ವಿದ್ಯುತ್ ಕ್ಷಾಮ ನೀಗಿಸಲು ಅಗತ್ಯ ಕ್ರಮ ಕೈಗೊಳ್ಳಿ: ಮಧು

| Published : Oct 17 2023, 12:47 AM IST

ವಿದ್ಯುತ್ ಕ್ಷಾಮ ನೀಗಿಸಲು ಅಗತ್ಯ ಕ್ರಮ ಕೈಗೊಳ್ಳಿ: ಮಧು
Share this Article
  • FB
  • TW
  • Linkdin
  • Email

ಸಾರಾಂಶ

ಮೆಸ್ಕಾಂ ಹಿರಿಯ ಅಧಿಕಾರಿಗಳೊಂದಿಗೆ ಸಮಾಲೋಚನೆ
ಕನ್ನಡಪ್ರಭ ವಾರ್ತೆ ಸೊರಬ ಜಿಲ್ಲೆಯಲ್ಲಿನ ರೈತರ ಕೃಷಿ ಚಟುವಟಿಕೆಗಳಿಗೆ ಯಾವುದೇ ಅಡತಡೆಯಿಲ್ಲದೇ ನಿರಂತರವಾಗಿ ವಿದ್ಯುತ್ ಸರಬರಾಜು ಮಾಡಲು ಅಗತ್ಯ ಎಲ್ಲ ಕ್ರಮಗಳನ್ನು ಕೈಗೊಳ್ಳುವಂತೆ ಮೆಸ್ಕಾಂ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಸೂಚಿಸಿದರು. ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ತ್ರೈಮಾಸಿಕ ಸಭೆ ಮತ್ತು ಮೆಸ್ಕಾಂ ಹಿರಿಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಅವರು ಮಾತನಾಡಿದರು. ಕೃಷಿ ಚಟುವಟಿಕೆಗಳಿಗೆ ಸಕಾಲದಲ್ಲಿ ವಿದ್ಯುತ್ ಬೇಕು. ಈ ಬಗ್ಗೆ ಕೃಷಿಕರು ಬೇಸರಗೊಳ್ಳುವ ಮೊದಲು ಸಂಬಂಧಿಸಿದ ಮೆಸ್ಕಾಂ ಅಧಿಕಾರಿಗಳು ತ್ವರಿತವಾಗಿ ಕ್ರಮ ಕೈಗೊಳ್ಳಬೇಕು. ತಪ್ಪಿದಲ್ಲಿ ಸಂಬಂಧಿಸಿದ ಅಧಿಕಾರಿಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು. ನಿಯೋಜಿತ ಅಧಿಕಾರಿ ಸಿಬ್ಬಂದಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು. ಸರ್ಕಾರ ನಿಗದಿಪಡಿಸಿರುವಂತೆ ವಾರಕ್ಕೊಮ್ಮೆಯ ಶಿಫ್ಟ್ ಆಧಾರದ ಮೇಲೆ ದಿನಕ್ಕೆ 5 ಗಂಟೆಯ ಕಾಲ ನಿರಂತರ ವಿದ್ಯುತ್ ಹರಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಭೂಮಿ ಮಂಜೂರಾತಿಗೆ ಸಲ್ಲಿಸಲಾಗಿರುವ ಬಾಕಿ ಅರ್ಜಿಗಳನ್ನು ಸಕಾಲದಲ್ಲಿ ವಿಲೇವಾರಿಗೊಳ್ಳಬೇಕು. ಗೆಂಡ್ಲ-ಹೊಸೂರು ಸೇರಿದಂತೆ ಸೊರಬ ತಾಲೂಕಿನ ಇನಾಂ ಜಮೀನಿನ ಸರ್ವೇ ಕಾರ್ಯ ನಿಗದಿಪಡಿಸಿದ ಕಾಲಮಿತಿಯೊಳಗೆ ಪೂರ್ಣಗೊಳಿಸುವಂತೆ ಹಾಗೂ ತಾಳಗುಪ್ಪ-ಹುಬ್ಬಳ್ಳಿ ರೈಲ್ವೆ ಮಾರ್ಗದ ಸರ್ವೇ ಕಾರ್ಯವನ್ನು ಕೂಡಲೇ ಪೂರ್ಣಗೊಳಿಸಿ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಸೊರಬದಲ್ಲಿ ಸಬ್‌ರಿಜಿಸ್ಟ್ರಾರ್ ಕಚೇರಿ ಅತ್ಯಂತ ಕಿರಿದಾಗಿದ್ದು, ಸೂಕ್ತ ಸ್ಥಳವನ್ನು ಪರಿಶೀಲಿಸಿ, ಸ್ಥಳಾಂತರಿಸಲು ಕ್ರಮ ಕೈಗೊಳ್ಳಬೇಕು. ಸೊರಬ ಮತ್ತು ಆನವಟ್ಟಿ ಪಟ್ಟಣಗಳಲ್ಲಿ ಇಂದಿರಾ ಕ್ಯಾಂಟೀನ್ ಆರಂಭಿಸಲು ಸೂಕ್ತ ಸ್ಥಳಾವಕಾಶ ತಿಳಿಸುವಂತೆ ತಹಸೀಲ್ದಾರರಿಗೆ ಸೂಚಿಸಿದರು. ತಾಲೂಕಿನ ಅನೇಕ ಕಡೆಗಳಲ್ಲಿ ಅರಣ್ಯ ಭೂಮಿಯಲ್ಲಿ ಸರ್ಕಾರಿ ಕಟ್ಟಡಗಳಿವೆ. ಅವುಗಳ ದುರಸ್ತಿ, ನವೀಕರಣ, ನೂತನ ಕಟ್ಟಡ ನಿರ್ಮಾಣ ಮತ್ತಿತರ ವಿಷಯಗಳಲ್ಲಿ ತೀವ್ರ ತರಹದ ತೊಂದರೆ ಆಗುತ್ತಿದೆ. ಅಂತಹ ಸಮಸ್ಯಾತ್ಮಕ ಕಟ್ಟಡಗಳನ್ನು ಗುರುತಿಸಿ, ಮಾಹಿತಿ ನೀಡಿದಲ್ಲಿ ಮಾನ್ಯ ಮುಖ್ಯಮಂತ್ರಿ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿ, ಸಮಸ್ಯೆಗೆ ಸೂಕ್ತ ಪರಿಹಾರ ಕಂಡುಕೊಳ್ಳಲಾಗುವುದು ಎಂದರು. ತಾಲೂಕಿನ ಅನೇಕ ಗ್ರಾಮೀಣ ರಸ್ತೆಗಳು, ಜಿಲ್ಲಾ ಸಂಪರ್ಕ ರಸ್ತೆಗಳು ಹಾಳಾಗಿದ್ದು, ನಿರ್ವಹಣೆ ಕಾಣದಾಗಿವೆ. ಗುತ್ತಿಗೆದಾರರು ನಿರ್ವಹಣೆ ಮಾಡುವಂತೆ, ತಪ್ಪಿದಲ್ಲಿ ಬಾಕಿ ಮೊತ್ತ ಪಾವತಿಸದಂತೆ ಅಧಿಕಾರಿಗಳಿಗೆ ಸೂಚಿಸಿದ ಅವರು, ಅಂತಹ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲು ಶಿಫಾರಸ್ಸು ಮಾಡಲಾಗುವುದು. ಶಿರಾಳಕೊಪ್ಪ ಮತ್ತು ಸೊರಬ ಮುಖ್ಯರಸ್ತೆ ಹಾಳಾಗಿದ್ದು, ಹೊಸ ರಸ್ತೆ ಕಾಮಗಾರಿಗೆ ಹೊಸ ಕ್ರಿಯಾಯೋಜನೆ ಸಿದ್ಧಪಡಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಿದರು. ಸಭೆಯಲ್ಲಿ ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ ಪದ್ಮಾವತಿ, ಜಂಟಿ ಕೃಷಿ ನಿರ್ದೇಶಕಿ ಪೂರ್ಣಿಮಾ, ಜಿಪಂ ಕಾರ್ಯದರ್ಶಿ ಭಾರತಿ ಸಿ.