ರಾಮನಗರ: ಪ್ರಸಕ್ತ ವರ್ಷ ಬೇಸಿಗೆ ತೀವ್ರವಾಗಿರುವುದರಿಂದ ಜಿಲ್ಲೆಯ ಕೆಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡುಬಂದಿದೆ. ಮುಂಬರುವ ದಿನಗಳಲ್ಲಿ ನೀರಿನ ಸಮಸ್ಯೆ ಮತ್ತಷ್ಟು ತೀವ್ರಗೊಳ್ಳುವ ಸಂಭವವಿದೆ

ರಾಮನಗರ: ಪ್ರಸಕ್ತ ವರ್ಷ ಬೇಸಿಗೆ ತೀವ್ರವಾಗಿರುವುದರಿಂದ ಜಿಲ್ಲೆಯ ಕೆಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡುಬಂದಿದೆ. ಮುಂಬರುವ ದಿನಗಳಲ್ಲಿ ನೀರಿನ ಸಮಸ್ಯೆ ಮತ್ತಷ್ಟು ತೀವ್ರಗೊಳ್ಳುವ ಸಂಭವವಿದೆ. ಆದ್ದರಿಂದ ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ಅಗತ್ಯ ಕ್ರಮ ವಹಿಸುವಂತೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಕಟ್ಟುನಿಟ್ಟಿನ ಸೂಚನೆ ನೀಡಿದರು.

ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ 2025-26ನೇ ಸಾಲಿನ ತ್ರೈಮಾಸಿಕ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (20 ಅಂಶಗಳ ಕಾರ್ಯಕ್ರಮಗಳೂ ಸೇರಿದಂತೆ) ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪ್ರಸ್ತುತ ಜಿಲ್ಲೆಯ 33 ಗ್ರಾಮ ಪಂಚಾಯಿತಿಗಳ 52 ಗ್ರಾಮಗಳಲ್ಲಿ ನೀರಿನ ಸಮಸ್ಯೆ ಎದುರಾಗಿದ್ದು, ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯಪಾಲಕ ಅಭಿಯಂತರರಾದ ಜ್ಞಾನಮೂರ್ತಿ ಸಭೆಯಲ್ಲಿ ತಿಳಿಸಿದರು.

ಶಾಸಕರು ಮಾತನಾಡಿ, ಮುಂಬರುವ ದಿನಗಳಲ್ಲಿ ನೀರಿನ ಸಮಸ್ಯೆ ತೀವ್ರವಾಗಲಿದೆ. ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಜಿಲ್ಲೆಯಲ್ಲಿ ಅವಶ್ಯವಿರುವ ಕಡೆ ಬೋರ್‌ವೆಲ್‌ಗಳು ಕೊರೆಯಲು ಅನುಮತಿ ನೀಡಬೇಕು. 15ನೇ ಹಣಕಾಸು ಯೋಜನೆಯಡಿ ಯಾವುದೇ ಅನುದಾನ ಬಿಡುಗಡೆ ಆಗದಿರುವುದರಿಂದ ಜಿಲ್ಲೆಯ ಟಾಸ್ಕ್ ಫೋರ್ಸ್ ಸಮಿತಿ ಹಾಗೂ ಜಿಲ್ಲಾ ವಿಪತ್ತು ನಿಧಿ ಅನುದಾನವನ್ನು ಬಳಸುವಂತೆ ಸಚಿವರಲ್ಲಿ ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ರಾಮಲಿಂಗಾರೆಡ್ಡಿರವರು, ಅಪರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅವರು ಜಿಲ್ಲಾ ಮಟ್ಟದ ಸಭೆ ಕರೆದು ಕುಡಿಯುವ ನೀರಿನ ಸಮಸ್ಯೆಗೆ ಮುಂಜಾಗ್ರತ ಕ್ರಮ ವಹಿಸುವಂತೆ ಸೂಚಿಸಿದರು.

