ಸಾರಾಂಶ
ಕನ್ನಡಪ್ರಭ ವಾರ್ತೆ ಹಾವೇರಿ
ಚುನಾವಣಾ ಕಾರ್ಯಗಳನ್ನು ಗಂಭೀರವಾಗಿ ಪರಿಗಣಿಸಿ, ಹಗುರವಾಗಿ ತೆಗೆದುಕೊಳ್ಳಬೇಡಿ. ಪ್ರತಿ ಚುನಾವಣೆಯೂ ವಿಭಿನ್ನವಾಗಿರುತ್ತದೆ. ಆಯೋಗದ ನಿಯಮಾವಳಿಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳಿ, ಮತದಾನದ ಗೌಪ್ಯತೆಯನ್ನು ಕಾಪಾಡಿಕೊಳ್ಳಿ. ಯಾವುದೇ ಗೊಂದಲಗಳಿಗೆ ಅವಕಾಶ ನೀಡದೇ ಪಾರದರ್ಶಕತೆ ಹಾಗೂ ಶಾಂತಿಯುತ ಮತದಾನ ಪ್ರಕ್ರಿಯೆ ಪ್ರತಿಯೊಬ್ಬ ಮತಗಟ್ಟೆ ಅಧಿಕಾರಿಗಳ ಜವಾಬ್ದಾರಿಯಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ರಘುನಂದನ್ ಮೂರ್ತಿ ಸಲಹೆ ನೀಡಿದರು.ನಗರದ ಹುಕ್ಕೇರಿಮಠ ಮಹಿಳಾ ಮಹಾವಿದ್ಯಾಲಯದಲ್ಲಿ ಬುಧವಾರ ಹಾವೇರಿ ವಿಧಾನಸಭಾ ಕ್ಷೇತ್ರದ ಮತಗಟ್ಟೆ ಅಧಿಕಾರಿಗಳಿಗೆ ಹಾಗೂ ಸಹಾಯಕ ಮತಗಟ್ಟೆ ಅಧಿಕಾರಿಗಳಿಗೆ ಆಯೋಜಿಸಲಾದ ಮೊದಲ ಹಂತದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.ಮತದಾನ ಪ್ರಕ್ರಿಯೆ ಜವಾಬ್ದಾರಿ ಜೊತೆಗೆ ಬೇಸಿಗೆ ಬಿಸಿಲಿನ ಅತ್ಯಂತ ಹೆಚ್ಚು ತಾಪ ಇರುವುದರಿಂದ ವೈಯಕ್ತಿವಾಗಿ ಪ್ರತಿಯೊಬ್ಬರೂ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಚುನಾವಣಾ ಕಾರ್ಯವನ್ನು ಒತ್ತಡ ರಹಿತವಾಗಿ ಸಂತೋಷದಿಂದ ಕೆಲಸ ಮಾಡುವಂತೆ ಸಲಹೆ ನೀಡಿದರು.
ಮತಗಟ್ಟೆಗೆ ನಿಯೋಜಿತ ಪ್ರತಿ ಅಧಿಕಾರಿಗಳು ದಕ್ಷತೆಯಿಂದ ಕಾರ್ಯನಿರ್ವಹಿಸಬೇಕು. ವ್ಯವಸ್ಥಿತ ಮತದಾನ ಪ್ರಕ್ರಿಯೆ ನಡೆಸಲು ಭಾರತ ಚುನಾವಣಾ ಆಯೋಗ ನೀಡಿರುವ ಮತಗಟ್ಟೆ ಅಧಿಕಾರಿಗಳ ಕೈಪಿಡಿಯ ನಿಯಮಾವಳಿಗಳನ್ನು ನಿಖರವಾಗಿ ಹಾಗೂ ಸ್ಪಷ್ಟವಾಗಿ ತಿಳಿದುಕೊಳ್ಳಬೇಕು. ಯಾವುದೇ ಗೊಂದಲಗಳಿದ್ದರೆ ತರಬೇತಿ ಅವಧಿಯಲ್ಲಿ ಚರ್ಚಿಸಿ ಪರಿಹಾರ ಕಂಡು ಕೊಳ್ಳಬೇಕು. ಮತಗಟ್ಟೆ ವರೆಗೆ ನಿಮ್ಮ ಡೌಟ್‌ಗಳನ್ನು ತೆಗೆದುಕೊಂಡು ಹೋಗಬಾರದು ಎಂದು ಸೂಚಿಸಿದರು.ಮತದಾನ ಪ್ರಕ್ರಿಯೆಯಲ್ಲಿ ಯಾವುದೇ ಸಮಸ್ಯೆ ಆದರೆ ಮೇಲಧಿಕಾರಿಗಳ ಗಮನಕ್ಕೆ ತಂದು ಪರಿಹಾರಕಂಡುಕೊಳ್ಳಿ. ವಿವಿ ಪ್ಯಾಟ್‌ಗಳ ನಿರ್ವಹಣೆ ಸಹ ಅಚ್ಚುಕಟ್ಟಾಗಿರಬೇಕು. ವಿವಿ ಪ್ಯಾಟ್‌ಗಳನ್ನು ಕಿಟಕಿಯ ಪಕ್ಕ ಹಾಗೂ ರೂಮಿನ ಲೈಟ್ ಕೆಳಗೆ ಇಡದೆ ಸುರಕ್ಷಿತ ಸ್ಥಳದಲ್ಲಿ ಇಟ್ಟು ಗೊಂದಲಗಳಾಗದಂತೆ ಕ್ರಮ ವಹಿಸಬೇಕು. ಮತದಾನ ಪ್ರಕ್ರಿಯೆಯನ್ನು ಯಶಸ್ವಿಯಾಗಿ ನಿರ್ವಹಿಸಿ ಎಂದು ತಿಳಿಸಿದರು.
ಅಣುಕು ಮತದಾನ ಕಡ್ಡಾಯಮತದಾನದ ಹಿಂದಿನ ದಿನ ಮಸ್ಟರಿಂಗ್ ಕೇಂದ್ರದಲ್ಲಿ ವಿತರಣೆಯಾಗುವ ಚುನಾವಣಾ ಸಾಮಗ್ರಿಗಳನ್ನು ಮತಯಂತ್ರಗಳನ್ನು ಜವಾಬ್ದಾರಿಯುತವಾಗಿ ಪರಿಶೀಲಿಸಿ ಪಡೆಯಬೇಕು. ತಮಗೆ ನಿಗದಿಪಡಿಸಿದ ಮತಗಟ್ಟೆ ಕೇಂದ್ರಗಳಿಗೆ ತೆರಳಿದ ನಂತರ ಅಂದು ಸಂಜೆಯೇ ಆಯೋಗದ ಮಾರ್ಗಸೂಚಿಯಂತೆ ತಮಗೆ ಹಂಚಿಕೆಯಾದ ಜವಾಬ್ದಾರಿಗಳಂತೆ ಮತಗಟ್ಟೆ ಕೇಂದ್ರ ಸಿದ್ಧಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಮತದಾನ ಆರಂಭವಾಗುವ ಒಂದು ಗಂಟೆ ಮುಂಚಿತವಾಗಿ ಬೆಳಗ್ಗೆ ೬ ಗಂಟೆಗೆ ಮೈಕ್ರೋ ಅಬ್ಜರವರ್ ಹಾಗೂ ವಿವಿಧ ಪಕ್ಷಗಳ ಮತಗಟ್ಟೆ ಏಜೆಂಟರ ಸಮ್ಮುಖದಲ್ಲಿ ಅಣುಕು ಮತದಾನ ನಡೆಸಿ ಅಭ್ಯರ್ಥಿವಾರು ಮತದಾನವಾಗಿರುವ ಕುರಿತಂತೆ ಎಣಿಕೆ ಮಾಡಿ ಸಹಿ ಪಡೆಯಬೇಕು. ನಂತರ ಮತಯಂತ್ರದಲ್ಲಿ ಅಣುಕು ಮತದಾನದ ಸಂಖ್ಯೆಗಳನ್ನು ತೆಗೆದುಹಾಕಿ ಹೊಸದಾಗಿ ಶೂನ್ಯದಿಂದ ವಾಸ್ತವ ಮತದಾನ ಪ್ರಕ್ರಿಯೆಯನ್ನು ಬೆಳಗ್ಗೆ ೭ ಗಂಟೆಯಿಂದ ಆರಂಭಿಸಬೇಕು. ಈ ಎಲ್ಲ ಪ್ರಕ್ರಿಯೆಗಳನ್ನು ಏಜೆಂಟರ್ ಸಮ್ಮುಖದಲ್ಲಿ ಪಾರದರ್ಶಕವಾಗಿ ನಡೆಸಿ ಸಹಿ ಪಡೆಯಿರಿ ಎಂದು ಸಲಹೆ ನೀಡಿದರು.ಪ್ರಾಯೋಗಿಕ ತರಬೇತಿ
