ಅತಿವೃಷ್ಟಿ ಎದುರಿಸಲು ಅಗತ್ಯ ಕ್ರಮ ಕೈಗೊಳ್ಳಿ

| Published : Oct 23 2024, 12:37 AM IST

ಅತಿವೃಷ್ಟಿ ಎದುರಿಸಲು ಅಗತ್ಯ ಕ್ರಮ ಕೈಗೊಳ್ಳಿ
Share this Article
  • FB
  • TW
  • Linkdin
  • Email

ಸಾರಾಂಶ

ಹರಿಹರ ತಾಲೂಕಿನಲ್ಲಿ ಹಿಂಗಾರು ಮಳೆ ವಾಡಿಕೆಗಿಂತ ಹೆಚ್ಚಿನ ಮಳೆಯಾಗುತ್ತಿದೆ. ಯಾರಿಗೂ ತೊಂದರೆ ಆಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಶಾಸಕ ಬಿ.ಪಿ.ಹರೀಶ್ ಸೂಚನೆ ನೀಡಿದರು.

- ಹರಿಹರ ತಾಪಂ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕ ಹರೀಶ್- - - ಕನ್ನಡಪ್ರಭ ವಾರ್ತೆ ಹರಿಹರ ತಾಲೂಕಿನಲ್ಲಿ ಹಿಂಗಾರು ಮಳೆ ವಾಡಿಕೆಗಿಂತ ಹೆಚ್ಚಿನ ಮಳೆಯಾಗುತ್ತಿದೆ. ಯಾರಿಗೂ ತೊಂದರೆ ಆಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಶಾಸಕ ಬಿ.ಪಿ.ಹರೀಶ್ ಸೂಚನೆ ನೀಡಿದರು.

ನಗರದ ತಾಲೂಕು ಪಂಚಾಯಿತಿ ಕಚೇರಿಯಲ್ಲಿ ಸೋಮವಾರ ನಡೆದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕೃಷಿ, ಆರೋಗ್ಯ ಮತ್ತು ಪಶು ವೈದ್ಯಕೀಯ ಇಲಾಖೆ ಅಧಿಕಾರಿಗಳಿಗೆ ಇಂತಹ ಸಂದರ್ಭದಲ್ಲಿ ಕಚೇರಿಗಳಲ್ಲೇ ಕುಳಿತುಕೊಳ್ಳದೇ ತಾಲೂಕಿನಲ್ಲಿ ಸಂಚರಿಸಿ, ಕೆಲಸ ಮಾಡಬೇಕು. ಮಳೆಯಿಂದಾಗಿ ರಸ್ತೆಗಳು ಸಂಪೂರ್ಣ ಹದಗೆಟ್ಟಿವೆ. ರಾಜ್ಯ ಸರ್ಕಾರ ವಿಶೇಷ ಅನುದಾನ ನೀಡುವುದಿಲ್ಲ, ಇರುವ ಅವಕಾಶದಲ್ಲೇ ಒಳ್ಳೆಯ ಕಾಮಗಾರಿ ಮಾಡುವಂತೆ ತಿಳಿಸಿದರು.

ಕೃಷಿ ಇಲಾಖೆಯ ನಾರನಗೌಡ ಮಾತನಾಡಿ, ಈ ಬಾರಿ ವಾಡಿಕೆಗಿಂದ ಶೇ.45ರಷ್ಟು ಹೆಚ್ಚಿಗೆ ಮಳೆಯಾಗಿದೆ. ತಾಲೂಕಿನಲ್ಲಿ ಮಳೆಯಾಧಾರಿತ ಬೆಳೆಗಳನ್ನು ಬಿತ್ತನೆ ಮಾಡಲಾಗಿದೆ. ಹೆಚ್ಚಿನ ಇಳುವರಿ ನಿರೀಕ್ಷೆ ಮಾಡಲಾಗಿದೆ. ಭತ್ತದ ಬೆಳೆ ಈಗ ಕಾಳು ಕಟ್ಟುತ್ತಿರುವ ಕಾರಣ ಮಳೆಯಿಂದ ಹೆಚ್ಚಿನ ಹಾನಿ ಸಂಭವಿಸಬಹುದು. ಅಡಕೆಗೆ ಕೆಲವು ಕಡೆ ಕಪ್ಪುಹುಳು ರೋಗ ಕಾಣಿಸಿಕೊಂಡಿದ್ದು, ಕೀಟನಾಶಕ ಸಿಂಪಡಿಸುವ ಮೂಲಕ ಹೆಚ್ಚಿನ ನಷ್ಟ ತಪ್ಪಿಸಬಹುದು ಎಂದು ಮಾಹಿತಿ ನೀಡಿದರು.

ಹರಳಹಳ್ಳಿಯಲ್ಲಿ ಜೆಜೆಎಂ ನೀರಿನ ಕಾಮಗಾರಿ ಆಪೂರ್ಣವಾದ ಬಗ್ಗೆ ಮಾಹಿತಿ ಕೇಳಿದಾಗ, ಎಇಇ ಗಿರೀಶ್‌ ಮಾತನಾಡಿ, ತ್ತಿಗೆದಾರನಿಗೆ ಹಲವು ಬಾರಿ ಮನವಿ ಮಾಡಿದರೂ ಬಂದಿಲ್ಲ. ಈ ಹಿನ್ನೆಲೆಯಲ್ಲಿ ಅವರನ್ನು ಕಪ್ಪುಪಟ್ಟಿಗೆ ಸೇರಿಸುವಂತೆ ಮೇಲಧಿಕಾರಿಗಳಿಗೆ ಪತ್ರ ಬರೆಯಲಾಗಿದೆ ಎಂದು ಮಾಹಿತಿ ನೀಡಿದರು.