ಆರೋಗ್ಯ ಇಲಾಖೆ ಪ್ರಗತಿ ಪರಿಶೀಲಿಸಿದ ಸಚಿವರು, ಜಿಲ್ಲೆಯಲ್ಲಿರುವ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ, ಔಷಧಿ ಕೊರತೆ, ವೈದ್ಯಕೀಯ ಪರಿಕರಗಳ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಆಸ್ಪತ್ರೆಗಳಲ್ಲಿ ನೈರ್ಮಲ್ಯ ಕಾಪಾಡಿಕೊಳ್ಳಬೇಕು. ಯಾವುದೇ ದೂರುಗಳು ಬಾರದಂತೆ ಸಾರ್ವಜನಿಕರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸಲು ಎಲ್ಲಾ ರೀತಿಯ ಕ್ರಮಗಳನ್ನು ವಹಿಸುವಂತೆ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ನಿರ್ದೇಶಿಸಿದರು.

ಶಾಸಕ ಬಾಲಕೃಷ್ಣ ಮಾತನಾಡಿ, ಜಿಲ್ಲೆಯಲ್ಲಿ ದರ್ಖಾಸ್ತು ಪೋಡಿ ಆಂದೋಲನ, ಪೌತಿ ಖಾತೆ ಆಂದೋಲನ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳು ನಡೆಯುವಾಗ ಸಾರ್ವಜನಿಕರಿಗೆ, ಜನಪ್ರತಿನಿಧಿಗಳಿಗೆ ಮಾಹಿತಿ ನೀಡಿದರೆ ಇದರಿಂದ ಸಾರ್ವಜನಿಕರಿಗೆ ಉಪಯೋಗವಾಗಲಿದೆ. ಜಮೀನಿನ ಪೋಡಿ, ಪಹಣಿ, ಇಂಡೀಕರಣ ಇನ್ನಿತರ ದಾಖಲೆಗಳಿಗೆ ಸಂಬಂಧಿಸಿದಂತೆ ಗ್ರಾಮ ಲೆಕ್ಕಾಧಿಕಾರಿಗಳು, ಕಂದಾಯ ನಿರೀಕ್ಷಕರು ನೀಡಿದ ವರದಿಗೆ ತಹಶೀಲ್ದಾರರು ಯಾವುದೇ ಕ್ರಮ ಕೈಗೊಳ್ಳದಿರುವುದು ಜನರಿಗೆ ತೊಂದರೆ ಉಂಟು ಮಾಡುತ್ತಿದೆ ಎಂದು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ರಾಮಲಿಂಗಾರೆಡ್ಡಿ, ಅಧಿಕಾರಿಗಳು ಕ್ಷೇತ್ರ ಭೇಟಿ ನೀಡಿ ಪರಿಶೀಲಿಸಬೇಕು. ಕಡತಗಳನ್ನು ಶೀಘ್ರವಾಗಿ ವಿಲೇ ಮಾಡುವ ಮೂಲಕ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕಾರ್ಯನಿರ್ವಹಿಸಬೇಕು ಎಂದು ಭೂ ಮಾಪನಾ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆ ಅಧಿಕಾರಿಗಳಿಗೆ ಹಾಗೂ ತಹಶೀಲ್ದಾರರಿಗೆ ಸೂಚಿಸಿದರು.

ಅಪರ ಜಿಲ್ಲಾಧಿಕಾರಿ ಚಂದ್ರಯ್ಯರವರು ಜಿಲ್ಲೆಯ ಎಲ್ಲಾ 838 ಕಂದಾಯ ಗ್ರಾಮಗಳಿಗೂ ಸ್ಮಶಾನ ಭೂಮಿ ಇದೆ. ಹೆಚ್ಚು ಜನಸಂಖ್ಯೆ ಇದ್ದಲ್ಲಿ ಮತ್ತೊಂದು ಸ್ಮಶಾನ ಭೂಮಿ ಒದಗಿಸಲಾಗುವುದು ಎಂದು ಮಾಹಿತಿ ನೀಡಿದಾಗ ಸಚಿವರು, ಅವಶ್ಯವಿರುವ ಕಡೆ ಮತ್ತೊಂದು ಸ್ಮಶಾನ ಭೂಮಿಗೆ ಪ್ರಸ್ತಾವನೆ ಕಳುಹಿಸುವಂತೆ ತಿಳಿಸಿದರು.

