ಸಾರಾಂಶ
ಚಿತ್ರದುರ್ಗದದ ಸರ್ಕಾರಿ ಕಲಾ ಕಾಲೇಜಿನಲ್ಲಿ ಪ್ರಥಮ ಚಿಕಿತ್ಸಾ ದಿನಾಚರಣೆಯನ್ನು ಪ್ರಾಂಶುಪಾಲ ಡಾ.ಕರಿಯಪ್ಪ ಮಾಳಿಗೆ ಉದ್ಘಾಟಿಸಿದರು.
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ವಿದ್ಯಾರ್ಥಿಗಳು ವಿದ್ಯಾರ್ಜನೆಯ ಜತೆಗೆ ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಸಹಕರಿಸಬೇಕು ಎಂದು ಸರ್ಕಾರಿ ಕಲಾ ಕಾಲೇಜು ಪ್ರಾಂಶುಪಾಲ ಡಾ.ಜೆ.ಕರಿಯಪ್ಪ ಮಾಳಿಗೆ ತಿಳಿಸಿದರು.ನಗರದ ಸರ್ಕಾರಿ ಕಲಾ ಕಾಲೇಜಿನ ಡಾ.ಬಿ.ಆರ್.ಅಂಬೇಡ್ಕರ್ ಜ್ಞಾನ ಸಭಾಂಗಣದಲ್ಲಿ ಭಾರತೀಯ ರೆಡ್‍ಕ್ರಾಸ್ ಜಿಲ್ಲಾ ಶಾಖೆ, ರಾಷ್ಟ್ರೀಯ ಸೇವಾ ಯೋಜನೆ, ಯುವ ರೆಡ್ ಕ್ರಾಸ್ ಹಾಗೂ ಸೌಖ್ಯ ಹೆಲ್ತ್ ಮತ್ತು ಸ್ಕಿನ್ ಕೇರ್ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಪ್ರಥಮ ಚಿಕಿತ್ಸಾ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಯುವ ಪೀಳಿಗೆ ಶೈಕ್ಷಣಿಕ ಸಾಧನೆ ಮಾಡಬೇಕಾದರೆ ಉತ್ತಮ ಆರೋಗ್ಯ ಹೊಂದುವುದು ಅಗತ್ಯವೆಂದರು.
ಸಂಪನ್ಮೂಲ ವ್ಯಕ್ತಿ ಡಾ.ಸಂತೋಷ ಉಜ್ಜನಪ್ಪ ಮಾತನಾಡಿ, ಅಪಘಾತ, ಸುಟ್ಟ ಗಾಯ, ಬೆಂಕಿ ಅವಘಡ, ಮೂರ್ಛೆ, ಮೂಳೆ ಮುರಿತ, ಕಾಲ್ತುಳಿತ ಮುಂತಾದ ಅವಘಡಗಳು ಸಂಭವಿಸಿದಾಗ ಅದನ್ನು ಸಮರ್ಥವಾಗಿ ಎದುರಿಸುವ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಿದರು. ಹೃದಯಾಘಾತ ಮತ್ತು ಹೃದಯ ಸ್ಥಂಬನ ಸಂಭವಿಸಿದಾಗ ಹೇಗೆ ರಕ್ಷಿಸಬಹುದು ಎಂಬುದನ್ನು ಪ್ರಾತ್ಯಕ್ಷಿಕೆಯ ಮೂಲಕ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿದರು.ಜಿಲ್ಲಾಸ್ಪತ್ರೆಯ ಬಸವರಾಜಪ್ಪ ಸೋಂಕು ರೋಗಗಳ ಹರಡುವಿಕೆ, ಅದರ ಅಪಾಯಗಳು ಮತ್ತು ಅದರಿಂದ ರಕ್ಷಿಸಿಕೊಳ್ಳುವ ವಿವಿಧ ವಿಧಾನಗಳನ್ನು ತಿಳಿಸಿದರು. ವಿಶೇಷವಾಗಿ ಏಡ್ಸ್ ಸೋಂಕಿತರನ್ನು ಮಾನವೀಯತೆ ದೃಷ್ಟಿಯಿಂದ ನೋಡುವಲ್ಲಿ ಕಾನೂನಿನ ರಕ್ಷಣೆ ಕುರಿತು ತಿಳಿಸಿದರು.
ಯುವ ರೆಡ್ ಕ್ರಾಸ್ ಸಂಚಾಲಕ ಡಾ.ಪ್ರದೀಪ್ ಪ್ರಾಸ್ತಾವಿಕ ಮಾತನಾಡಿದರು. ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮಾಧಿಕಾರಿ ಡಾ.ವಿ.ಪ್ರಸಾದ್ ಮತ್ತು ಪ್ರೊ.ಬಿ.ಕೆ.ಬಸವರಾಜ, ರೆಡ್ ಕ್ರಾಸ್ ಸಭಾಪತಿ ಗಾಯಿತ್ರಿ ಶಿವರಾಮ್, ಉಪ ಸಭಾಪತಿ ಈ.ಅರುಣ್ ಕುಮಾರ್, ಕಾರ್ಯದರ್ಶಿ ಮಜಹರ್ ಉಲ್ಲಾ, ನಿರ್ದೇಶಕರಾದ ಶಿವರಾಮ್, ಎಸ್.ವಿ.ಗುರುಮೂರ್ತಿ, ಡಾ.ಮಧುಸೂದನ್ ರೆಡ್ಡಿ ಇದ್ದರು.