ಡೆಂಘೀ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಿ: ಸಚಿವ ಸತೀಶ ಜಾರಕಿಹೊಳಿ

| Published : Jul 13 2024, 01:40 AM IST

ಡೆಂಘೀ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಿ: ಸಚಿವ ಸತೀಶ ಜಾರಕಿಹೊಳಿ
Share this Article
  • FB
  • TW
  • Linkdin
  • Email

ಸಾರಾಂಶ

ಬೆಳಗಾವಿಯ ಸುವರ್ಣ ಸೌಧದಲ್ಲಿ ಶುಕ್ರವಾರ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ನೇತೃತ್ವದಲ್ಲಿ 2024-25ನೇ ಸಾಲಿನ ಪ್ರಥಮ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (ಕೆಡಿಪಿ) ಪ್ರಗತಿ ಪರಿಶೀಲನೆ ಸಭೆ ನಡೆಯಿತು.

ಕನ್ನಡಪ್ರಭ ವಾರ್ತೆ ಬೆಳಗಾವಿ

ರಾಜ್ಯಾದ್ಯಂತ ಡೆಂಘೀ ಹಾವಳಿ ಹೆಚ್ಚಾಗಿದ್ದು, ಜಿಲ್ಲೆಯಲ್ಲಿ ಡೆಂಘೀ ನಿಯಂತ್ರಣಕ್ಕೆ ಅಗತ್ಯ ಕ್ರಮ‌ವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬೆಳಗಾವಿಯ ಸುವರ್ಣ ಸೌಧದಲ್ಲಿ ಶುಕ್ರವಾರ ಜರುಗಿದ 2024-25ನೇ ಸಾಲಿನ ಪ್ರಥಮ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (ಕೆಡಿಪಿ) ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯ ಎಲ್ಲ ಆಸ್ಪತ್ರೆಗಳಿಗೆ ಡೆಂಘೀ ಪರೀಕ್ಷಾ‌ ಕಿಟ್ ವಿತರಿಸಬೇಕು. ಡೆಂಘೀ ಜ್ವರದಿಂದ ಬಳಲುವ ರೋಗಿಗಳಿಗೆ ತ್ವರಿತವಾಗಿ ಚಿಕಿತ್ಸೆ ಒದಗಿಸುವುದರ ಜೊತೆಗೆ ಡೆಂಘೀ ಜ್ವರಕ್ಕೆ ಅಗತ್ಯವಾದ ಔಷಧಗಳ ವ್ಯವಸ್ಥೆ ಮಾಡಿಟ್ಟುಕೊಳ್ಳಬೇಕು. ಡೆಂಘೀ ಜ್ವರದ ಲಕ್ಷಣಗಳು‌, ಸಾರ್ವಜನಿಕರು ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ಹೆಚ್ಚಿನ ಜಾಗೃತಿ ಮೂಡಿಸಲು ಮುಂದಾಗುವಂತೆ ಆರೋಗ್ಯ ಇಲಾಖಾ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ಮೊಹಮ್ಮದ ರೋಷನ್ ಮಾತನಾಡಿ, ಡೆಂಘೀ ಜ್ವರ ನಿಯಂತ್ರಣಕ್ಕೆ ಹೆಚ್ಚಿನ ಪರೀಕ್ಷೆ ನಡೆಸಲಾಗುತ್ತಿದೆ. ಮಹಾನಗರ ಪಾಲಿಕೆ, ನಗರ ಸ್ಥಳೀಯ ಸಂಸ್ಥೆ ಹಾಗೂ ಗ್ರಾಪಂಗಳ ಸಮನ್ವಯದೊಂದಿಗೆ ಕಾರ್ಯನಿರ್ವಹಿಸುವುದರ ಮೂಲಕ‌ ಸ್ವಚ್ಛತೆಗೆ ಕ್ರಮ‌ವಹಿಸುವಂತೆ ಸೂಚಿಸಲಾಗಿದೆ. ಕಳೆದ‌ ಮೂರು ದಿನಗಳಲ್ಲಿ 350 ಪರೀಕ್ಷೆಗಳು ಜರುಗಿದ್ದು, ಇದರಲ್ಲಿ 3 ಪ್ರಕರಣಗಳು ದೃಢಪಟ್ಟಿವೆ ಎಂದು ತಿಳಿಸಿದರು.

ಪ್ರಸಕ್ತ ಸಾಲಿನಲ್ಲಿ‌ ಮುಂಗಾರು‌ ಮಳೆ ಉತ್ತಮವಾಗಿ ಆಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ರೈತರಿಗೆ ಬಿತ್ತನೆ ಬೀಜ‌ ಹಾಗೂ ರಸಗೊಬ್ಬರ ಕೊರತೆ ಆಗದಂತೆ‌ ನಿಗಾವಹಿಸಬೇಕು. ಜಿಲ್ಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬಗಳಿಗೆ ಶೀಘ್ರ ಪರಿಹಾರ‌ ಒದಗಿಸಬೇಕು. ಜಿಲ್ಲೆಯಲ್ಲಿ‌ ಕೈಗೊಳ್ಳಲಾದ‌ ಜಲಜೀವನ್‌ ಮಿಷನ್‌ ಯೋಜನೆಯಡಿ ಅಪೂರ್ಣ ಕಾಮಗಾರಿ ಹಾಗೂ‌ ಸಮರ್ಪಕ‌ ನೀರು ಪೂರೈಕೆ ಆಗುತ್ತಿರುವ ಕುರಿತು ಪರಿಶೀಲಿಸಬೇಕು ಎಂದು ಸಚಿವರು ಸೂಚಿಸಿದರು.

ಜಿಲ್ಲೆಯಲ್ಲಿ ಹೊಸದಾಗಿ ಸ್ಥಾಪಿಸಲು ಉದ್ದೇಶಿಸಲಾಗಿರುವ ಹೊಸ ವಿದ್ಯುತ್ ವಿತರಣೆ ಕೇಂದ್ರಗಳ ಮಾಹಿತಿ ಪಡೆದ ಸಚಿವರು, ಹೊಸ ವಿದ್ಯುತ್ ವಿತರಣೆ ಕೇಂದ್ರಗಳ ಸ್ಥಾಪನೆಗೆ ಬೇಕಾದ ಜಾಗೆಯನ್ನು ಪಡೆದುಕೊಳ್ಳಲು ಅಗತ್ಯ ಕ್ರಮಗಳನ್ನು‌ ಶೀಘ್ರ ಪೂರ್ಣಗೊಳಿಸಬೇಕು. ರೈತರಿಗೆ ಅನಾನೂಕುಲ ಆಗದಂತೆ ದುರಸ್ತಿಗೆ ಬಂದ ವಿದ್ಯುತ್ ಪರಿವರ್ತಕಗಳನ್ನು ಶೀಘ್ರ ಬದಲಿಸಲು ಕ್ರಮ‌ವಹಿಸಬೇಕು. ರಾಯಬಾಗ ತಾಲೂಕಿನಲ್ಲಿರುವ ಕೆರೆಗಳನ್ನು ತುಂಬಿಸುವ ಕಾರ್ಯವನ್ನು ಶೀಘ್ರ ಪೂರ್ಣಗೊಳಿಸಬೇಕು. ಈ ಸಂಬಂಧ ಸ್ಥಳೀಯ ಶಾಸಕರ ಜೊತೆಗೆ ನಿರಂತರ ಸಮನ್ವಯ ಸಾಧಿಸಬೇಕು. ಈ ಕುರಿತು ರಾಯಬಾಗದಲ್ಲಿ ಶೀಘ್ರ ಸಭೆ ನಡೆಸಲಾಗುವುದು ಎಂದು ಹೇಳಿದರು.ನೆರೆಯ‌ ಮಹರಾಷ್ಟ್ರದಲ್ಲಿ ಮಳೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಜಿಲ್ಲೆಯ ನದಿ‌ ಪಾತ್ರದ ಗ್ರಾಮಗಳಲ್ಲಿ ಎದುರಾಗಬಹುದಾದ ಸಂಭವನೀಯ ಪ್ರವಾಹ ಪರಿಸ್ಥಿತಿಯನ್ನು ಸಮರ್ಪಕವಾಗಿ ನಿರ್ವಹಿಸಬೇಕು. ಈ‌ ಕುರಿತು ಸಾರ್ವಜನಿಕರಲ್ಲಿ ಮುಂಜಾಗ್ರತಾ ಕ್ರಮವಾಗಿ ಅರಿವು ಮೂಡಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ-2 ಪ್ರಕಾಶ ಹುಕ್ಕೇರಿ ಮಾತನಾಡಿ, ಅಗ್ನಿಶಾಮಕ ದಳದ ಸಹಯೋಗದೊಂದಿಗೆ ನಗರ ಹಾಗೂ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಚರಂಡಿಗಳನ್ನು ಸ್ವಚ್ಛಗೊಳಿಸುವುದರ ಮೂಲಕ ಸಾಂಕ್ರಾಮಿಕ ರೋಗಗಳನ್ನು ನಿಯಂತ್ರಿಸುವ ಪ್ರಯೋಗ ಮಾಡುವಂತೆ ಸಲಹೆ ನೀಡಿದರು.

ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ 2022-23ನೇ ಸಾಲಿನಲ್ಲಿ ಡೆಸ್ಕ್‌ ಖರೀದಿಗೆ ಟೆಂಡರ್‌ ಕರೆಯಲಾಗಿದ್ದರೂ ಇದುವರೆ ಡೆಸ್ಕ್ ಪೂರೈಕೆ ಆಗದಿರುವ‌‌ ಕುರಿತು ಸಭೆಯ‌ ಗಮನಕ್ಕೆ ತಂದು ಟೆಂಡರ್ ಷರತ್ತುಗಳ ಅನುಸಾರ ಕಾಲಮಿತಿಯಲ್ಲಿ ಡೆಸ್ಕ್ ಪೂರೈಸಬೇಕು ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ವಾಯವ್ಯ ಸಾರಿಗೆ ಸಂಸ್ಥೆಯ ಅಧ್ಯಕ್ಷ ಭರಮಗೌಡ(ರಾಜು) ಕಾಗೆ ಮಾತನಾಡಿ, ಕೆಲ‌ ಶಾಲಾ ಶಿಕ್ಷಕರು ದಿನನಿತ್ಯ ಶಾಲೆಗೆ ಮದ್ಯಪಾನ ಮಾಡಿ ಬರುತ್ತಿರುವ ಕುರಿತು ದೂರುಗಳು ಬಂದಿದ್ದು, ಇಂತಹ ಶಿಕ್ಷಕರ ಮೇಲೆ ಕೂಡಲೇ ಕ್ರಮ ಜರುಗಿಸಬೇಕು. ಶಿಕ್ಷಕರ ಕೊರತೆಯಿಂದ ಶಿಕ್ಷಣದ ಗುಣಮಟ್ಟದ ಮೇಲೆ ಪರಿಣಾಮ‌ ಬೀರುತ್ತಿರುವುದರಿಂದ ಶಿಕ್ಷಕರ ನೇಮಕಾತಿ ಪ್ರಸ್ತಾಪ ಸಲ್ಲಿಸುವುದರ‌ ಜತೆಗೆ ಶಿಕ್ಷಕರ‌ ನೇಮಕಾತಿಗೆ ಸರ್ಕಾರದ ಮೇಲೆ ಒತ್ತಡ ಹೇರಬೇಕಿದೆ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಪಂ ಸಿಪೊ ರಾಹುಲ್‌ ಶಿಂಧೆ, ಶಾಲೆಗಳಲ್ಲಿ ಆಶಿಸ್ತು ತೋರುವ ಶಿಕ್ಷಕರ ಮೇಲೆ ಶಿಸ್ತುಕ್ರಮ ಜರುಗಿಸಲಾಗುವುದು. ಪ್ರತಿ‌ ತಿಂಗಳ‌ ಮೂರನೇ ಶನಿವಾರದಂದು ಎಲ್ಲ ಶಾಲೆಗಳಲ್ಲಿ‌ ಪಾಲಕರ ಸಭೆಗಳನ್ನು ಕಡ್ಡಾಯವಾಗಿ ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು.