ಗ್ರಾಮವಾರು ಆಂದೋಲನ ನಡೆಸಿ:ಶಾಸಕ ಇಕ್ಬಾಲ್ ಹುಸೇನ್ ರವರು ಸಂದೇಹಾಸ್ಪದ ಪಿಂಚಣಿದಾರರ ಪಟ್ಟಿ ಬಂದಿದ್ದು, ಸಂಧ್ಯಾ ಸುರಕ್ಷಾ, ವಿಧವಾವೇತನ, ವಿಕಲಚೇತನರ ಮಾಸಾಶನ ಸೇರಿದಂತೆ ಇನ್ನಿತರ ಪಿಂಚಣಿ ಯೋಜನೆಗಳ ಸೌಲಭ್ಯ ಪಡೆಯುತ್ತಿರುವ ಫಲಾನುಭವಿಗಳು ವಂಚಿತರಾಗದಂತೆ ಕ್ರಮ ವಹಿಸಬೇಕಿದೆ. ಇದಕ್ಕಾಗಿ ಪಿಂಚಣಿದಾರರ ದಾಖಲಾತಿ ಸಂಗ್ರಹಿಸಲು ಗ್ರಾಮವಾರು ಆಂದೋಲನ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಪ್ರಸಕ್ತ ವರ್ಷ ಮುಂಗಾರು ಮಳೆಯು ವಾಡಿಕೆಗಿಂತ ಕಡಿಮೆಯಾಗುವ ಸಂಭವವಿದೆ. ಜಿಲ್ಲೆಯಲ್ಲಿ ಬಿತ್ತನೆ ಬೀಜ, ರಸಗೊಬ್ಬರ ಕೊರತೆಯಾಗದಂತೆ ಕ್ರಮ ವಹಿಸಬೇಕು. ಕೃಷಿ ಭಾಗ್ಯ, ಕೃಷಿ ಸಿಂಚಾಯಿ, ಕೃಷಿ ಯಾಂತ್ರಿಕರಣ, ಕರ್ನಾಟಕ ರೈತ ¸ಮೃದ್ಧಿ ಯೋಜನೆ ಇನ್ನಿತರ ಯೋಜನೆಯಡಿ ಫಲಾನುಭವಿಗಳನ್ನು ಆಯ್ಕೆ ಮಾಡುವಾಗ ಜೇಷ್ಠತೆಗಳಿಗನುಗುಣವಾಗಿ ಆಯ್ಕೆ ಮಾಡಬೇಕು. ಜಿಲ್ಲೆಯ ಹೆಚ್ಚಿನ ರೈತರಿಗೆ ಕೃಷಿ ಇಲಾಖೆಯ ಸೌಲಭ್ಯ ದೊರಕಿಸಿಕೊಡಲು ಕೃಷಿ ಇಲಾಖೆ ಅಧಿಕಾರಿಗಳು ಕೆಲಸ ಮಾಡಬೇಕು ಎಂದು ಸಚಿವರು ತಿಳಿಸಿದರು.