ಆಹಾರ ಇಲಾಖೆಯ ಮಂಜುನಾಥ ಮಾತನಾಡಿ, ಸರ್ಕಾರದ ಆದೇಶದಂತೆ ತಾಲೂಕಿನಲ್ಲಿ ಆದಾಯ ತೆರಿಗೆ ಸಲ್ಲಿಸುವ 441, ಆದಾಯ ಮಿತಿ ದಾಟಿದ 306 ಹಾಗೂ ಸರ್ಕಾರಿ ನೌಕರರ 7 ಜನರ ಬಿಪಿಎಲ್ ಪಡಿತರ ಚೀಟಿಗಳನ್ನು ಎಪಿಎಲ್ ಕಾರ್ಡ್‍ಗಳಾಗಿ ಪರಿವರ್ತನೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಕೆಎಸ್‍ಆರ್‌ಟಿಸಿ ಡಿಪೋ ವ್ಯವಸ್ಥಾಪಕ ಮಹೇಶ್ವರಪ್ಪ ಮಾತನಾಡಿ, ಹರಿಹರಕ್ಕೆ 14 ನೂತನ ಅಶ್ವಮೇಧ ಬಸ್‌ಗಳನ್ನು ನೀಡಲಾಗಿದೆ. ಇದರಲ್ಲಿ ಬೆಂಗಳೂರು ಹಾಗೂ ಕುಕ್ಕೆ ಸುಬ್ರಮಣ್ಯ ಕ್ಷೇತ್ರಕ್ಕೆ ಬಸ್‌ಗಳನ್ನು ಬಿಡಲಾಗಿದೆ. ಉಳಿದಂತೆ ತಾಲೂಕಿನಲ್ಲಿ ಹೆಚ್ಚುವರಿ ಮಾರ್ಗಗಳಿಗೆ ಬಸ್‌ಗಳ ಕಲ್ಪಿಸಲಾಗಿದೆ ಎಂದರು.

ಕೆಡಿಪಿ ನಾಮನಿರ್ದೇಶಿತ ಸದಸ್ಯರಾದ ಗೋವಿನಹಾಳ್ ರಾಜು, ಬಿ.ಬಿ.ಮಲ್ಲೇಶ್, ನರೇಂದ್ರ ಕುಮಾರ್ ರೆಡ್ಡಿ, ಸಿ. ಕೋಟ್ರೇಶ್ ಕುಮಾರ್, ಜಬೀವುಲ್ಲಾ, ಕೆ.ಶಿಲ್ಪಾ, ತಹಸೀಲ್ದಾರ್ ಗುರು ಬಸವರಾಜ್, ತಾಪಂ ಇಒ ಎಸ್.ಪಿ.ಸುಮಲತಾ, ಡಾ.ಸಿದ್ದೇಶ್, ಸಿಡಿಪಿಒ ಪೂರ್ಣಿಮಾ, ಜಿಪಂ ಗಿರಿಶ್, ಆರೋಗ್ಯ ಇಲಾಖೆಯ ಡಾ.ಖಾದರ್, ಸಾರ್ವಜನಿಕ ಆಸ್ಪತ್ರೆ ಡಾ.ಹನುಮ ನಾಯ್ಕ್, ಸಮಾಜ ಕಲ್ಯಾಣ ಇಲಾಖೆಯ ರಾಮಕೃಷ್ಣಪ್ಪ, ಎಡಿಎಲ್‍ಆರ್ ಸೋಮಶೇಖರ್, ತೋಟಗಾರಿಕೆ ಶಶಿಧರಯ್ಯ, ಕಾರ್ಮಿಕ ಇಲಾಖೆ ನಿರೀಕ್ಷಕಿ ಕವಿತಾ, ಇನ್ನಿತರೆ ಇಲಾಖೆಗಳ ಅಧಿಕಾರಿಗಳು ಇದ್ದರು.

- - -

ಬಾಕ್ಸ್‌ * ಎಸ್ಸೆಸ್ಸೆಲ್ಸಿ ಫಲಿತಾಂಶ ಹೆಚ್ಚಳಕ್ಕೆ ಕಾರ್ಯಕ್ರಮ ಬಿಇಒ ಡಿ.ದುರುಗಪ್ಪ ಮಾತನಾಡಿ, ಈ ಬಾರಿ ಎಸ್‍ಎಸ್‍ಎಲ್‍ಸಿ ಫಲಿತಾಂಶ ಶೇ.66ಕ್ಕೆ ಬಂದಿತ್ತು. ಆದರೆ, 3 ಬಾರಿ ಮರುಪರೀಕ್ಷೆ ಮಾಡಿದ ಕಾರಣ ಶೇ.80 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕಳೆದ ಬಾರಿ ಇಡೀ ಜಿಲ್ಲೆಯಲ್ಲಿ ಹರಿಹರ ತಾಲೂಕು ಕೊನೆಯ ಸ್ಥಾನ ಪಡೆದಿತ್ತು. ಈ ಬಾರಿ ಫಲಿತಾಂಶ ಹೆಚ್ಚಳ ಮಾಡುವ ಉದ್ದೇಶದಿಂದ ತರಬೇತಿ ಶಿಬಿರ, ಸಂಜೆ ತರಗತಿ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

- - - -21ಎಚ್‍ಆರ್‍ಆರ್1:

ಹರಿಹರ ನಗರದ ತಾಪಂ ಸಭಾಂಗಣದಲ್ಲಿ ಸೋಮವಾರ ತ್ರೈಮಾಸಿಕ ಪ್ರಗತಿ ಪರೀಶಿಲನೆ ಸಭೆ ನಡೆಯಿತು.