ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಪೊಲೀಸ್ ಕಾನ್‌ಸ್ಟೆಬಲ್‌ (ಸಿವಿಲ್) ಹುದ್ದೆಗಳ ನೇರ ನೇಮಕಾತಿ ಸಂಬಂಧ ಲಿಖಿತ ಪರೀಕ್ಷೆ ಕುರಿತು ಗದಗ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಿದ್ಧತೆ ಸಭೆ ನಡೆಯಿತು.

ಗದಗ: ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ವೃಂದದ ಮತ್ತು ಸ್ಥಳೀಯ ವೃಂದದ ಪೊಲೀಸ್ ಕಾನ್‌ಸ್ಟೆಬಲ್‌ ಹುದ್ದೆಗಳ ನೇರ ನೇಮಕಾತಿ ಸಂಬಂಧ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಆ. 2ರಂದು ಲಿಖಿತ ಪರೀಕ್ಷೆ ನಡೆಸಲಾಗುತ್ತದೆ. ಪರೀಕ್ಷೆಗಳನ್ನು ವ್ಯವಸ್ಥಿತವಾಗಿ ಹಾಗೂ ಪಾರದರ್ಶಕವಾಗಿ ಜರುಗಿಸಲು ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಸೂಚಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಪೊಲೀಸ್ ಕಾನ್‌ಸ್ಟೆಬಲ್‌ (ಸಿವಿಲ್) ಹುದ್ದೆಗಳ ನೇರ ನೇಮಕಾತಿ ಸಂಬಂಧ ಲಿಖಿತ ಪರೀಕ್ಷೆ ಕುರಿತು ಜರುಗಿದ ಸಿದ್ಧತೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪರೀಕ್ಷಾ ಕೇಂದ್ರಗಳಲ್ಲಿ ಎಲ್ಲ ಮೂಲಭೂತ ಸೌಲಭ್ಯಗಳು ಇರುವಂತೆ ನೋಡಿಕೊಳ್ಳಬೇಕು. ಪರೀಕ್ಷಾ ಕಾರ್ಯಕ್ಕೆ ನಿಯೋಜಿಸಲಾದ ಅಧಿಕಾರಿಗಳು, ಮಾರ್ಗಾಧಿಕಾರಿಗಳು, ವೀಕ್ಷಕರು, ಮೇಲ್ವಿಚಾರಕರು ತಮ್ಮ ಕರ್ತವ್ಯಗಳನ್ನು ಜವಾಬ್ದಾರಿಯಿಂದ ಅಚ್ಚುಕಟ್ಟಾಗಿ ನಿರ್ವಹಿಸಬೇಕು ಎಂದು ಸೂಚಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ಮಾತನಾಡಿ, ಪರೀಕ್ಷೆಗಳು ಪಾರದರ್ಶಕವಾಗಿ ಹಾಗೂ ಶಾಂತಿಯುತವಾಗಿ ನಡೆಯಲು ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗುತ್ತದೆ ಎಂದರು.

ಪಪೂ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್.ಬಿ. ಮಸನಾಯಕ ಮಾತನಾಡಿ, ಗದಗ ಜಿಲ್ಲೆಯಲ್ಲಿ ಒಟ್ಟು 10 ಪರೀಕ್ಷಾ ಕೇಂದ್ರಗಳನ್ನು ಗುರುತಿಸಲಾಗಿದೆ. ಪರೀಕ್ಷೆಗಳು ವ್ಯವಸ್ಥಿತವಾಗಿ ಹಾಗೂ ಅಚ್ಚುಕಟ್ಟಾಗಿ ನಡೆಸಲು ಸಕಲ ಸಿದ್ಧತೆಗೆ ಕ್ರಮ ವಹಿಸಲಾಗಿದೆ. ಸುಮಾರು 3575 ಅಭ್ಯರ್ಥಿಗಳು ಈ ಪರೀಕ್ಷೆಗೆ ಕುಳಿತುಕೊಳ್ಳಲಿದ್ದಾರೆ ಎಂದು ಹೇಳಿದರು.

ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್., ಜಿಪಂ ಮುಖ್ಯ ಯೋಜನಾಧಿಕಾರಿ ಎ.ಎ. ಕಂಬಾಳಿಮಠ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬಸನಗೌಡ ಕೊಟೂರ ಇದ್ದರು.