ಸಾರಾಂಶ
ಹಾವೇರಿ: ಬೇಸಿಗೆಯಲ್ಲಿ ಬಿಸಿಲಿನ ತಾಪದಿಂದ ಉಷ್ಣಾಂಶವು ಹೆಚ್ಚಾಗಿರುವುದರಿಂದ ಮನುಷ್ಯರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುವ ಸಾಧ್ಯತೆ ಇದ್ದು, ಸಾರ್ವಜನಿಕರು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವ ಮೂಲಕ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ತಿಳಿಸಿದರು. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹವಾಮಾನ ಬದಲಾವಣೆ ಮತ್ತು ಮಾನವನ ಆರೋಗ್ಯ ಕುರಿತು ರಾಷ್ಟ್ರೀಯ ಕಾರ್ಯಕ್ರಮ, ಕೀಟಜನ್ಯ ರೋಗಗಳ ನಿಯಂತ್ರಣ ಕಾರ್ಯಕ್ರಮ ಹಾಗೂ ಅಂತರ್ ಇಲಾಖಾ ಸಮನ್ವಯ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬೇಸಿಗೆಯಲ್ಲಿ ಸಾರ್ವಜನಿಕರು ಅನುಸರಿಸಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಸಾರ್ವಜನಿಕರಿಗೆ ಅರಿವು ಮೂಡಿಸಬೇಕು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಮನೆಯಿಂದ ಹೊರಗಡೆ ಹೋಗುವಾಗ ಸಡಿಲವಾದ ತೆಳು ಬಿಳಿ ಬಣ್ಣದ ಹತ್ತಿ ಬಟ್ಟೆ ಧರಿಸಬೇಕು. ಜತೆಗೆ ತಪ್ಪದೇ ಶುದ್ಧ ಕುಡಿಯುವ ನೀರನ್ನು ಮನೆಯಿಂದ ಹೋಗುವಾಗ ತೆಗೆದುಕೊಂಡು ಹೋಗಬೇಕು ಹಾಗೂ ಯಥೇಚ್ಛವಾಗಿ ನೀರನ್ನು ಆಗಾಗ್ಗೆ ಕುಡಿಯಬೇಕು ಎಂದು ತಿಳಿವಳಿಕೆ ನೀಡಬೇಕು.
ಮನೆಯಲ್ಲಿಯೆ ಸಿದ್ಧಪಡಿಸಿದ ನಿಂಬೆ ಹಣ್ಣಿನ ಶರಬತ್ತು, ಎಳನೀರು ಮತ್ತು ಮಜ್ಜಿಗೆ ಆಗಾಗ್ಗೆ ನಿಧಾನವಾಗಿ ಸೇವಿಬೇಕು. ನುಣುಪಾದ ಹತ್ತಿ ಬಟ್ಟೆ ಮತ್ತು ಕರವಸ್ತ್ರದಿಂದ ಬೆವರು ಒರೆಸಬೇಕು. ಬೆಚ್ಚಗಿನ ಮಸಾಲಾ ರಹಿತ ಶುದ್ಧ ಸಾತ್ವಿಕ ಆಹಾರ ಸೇವಿಸಬೇಕು ಹಾಗೂ ಗಾಳಿಯಾಡುವ ಚಪ್ಪಲಿ ಧರಿಸಬೇಕು. ಬೇಸಿಗೆಯಲ್ಲಿ ಕಲುಷಿತ ನೀರಿನ ಸೇವನೆಯಿಂದ ವಾಂತಿ-ಭೇದಿ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆ ಇದೆ. ಈ ಹಿನ್ನೆಲೆ ಶುದ್ಧೀಕರಿಸಿದ ಅಥವಾ ಶುದ್ಧೀಕರಣ ಘಟಕದ ನೀರನ್ನು ಕುಡಿಯಲು ಬಳಸಬೇಕು ಎಂದು ಸಲಹೆ ನೀಡಿದರು.108ಕ್ಕೆ ಕರೆ ಮಾಡಿ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಜೇಶ ಸುರಗಿಹಳ್ಳಿ ಮಾತನಾಡಿ, ಬಿಸಿಲಿನಲ್ಲಿರುವ ಯಾವುದೇ ವ್ಯಕ್ತಿ ಅಪಾಯದ ಚಿಹ್ನೆಗಳಾದ ತೊದಲು ಮಾತು, ಅರ್ಥರಹಿತವಾಗಿ ಬಡಬಡಿಸುವುದು, ಚರ್ಮ ಕೆಂಪಾಗುವುದು, ಬೆವರು ಕಡಿಮೆಯಾಗುವುದು, ದೇಹದ ಉಷ್ಣತೆ ಜಾಸ್ತಿಯಾಗುವುದು, ಉಸಿರಾಟದ ತೊಂದರೆಯಾದಲ್ಲಿ ಕೂಡಲೇ ನೆರಳಿನ ಪ್ರದೇಶಕ್ಕೆ ಸ್ಥಳಾಂತರಿಸಿ ಕೆಳಗೆ ಮಲಗಿಸಿ, ದೇಹದ ಎಲ್ಲ ಭಾಗಗಳನ್ನು ಒಳಗೊಂಡಂತೆ ಒದ್ದೆ ಬಟ್ಟೆಯಿಂದ ಒರೆಸಬೇಕು. ಅಪಾಯದ ಚಿಹ್ನೆಗಳು ಮುಂದುವರಿದಲ್ಲಿ ಹತ್ತಿರದ ವೈದ್ಯರನ್ನು ಸಂಪರ್ಕಿಸಬೇಕು ಅಥವಾ 108, 102ಕ್ಕೆ ಕರೆ ಮಾಡಬೇಕು ಎಂದರು.ಇದೇ ಸಂದರ್ಭದಲ್ಲಿ ಬೇಸಿಗೆ ಸಮಯದಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ಪ್ರಚಾರ ಸಾಮಗ್ರಿಗಳನ್ನು ಜಿಲ್ಲಾಧಿಕಾರಿ ಬಿಡುಗಡೆಗೊಳಿಸಿದರು.ಸಹಕಾರ ಅಗತ್ಯ: ಬೇಸಿಗೆಯಲ್ಲಿ ನೀರಿನ ಸಂಗ್ರಹಣೆಯಿಂದ ಡೆಂಘೀ ಹರಡುವ ಸಾಧ್ಯತೆ ಇದ್ದು, ಜಿಲ್ಲೆಯಲ್ಲಿ ಡೆಂಘೀ ತಡೆಗೆ ಆರೋಗ್ಯ ಇಲಾಖೆ ಜತೆಗೆ ಎಲ್ಲ ಇಲಾಖೆಗಳು ಸಮನ್ವಯದಿಂದ ಕಾರ್ಯ ನಿರ್ವಹಿಸಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದರು. ಜಿಲ್ಲಾ ಆರೋಗ್ಯವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಹಾಗೂ ಎನ್‌ಪಿಸಿಸಿಎಚ್‌ಎಚ್ ನೋಡಲ್ ಅಧಿಕಾರಿ ಡಾ. ಸರಿತಾ ಮಾತನಾಡಿ, ಬೇಸಿಗೆಯಲ್ಲಿ ಅತಿಯಾದ ಬಿಸಿಲಿನಿಂದ ಉಂಟಾಗುವ ಸಮಸ್ಯೆಗಳ ಕುರಿತು ವೃದ್ಧರು, ಮಕ್ಕಳು ಹಾಗೂ ಗರ್ಭಿಣಿಯರು ಹೆಚ್ಚು ಕಾಳಜಿ ವಹಿಸುವಂತೆ ತಳಮಟ್ಟದಲ್ಲೇ ಆರೋಗ್ಯ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರು ಹೆಚ್ಚಿನ ಅರಿವು ಮೂಡಿಸಬೇಕು ಎಂದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ. ನಾಗರಾಜ್ ಎಲ್., ನಗರಾಭಿವೃದ್ಧಿ ಕೋಶದ ಜಿಲ್ಲಾ ಯೋಜನಾಧಿಕಾರಿ ಮಮತಾ ಹೊಸಗೌಡ್ರ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಜಗದೀಶ ಪಾಟೀಲ, ತಾಲೂಕು ಆರೋಗ್ಯಾಧಿಕಾರಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.