ಸಂಪನ್ಮೂಲ ವ್ಯಕ್ತಿಗಳು ಮತಗಟ್ಟೆ ಅಧ್ಯಕ್ಷಾಧಿಕಾರಿ ಹಾಗೂ ಸಹಾಯಕ ಮತಗಟ್ಟೆ ಅಧಿಕಾರಿಗಳಿಗೆ ಭಾರತ ಚುನಾವಣಾ ಆಯೋಗದ ನಿಯಮಾವಳಿಯಂತೆ ಮತದಾನ ಪ್ರಕ್ರಿಯೆ, ಮಸ್ಟರಿಂಗ್ ಹಾಗೂ ಡಿ-ಮಸ್ಟರಿಂಗ್ ಪ್ರಕ್ರಿಯೆ, ವಿದ್ಯುನ್ಮಾನ ಮತಯಂತ್ರಗಳ ಬಳಕೆ, ಮತದಾನ ಪ್ರಕ್ರಿಯೆಗೆ ವಿದ್ಯುನ್ಮಾನ ಮತಯಂತ್ರಗಳ ಸಿದ್ಧತೆ, ಮತಗಟ್ಟೆ ಅಧಿಕಾರಿಗಳ ಆಸನ ವ್ಯವಸ್ಥೆ, ಹಾಗೂ ಏಜೆಂಟರ್ ಆಸನ ವ್ಯವಸ್ಥೆ, ವಿವಿಧ ಲಕೋಟೆ ಹಾಗೂ ನಮೂನೆಗಳ ಭರ್ತಿ ಮಾಡುವುದು ಹಾಗೂ ಮತದಾನದ ಸಂದರ್ಭದಲ್ಲಿ ಉಂಟಾಗುವ ವಿಶೇಷ ಸನ್ನಿವೇಶಗಳ ನಿರ್ವಹಣೆ ಕುರಿತಂತೆ ವಿವರವಾಗಿ ಮಾಹಿತಿ ನೀಡಿದರು. ವಿದ್ಯುನ್ಮಾನ ಮತಯಂತ್ರಗಳ ಬಳಕೆ ಕುರಿತು ಪ್ರಾತ್ಯಕ್ಷಿತೆ ಮೂಲಕ ತರಬೇತಿ ನೀಡಿದರು.ಮತದಾನದ ಹಿಂದಿನ ದಿನ ಮತಗಟ್ಟೆ ಅಧಿಕಾರಿಗಳು ಕೈಗೊಳ್ಳಬೇಕಾದ ಸಿದ್ಧತೆಗಳು, ಮತಯಂತ್ರಗಳ ಜೋಡಣೆ, ವಿವಿಧ ನಮೂನೆ ಹಾಗೂ ಲಕೋಟೆಗಳ ಸಿದ್ಧತೆಗಳನ್ನು ನಡೆಸಬೇಕು. ಮತದಾನದ ದಿನ ಮೇ ೭ರ ಬೆಳಗ್ಗೆ ೫-೩೦ರಿಂದ ಅಣುಕು ಮತದಾನಕ್ಕೆ ಸಿದ್ಧತೆ ಮಾಡಿಕೊಂಡು ಏಜೆಂಟರ್ ಸಮ್ಮುಖದಲ್ಲಿ ೬ ಗಂಟೆಯಿಂದ ಅಣುಕು ಮತದಾನ ನಡೆಸಿ, ಬೆಳಗ್ಗೆ ೭ ಗಂಟೆಗೆ ನೈಜ ಮತದಾನ ಆರಂಭಿಸಬೇಕು. ಎಲ್ಲವನ್ನೂ ಆಯೋಗದ ನಿಯಮಾವಳಿ ಪ್ರಕಾರವೇ ಕೈಗೊಳ್ಳಬೇಕು. ನೈಜ ಮತದಾನಕ್ಕೆ ಮುನ್ನ ಅಣುಕು ಮತದಾನದ ಅಂಕಿ-ಅಂಶಗಳನ್ನು ವಿದ್ಯುನ್ಮಾನ ಮತಯಂತ್ರದಿಂದ ಅಳಸಿಹಾಕಬೇಕು ಎಂದು ತಿಳಿಸಿದರು.
