಈವರೆಗೂ ಆರಂಭವಾಗಿಲ್ಲ. ಕಳೆದ ವರ್ಷ ಬರ ಅವರಿಸಿದ್ದರೆ, ಈ ಬಾರಿ ಅತಿವೃಷ್ಟಿಯಿಂದ ಬೆಳೆಗಳು ಹಾಳಾಗಿವೆ. ರೈತರ ಸಮಸ್ಯೆ ಕುರಿತು ಯಾರೂ ಹೋರಾಟ ಮಾಡಲಿಲ್ಲ. ಬಿಜೆಪಿ ಹಾಗೂ ಜೆಡಿಎಸ್ ನವರಿಗೆ ಮಾಡಲು ಬೇರೆ ಕೆಲಸವಿಲ್ಲ. ಅದಕ್ಕಾಗಿ ಮೂಡಾ ಹಗರಣ ಎಂದು ಹೋರಾಟ ಮಾಡುತ್ತಿದ್ದಾರೆ. ಇವರ ಹೋರಾಟಕ್ಕೆ ಯಾವುದೇ ಅರ್ಥವಿಲ್ಲ ಎಂದರು.

ಬಿಜೆಪಿ ಮನೆಯೊಂದು ಮೂರು ಬಾಗಿಲು ಎಂಬಂತಾಗಿದೆ. ತಮ್ಮ ಶಾಸಕರ ಮಧ್ಯೆಯೇ ಹಲವು ಭಿನ್ನಾಭಿಪ್ರಾಯಗಳಿವೆ. ಬಿಜೆಪಿ ನೈತಿಕತೆ ಮರೆತಿದೆ ಎಂದು ಟೀಕಿಸಿದರು. ಜಿಪಂ ಮಾಜಿ ಸದಸ್ಯ ವಿನಾಯಕ ಬಾಗಡಿ ಪಿಕೆಪಿಎಸ್ ಅಧ್ಯಕ್ಷ ನಿಜಗುಣಿ ಮಗದುಮ್ಮ, ಅಶೋಕ ಪುಜಾರಿ, ಶಿವಾನಂದ ಮಗದುಮ್ಮ, ಕೆ.ಆರ್. ಪಾಟೀಲ ಮತ್ತಿತರರು ಇದ್ದರು.