ಸಾರಾಂಶ
ಕನ್ನಡಪ್ರಭ ವಾರ್ತೆ ಮಳವಳ್ಳಿ
ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಫಲಿತಾಂಶವನ್ನು ಸುಧಾರಣೆ ತರಲು ಶಿಕ್ಷಣ ಇಲಾಖೆ ಅಧಿಕಾರಿಗಳು ಈಗಿನಿಂದಲೇ ಅಗತ್ಯ ಕ್ರಮ ಕೈಗೊಳ್ಳುವಂತೆ ತಾಪಂ ಆಡಳಿತಾಧಿಕಾರಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಸಿದ್ದಲಿಂಗೇಶ ಬೇವಿನ ಮಟ್ಟಿ ಸೂಚನೆ ನೀಡಿದರು.ಪಟ್ಟಣದ ತಾಪಂ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಾಲೆಗಳಿಗೆ ಭೇಟಿ ಮಕ್ಕಳಿಗೆ ನೀಡುತ್ತಿರುವ ಶಿಕ್ಷಣದ ಗುಣಮಟ್ಟವನ್ನು ಪರಿಶೀಲನೆ ನಡೆಸಬೇಕು ಎಂದರು.
ಸಾರ್ವಜನಿಕರ ಕಲ್ಯಾಣಕ್ಕಾಗಿ ಸರ್ಕಾರದಿಂದ ಬಿಡುಗಡೆಯಾಗಿರುವ ಹಣವನ್ನು ಸಮರ್ಪಕವಾಗಿ ಅಧಿಕಾರಿಗಳು ಬಳಕೆ ಮಾಡಬೇಕು. ಅನುದಾನ ಬಳಕೆಯಾಗದಿದ್ದರೇ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದರು.ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಅನುಕೂಲವಾಗುವಂತೆ ವಿದ್ಯಾರ್ಥಿ ನಿಲಯದಲ್ಲಿ ಪ್ರವೇಶಕ್ಕೆ ನಿರಾಕರಿಸದೇ ಸೇರಿಸಿಕೊಳ್ಳಬೇಕು. ಹಾಸ್ಟಲ್‌ಗಳಲ್ಲಿ ನೀರನ್ನು ಪರೀಕ್ಷೆ ಒಳಪಡಿಸುವ ಮೂಲಕ ಶುದ್ಧ ನೀರು ಪೂರೈಕೆಗೆ ಒತ್ತು ನೀಡಬೇಕು, ವಿದ್ಯಾರ್ಥಿಗಳ ಆರೋಗ್ಯದ ಬಗ್ಗೆ ನಿಗಾ ಇಡಬೇಕು ಎಂದರು.
ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶಸುಧಾರಿಸಲು ನಿಲಯಗಳಿಗೆ ಸರ್ಕಾರಿ ಶಿಕ್ಷಕರನ್ನು ನೇಮಕ ಮಾಡಿ ಇಂಗ್ಲಿಷ್ ವಿಜ್ಞಾನ, ಹಿಂದಿ ಗಣಿತ ಪಠ್ಯಗಳನ್ನು ಭೋದನೆ ಮಾಡುವಂತೆ ಕ್ರಮ ಕೈಗೊಳ್ಳಬೇಕು, ಶುದ್ಧ ಆಹಾರ ನೀಡಬೇಕೆಂದು ಸಲಹೆ ನೀಡಿದರು.ಜಿಲ್ಲೆಯಲ್ಲಿ ಡೆಂಘೀ ರೋಗ ಹರಡುವ ಭೀತಿ ಎದುರಾಗಿದೆ. ಸಾರ್ವಜನಿಕರಿಗೆ ಜಾಗೃತಿ ಮೂಡಿಸಿ ನೀರು ನಿಲ್ಲದಂತೆ ಹಾಗೂ ಸುತ್ತ ಮುತ್ತಲ ಪರಿಸವನ್ನು ಸ್ವಚ್ಛವಾಗಿಟ್ಟುಕೊಳ್ಳಲು ಪ್ರತಿ ಗ್ರಾಪಂ ಮಟ್ಟದಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ತಾಲೂಕು ಆರೋಗ್ಯ ಇಲಾಖೆ ಅಧಿಕಾರಿಗಳು ಮುಂಜಾಗೃತ ಕ್ರಮ ವಹಿಸಬೇಕೆಂದು ಹೇಳಿದರು.
ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ತಾಲೂಕಿನಲ್ಲಿ ಉತ್ತಮ ಫಲಿತಾಂಶ ಬರುವಂತೆ ಶಿಕ್ಷಣ ಇಲಾಖೆ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು. ಪ್ರತಿ ಪ್ರೌಢಶಾಲೆಗಳಿಗೆ ಭೇಟಿ ನೀಡಿ ಶಿಕ್ಷಣದ ಗುಣಮಟ್ಟ ಪರಿಶೀಲನೆ ನಡೆಸಿ ಶಿಕ್ಷಣದಲ್ಲಿ ಸುಧಾರಣೆ ಕಾಣಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ತಿಳಿಸಿದರು.ಸಭೆಗೆ ಗೈರಾದ ಅಧಿಕಾರಿಗಳ:
ಬಹುತೇಕ ಇಲಾಖೆ ನೀರಾವರಿ, ಶಿಕ್ಷಣ, ಆರೋಗ್ಯ, ಮೀನುಗಾರಿಕೆ, ಸೇರಿದಂತೆ ಇತರೆ ಇಲಾಖೆ ಅಧಿಕಾರಿಗಳನ್ನು ಹೊರತುಪಡಿಸಿ ಹಲವು ತಾಲೂಕು ಮಟ್ಟದ ಅಧಿಕಾರಿಗಳು ಸಾಮಾನ್ಯ ಸಭೆಗೆ ಗೈರಾಗಿದರು. ಕೆಲವು ಇಲಾಖೆಯಲ್ಲಿನ ಕೆಳ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿ ತಮ್ಮ ಇಲಾಖೆಯಲ್ಲಿನ ಮಾಹಿತಿಯನ್ನು ತಿಳಿಸಿದರು.ಸಭೆಯಲ್ಲಿ ತಾಪಂ ಇಒ ಎಲ್ ಮಮತ, ಯೋಜನಾಧಿಕಾರಿ ದೀಪು, ತಾಪಂ ಅಧಿಕಾರಿ ಲಿಂಗರಾಜು ಸೇರಿದಂತೆ ಇತರರು ಇದ್ದರು.