ಸಭೆಯಲ್ಲಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಸಂಸದೆ ಪ್ರಿಯಾಂಕಾ ಜಾರಕಿಹೊಳಿ, ಶಾಸಕರಾದ ಆಸೀಫ್‌ ಸೇಠ್‌, ಬಾಳಾಸಾಹೇಬ ಪಾಟೀಲ, ವಿಠ್ಠಲ ಹಲಗೇಕರ, ದುರ್ಯೋಧನ ಐಹೊಳೆ, ಮಹಾಂತೇಶ ಕೌಜಲಗಿ, ಚನ್ನರಾಜ ಹಟ್ಟಿಹೊಳಿ, ನಾಗರಾಜು ಯಾದವ್, ನಗರ ಪೊಲೀಸ್ ಆಯುಕ್ತ ಯಡಾ‌ ಮಾರ್ಟಿನ್‌ ಮಾರ್ನಬ್ಯಾಂಗ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಗ್ರಾಮೀಣ ಪ್ರದೇಶದಲ್ಲಿ 500 ಮಹಿಳಾ‌ ಸ್ವಸಹಾಯ ಸಂಘಗಳ‌ ರಚನೆಯಾಗಿರುತ್ತವೆ.

ಇದೇ ವೇಳೆ ಮಹಿಳಾ ಸ್ವಯಂ ಸಂಘಗಳಿಗೆ ಸಮವಸ್ತ್ರವನ್ನು ವಿತರಿಸಲಾಯಿತು.

ಅಧಿಕಾರಿಗಳು ಕ್ಷೇತ್ರಮಟ್ಟದಲ್ಲಿ ಕೆಲಸ‌ ಮಾಡಲು‌ ಅನುಕೂಲವಾಗುವಂತೆ ಮಾನಿಟರಿಂಗ್ ಆ್ಯಪ್‌ C-TARA ಟಾಸ್ಕ್‌ ಅಸೈನ್ಮೆಂಟ್‌ ಮತ್ತು ರಿವ್ಯೂವ್ ಅಪ್ಲಿಕೇಶನ್ ಗೆ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರು ಚಾಲನೆ ನೀಡಿದರು.ತಕ್ಷಣ ಡೆಸ್ಕ್ ಖರೀದಿಗೆ ಸಚಿವರ ಸೂಚನೆ:

ಲಭ್ಯವಿರುವ ಅನುದಾನವನ್ನು ಸಮರ್ಪಕವಾಗಿ ಬಳಕೆ‌ ಮಾಡಿಕೊಂಡು ಜಿಲ್ಲೆಯಾದ್ಯಂತ ಅಗತ್ಯವಿರುವ ಶಾಲೆಗಳಿಗೆ ಡೆಸ್ಕ್ ಒದಗಿಸಬೇಕು. ಶೈಕ್ಷಣಿಕ ಪ್ರಗತಿಗಾಗಿ ಶೀಘ್ರವೇ ಬೆಳಗಾವಿ ಹಾಗೂ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಗಳಿಗೆ ಪ್ರತ್ಯೇಕವಾಗಿ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೆಶಕರನ್ನು ನೇಮಿಸಲಾಗುವುದು ಎಂದು ಸಚಿವ ಸತೀಶ ಜಾರಕಿಹೊಳಿ ತಿಳಿಸಿದರು.ಚಿಕ್ಕೋಡಿಯಲ್ಲಿ ನಿರ್ಮಾಣವಾದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಕಟ್ಟಡ ಕಾಮಗಾರಿ ಪೂರ್ಣಗೊಂಡು ವೈದ್ಯಕೀಯ ಸಿಬ್ಬಂದಿ ನೇಮಕ ಆಗಿರುವುದರಿಂದ ಆಸ್ಪತ್ರೆಯನ್ನು ಆಗಸ್ಟ್ 15ರಂದು ಉದ್ಘಾಟನೆ ಮಾಡಲು ಸಿದ್ಧತೆ ಮಾಡಿಕೊಳ್ಳಬೇಕು. ಸಾರ್ವಜನಿಕರಿಗೆ ಉತ್ತಮ ವೈದ್ಯಕೀಯ ಸೌಲಭ್ಯ ಒದಗಿಸಲು ಅನುಕೂಲವಾಗುವಂತೆ ಬೆಳಗಾವಿಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಒದಗಿಸಲಾಗಿರುವ ಅತ್ಯಾಧುನಿಕ ಯಂತ್ರೋಪಕರಣಗಳನ್ನು ಕೂಡಲೇ ಸಾರ್ವಜನಿಕ ಬಳಕೆಗೆ ಒದಗಿಸಬೇಕು.

- ಸತೀಶ ಜಾರಕಿಹೊಳಿ ಜಿಲ್ಲಾ ಉಸ್ತುವಾರಿ ಸಚಿವ