ಮತದಾರರಿಗೆ ಎಡಗೈ ತೋರುಬೆರಳಿಗೆ ಶಾಹಿ ಹಾಕಬೇಕು. ಅಂಧ ಹಾಗೂ ದುರ್ಬಲ ಮತದಾರರ ಸಹಾಯಕರಾಗಿ ಬಂದವರಿಗೆ (೧೮ ವರ್ಷ ಮೇಲ್ಪಟ್ಟವರಿಗೆ) ಬಲ ತೋರುಬೆರಳಿಗೆ ಅಳಿಸಲಾಗದ ಶಾಹಿ ಹಚ್ಚಬೇಕು. ಒಬ್ಬನೇ ವ್ಯಕ್ತಿಯ ಪದೇ ಪದೆ ಅಂಗವಿಕಲ ಮತದಾರರನ್ನು ಕರೆತರದಂತೆ ಎಚ್ಚರಿಕೆ ವಹಿಸಬೇಕು. ಮತದಾನ ಆರಂಭವಾದ ಎರಡು ಗಂಟೆಗೊಮ್ಮೆ ಅಂಕಿ-ಅಂಶ ವರದಿ ಮಾಡಬೇಕು. ಮೂರು ಗಂಟೆಗೊಮ್ಮೆ ವಿಶೇಷ ಚೇತನ ಮತದಾರ ಅಂಕಿ ಅಂಶ ನೀಡಬೇಕು. ಮಹಿಳಾ, ಪುರುಷ, ವಿಶೇಷ ಚೇತನ ಹಾಗೂ ದುರ್ಬಲ ಮತದಾರರಿಗೆ ಪ್ರತ್ಯೇಕ ಸಾಲುಗಳನ್ನು ವ್ಯವಸ್ಥೆ ಮಾಡಲು ಅವಕಾಶವಿದೆ ಎಂದು ಮಾಹಿತಿ ನೀಡಿದರು.ಮತದಾನ ಮಾಡಲು ವೋಟರ್ ಸ್ಲೀಪ್ ಜೊತೆಗೆ ಭಾರತ ಚುನಾವಣಾ ಆಯೋಗ ನೀಡಿದ ಎಪಿಕ್ ಕಾರ್ಡ್ ಅಥವಾ ಚುನವಣಾ ಆಯೋಗ ಮಾನ್ಯ ಮಾಡಿದ ಭಾವಚಿತ್ರವಿರುವ ಇತರ ಯಾವುದಾದರೊಂದು ಗುರುತು ಪತ್ರಗಳನ್ನು ಖಚಿತಪಡಿಸಿಕೊಂಡು ಮತದಾನಕ್ಕೆ ಅವಕಾಶ ಕಲ್ಪಿಸಬೇಕು. ಮತದಾನಕ್ಕೆ ಮಾತ್ರ ಸರತಿಯಂತೆ ನಿಯಮಬದ್ಧವಾಗಿ ಮತದಾರರಿಗೆ ಪ್ರವೇಶಾವಕಾಶವಿರುತ್ತದೆ. ಕೊಠಡಿಯೊಳಗೆ ಮತದಾನ ಪ್ರಕ್ರಿಯೆಗೆ ಚುನಾವಣಾ ಆಯೋಗದಿಂದ ನಿಯೋಜಿತ ಅಧಿಕಾರಿ, ಸಿಬ್ಬಂದಿ ಹೊರತುಪಡಿಸಿ ಯಾರನ್ನೂ ಒಳಗೆ ಪ್ರವೇಶ ನೀಡಬಾರದು ಎಂದು ತಿಳಿಸಿದರು.
ಉಪವಿಭಾಗಾಧಿಕಾರಿ ಚೆನ್ನಪ್ಪ, ಹಾವೇರಿ ತಹಸೀಲ್ದಾರ್ ನಾಗರಾಜ, ತರಬೇತಿ ಅಧಿಕಾರಿಗಳು ಉಪಸ್ಥಿತರಿದ್ದರು.