ಸಾರಾಂಶ
ಕನ್ನಡಪ್ರಭ ವಾರ್ತೆ ಹೊನ್ನಾಳಿ
ಬೀದಿಬದಿ ವ್ಯಾಪಾರಿಗಳು ಖಾಸಗಿ ವ್ಯಕ್ತಿಗಳಿಂದ ಹೆಚ್ಚಿನ ಬಡ್ಡಿಗೆ ಸಾಲ ಪಡೆದು ಶೋಷಣೆಗೊಳಗಾಗದೇ ಸರ್ಕಾರದ ನೀತಿಯಂತೆ ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ ಸಾಲ ಪಡೆದು ಆರ್ಥಿಕಾಭಿವೃದ್ಧಿ ಕಂಡುಕೊಳ್ಳಬೇಕು ಎಂದು ಶಾಸಕ ಡಿ.ಜಿ.ಶಾಂತನಗೌಡ ಹೇಳಿದರು.ಜಿಲ್ಲಾಡಳಿತ, ಕೌಶಲಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ, ಹೊನ್ನಾಳಿ ಪುರಸಭೆ ಸಂಯುಕ್ತಾಶ್ರಯದಲ್ಲಿ ಶನಿವಾರ ಪಟ್ಟಣದ ಕನಕದಾಸ ಮಂದಿರದಲ್ಲಿ ಬೀದಿ ಬದಿಗಳ ವ್ಯಾಪಾರಿಗಳಿಗೆ ಪಿಎಂ ಸ್ವ-ನಿಧಿ ಮತ್ತು ಸ್ವ-ನಿಧಿ ಸೇ ಸಮೃದ್ಧಿ ಮಾಹಿತಿ ಕಾರ್ಯಕ್ರಮ ಹಾಗೂ ಕ್ಯೂಆರ್ ಕೋಡ್, ಡಿಜಿಟಲ್ ಕ್ಯಾಂಪ್, ಸಾಲ ಸೌಲಭ್ಯಗಳ ಮಾಹಿತಿ ಮತ್ತು ಕೇಂದ್ರದ 8 ಕಲ್ಯಾಣ ಯೋಜನೆಗಳ ಬಗ್ಗೆ ಮಾಹಿತಿ ನೀಡುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಕೇಂದ್ರ ಸರ್ಕಾರ ಅತ್ಯಂತ ಕಡಿಮೆ ವಿಮಾ ಕಂತಿನೊಂದಿಗೆ ಅಪಘಾತ ವಿಮೆ ಇದ್ದು, ತಪ್ಪದೇ ಎಲ್ಲರೂ ವಿಮೆ ಹಣ ಪಾವತಿಸಿ ಅವಘಡಗಳು ಜರುಗಿದಾಗ ಪೂರ್ಣ ವಿಮೆ ಹಣ ಪಡೆಯಬೇಕು. ಸರ್ಕಾರ ಬಡವರಿಗೆ ಹಾಗೂ ಬೀದಿಬದಿ ವ್ಯಾಪಾರಿಗಳಿಗೆ ಅನೇಕ ಸೌಲಭ್ಯಗಳನ್ನು ನೀಡುತ್ತಿದ್ದು ಎಲ್ಲಾ ಸೌಲಭ್ಯಗಳನ್ನು ಪಡೆಯಲು ಮುಂದಾಗಬೇಕು. ಬಹಳಷ್ಟು ಜನರು ಯೋಜನೆಗಳ ಪಡೆಯಲು ತಾತ್ಸಾರ ಮಾಡುತ್ತಿದ್ದಾರೆ ಇದು ಸಲ್ಲದು ಎಂದು ಹೇಳಿದರು.
ಪ್ರಾಸ್ತಾವಿಕ ಮಾತನಾಡಿದ ಪುರಸಭೆ ಮುಖ್ಯಾಧಿಕಾರಿ ಲೀಲಾವತಿ, ಎಲ್ಲಾ ಫಲಾನುಭವಿಗಳು ಕ್ಯೂಆರ್ ಕೋಡ್ ಬಳಕೆ ಬಗ್ಗೆ ತಿಳಿದುಕೊಳ್ಳಬೇಕು, ಕ್ಯೂಆರ್ ಕೋಡ್ ಬಳಕೆ ಮಾಡಿದರೆ ಬ್ಯಾಂಕ್‍ನವರಿಗೆ ನಂಬಿಕೆ ಬಂದು ಹೆಚ್ಚು ಸಾಲ ನೀಡಲು ಮುಂದಾಗುತ್ತಾರೆ ಎಂದು ಹೇಳಿದರು.ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆ, ಪ್ರಧಾನಮಂತ್ರಿ ಜೀವನ್ ಜ್ಯೋತಿ ಯೋಜನೆ ಸೇರಿದಂತೆ ಒಟ್ಟು 8 ಯೋಜನೆಗಳು ಬಡವರಿಗಾಗಿ ಹಾಗೂ ಬಿಪಿಎಲ್ ಕಾರ್ಡ್ ಹೊಂದಿರುವ ಬೀದಿ ಬದಿ ವ್ಯಾಪಾರಿಗಳಿಗೆ ಸಹಾಯಕವಾಗಿವೆ ಎಂದು ಹೇಳಿದರು. ವಕೀಲ ಚಂದ್ರಪ್ಪ ಮಡಿವಾಳ ಕಾಯ್ದೆ, ಕಾನೂನುಗಳ ಬಗ್ಗೆ ವಿವರಿಸಿದರು. ಪುರಸಭೆ ಅಧ್ಯಕ್ಷ ಎ.ಕೆ.ಮೈಲಪ್ಪ, ಉಪಾಧ್ಯಕ್ಷೆ ಸಾವಿತ್ರಮ್ಮವಿಜೇಂದ್ರಪ್ಪ, ಸದಸ್ಯರಾದ ಕೆ.ವಿ.ಶ್ರೀಧರ್, ರಾಜಪ್ಪ, ಬೀದಿ ಬದಿಗಳ ವ್ಯಾಪಾರಿಗಳ ಸಂಘದ ಅಧ್ಯಕ್ಷ ನಾಗರಾಜ್, ಎಸ್‍ಬಿಐ ಹಾಗೂ ಕೆನರಾ ಬ್ಯಾಂಕ್ ಅಧಿಕಾರಿಗಳು ಇದ್ದರು.