ವಾಹನಗಳ ಹಾಗೂ ಪಾದಚಾರಿಗಳ ಸುಗಮ ಹಾಗೂ ಸುರಕ್ಷಿತ ಸಂಚಾರಕ್ಕೆ ಅನುವಾಗಲು ರಸ್ತೆ ಬದಿಗಳಲ್ಲಿ ಬೆಳೆದಿರುವ ಗಿಡಗಳನ್ನು ಸ್ವಚ್ಛಗೊಳಿಸುವುದು ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ ಹಾಗೂ ಲೋಕೋಪಯೋಗಿ ಇಲಾಖೆ ಜವಾಬ್ದಾರಿಯಾಗಿದೆ ಎಂದು ವಿಧಾನ ಪರಿಷತ್ ಸದಸ್ಯರಾದ ಸುಧಾಮ್ ದಾಸ್ ಅವರು ಪ್ರಸ್ತಾಪಿಸಿದಾಗ ಜಿಲ್ಲೆಯಲ್ಲಿರುವ ಎಲ್ಲಾ ರಾಜ್ಯ ಹೆದ್ದಾರಿ ಹಾಗೂ ಜಿಲ್ಲಾ ಮುಖ್ಯರಸ್ತೆಗಳ ಬದಿಗಳಲ್ಲಿ ಬೆಳೆದಿರುವ ಜಂಗಲ್‌ ಅನ್ನು ತೆರವುಮಾಡಿ, ಡಾಂಬರು ರಸ್ತೆಗಳಲ್ಲಿ ಉಂಟಾಗಿರುವ ಗುಂಡಿಗಳನ್ನು ಮುಚ್ಚಿ ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ರಾಮಲಿಂಗಾರೆಡ್ಡಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಶಾಸಕ ಯೋಗೇಶ್ವರ್, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ರಾಜ್ಯ ಉಪಾಧ್ಯಕ್ಷ ಸೂರಜ್ ಹೆಗಡೆ, ಜಿಲ್ಲಾಧ್ಯಕ್ಷ ಕೆ. ರಾಜು, ಕರ್ನಾಟಕ ರೇಷ್ಮೆ ಮಾರಾಟ ಮಂಡಳಿ ಅಧ್ಯಕ್ಷರಾದ ಗಂಗಾಧರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಅನ್ಮೋಲ್ ಜೈನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್‌ಗೌಡ ಉಪಸ್ಥಿತರಿದ್ದರು.

ಬಾಕ್ಸ್ .........

ಜಿಲ್ಲೇಲಿ 46 ಕಿ.ಮೀ ಬ್ಯಾರಿಕೇಡ್ ನಿರ್ಮಾಣ

ರಾಮನಗರಜಿಲ್ಲೆಯಲ್ಲಿ ನಿರಂತರವಾಗಿ ಕಾಡಾನೆಗಳ ದಾಳಿ ಹೆಚ್ಚಾಗಿದ್ದು, ರೈತರುಗಳಿಗೆ ನಷ್ಟ ಉಂಟಾಗುವುದರ ಜೊತೆಗೆ ಜೀವ ಹಾನಿಗಳಾಗುವ ಸಾಧ್ಯತೆ ಹೆಚ್ಚಾಗಿದೆ ಇದಕ್ಕೆ ಮುಂಜಾಗ್ರತ ಕ್ರಮವಾಗಿ ಆನೆ ದಾಳಿ ತಪ್ಪಿಸಲು ಅರಣ್ಯ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸಚಿವ ರಾಮಲಿಂಗಾರೆಡ್ಡಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಡಿಸಿಎಫ್ ರಾಮಕೃಷ್ಣಯ್ಯ, ಜಿಲ್ಲೆಯ ಕನಕಪುರ ಹಾಗೂ ಚನ್ನಪಟ್ಟಣ ತಾಲ್ಲೂಕಿನ ಕಾಡಂಚಿನ 67 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಬ್ಯಾರಿಕೇಡ್ ನಿರ್ಮಿಸಲು ಉದ್ದೇಶಿಸಲಾಗಿದೆ. ಈ ಪೈಕಿ 46 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಈಗಾಗಲೇ ಬ್ಯಾರಿಕೇಡ್ ನಿರ್ಮಿಸಲಾಗಿದೆ ಎಂದು ಮಾಹಿತಿ ನೀಡಿದರು.

23ಕೆಆರ್ ಎಂಎನ್ 12.ಜೆಪಿಜಿ

ರಾಮನಗರದ ಜಿಪಂ ಸಭಾಂಗಣದಲ್ಲಿ ಸಚಿವ ರಾಮಲಿಂಗಾರೆಡ್ಡಿ ಅಧ್ಯಕ್ಷತೆಯಲ್ಲಿ ಕೆಡಿಪಿ ಪ್ರಗತಿ ಪರಿಶೀಲನಾ ಸಭೆ ನಡೆಯಿತು.