ಎಸ್., ತಹಸೀಲ್ದಾರ್ ಹುಸೇನ್ ಸರಕಾವಸ್, ತಾಲೂಕಿನ ಎಲ್ಲ ಇಲಾಖೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. - - - ಬಾಕ್ಸ್‌ ಕಾಲೇಜಿನಲ್ಲಿ ದಾಖಲಾತಿ ಇಳಿಕೆ: ಅಸಮಾಧಾನ ಸೊರಬದ ಪ್ರಥಮ ದರ್ಜೆ ಕಾಲೇಜಿನಲ್ಲಿ ದಾಖಲಾತಿ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ ಎಂದು ಸಚಿವ ಮಧು ಹೇಳಿದರು. ವಿದ್ಯಾರ್ಥಿಗಳು ಶಿಕ್ಷಣಕ್ಕಾಗಿ ಸಾಗರ ಪಟ್ಟಣಕ್ಕೆ ದಿನನಿತ್ಯ ಪ್ರಯಾಣಿಸುವಂತಾಗಿದೆ. ವಿಶೇಷವಾಗಿ ವಿಜ್ಞಾನ ಮತ್ತು ಕಾಮರ್ಸ್ ವಿಷಯಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಅತ್ಯಂತ ಕಡಿಮೆಯಾಗಿದೆ. ಕಾಲೇಜಿನ ಪ್ರಗತಿ ನಿರ್ಲಕ್ಷ್ಯಕ್ಕೆ ಕಾರಣ ಆಗಿರುವ ಕಾಲೇಜಿನ ಪ್ರಾಚಾರ್ಯರು ಹಾಗೂ ಪ್ರಥಮ ದರ್ಜೆ ಸಹಾಯಕರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕಲ್ಲದೇ, ಅವರನ್ನು ಅಮಾನತುಗೊಳಿಸುವಂತೆ ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕರಿಗೆ ಸೂಚಿಸಿದರು. - - - ಟಾಪ್‌ ಕೋಟ್ ಕೆಲವು ಕಡೆಗಳಲ್ಲಿ ಶಿಕ್ಷಕರು ತಮ್ಮ ಬದಲಾಗಿ ಸಹಾಯಕರನ್ನು ನೇಮಿಸಿಕೊಂಡು, ಬಡ್ಡಿ ವ್ಯವಹಾರ, ರಿಯಲ್ ಎಸ್ಟೇಟ್ ದಂಧೆಯಲ್ಲಿ ತೊಡಗಿರುವ ಬಗ್ಗೆ ಆರೋಪಗಳಿವೆ. ಅಂತಹ ಶಿಕ್ಷಕರ ವರ್ತನೆ ಸಹಿಸಲ್ಲ. ಅಂತಹ ಶಿಕ್ಷಕರು ಎಚ್ಚರಿಕೆಯಿಂದ ತಮ್ಮ ಜವಾಬ್ದಾರಿ ಅರಿತು ಪ್ರಾಮಾಣಿಕವಾಗಿ ಸೇವೆ ಸಲ್ಲಿಸಬೇಕು. ಇಲ್ಲವಾದಲ್ಲಿ ಕ್ರಮ ಜರುಗಿಸಲಾಗುವುದು – ಮಧು ಬಂಗಾರಪ್ಪ, ಸಚಿವ - - - -16ಕೆಪಿಸೊರಬ03: ಸೊರಬ ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಸಚಿವ ಮಧು ಬಂಗಾರಪ್ಪ ತಾಪಂ ತ್ರೈಮಾಸಿಕ ಸಭೆ ನಡೆಸಿದರು.