ಕನ್ನಡಪ್ರಭ ವಾರ್ತೆ ಮಳವಳ್ಳಿ

ಬರಗಾಲದಲ್ಲಿ ಜನ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಸರ್ಕಾರ ಆಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಸಚಿವ ಪಿ.ಎಂ.ನರೇಂದ್ರಸ್ವಾಮಿ ತಿಳಿಸಿದರು.

ತಾಲೂಕಿನ ರಾಗಿಬೊಮ್ಮನಹಳ್ಳಿ ಹಾಗೂ ಬಂಡೂರು ಗ್ರಾಮಗಳಿಗೆ ಸಚಿವ ಎನ್.ಚಲುವರಾಯಸ್ವಾಮಿ ಅವರೊಂದಿಗೆ ಬರಪೀಡಿತ ಕೃಷಿ ಪ್ರದೇಶಗಳಲ್ಲಿ ಬೆಳೆಗಳ ಸ್ಥಿತಿಗತಿ ಪರಿಶೀಲಿಸಿದ ನಂತರ ಮಾತನಾಡಿದ ಸಚಿವರು, ರಾಜ್ಯದಲ್ಲಿ ಬರದ ಛಾಯೆ ಆವರಿಸಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಲು ಮುಖ್ಯಮಂತ್ರಿಗಳ ಸೂಚನೆಯಂತೆ ಬರ ಪ್ರದೇಶಗಳನ್ನು ವೀಕ್ಷಿಸಿ ಸರ್ಕಾರಕ್ಕೆ ವರದಿ ನೀಡಲಾಗುವುದು. ಸಚಿವ ಸಂಪುಟದಲ್ಲಿ ಚರ್ಚೆ ಮಾಡಿ ಕೇಂದ್ರ ಸರ್ಕಾರಕ್ಕೆ ವರದಿ ನೀಡಲಾಗುವುದು ಎಂದರು.

ರಾಜ್ಯದೆಲ್ಲೆಡೆ ಬರ ಎದುರಾಗಿದೆ. ಕೊಡಗಿನಲ್ಲಿಯೂ ಹಲವು ಸಮಸ್ಯೆಗಳನ್ನು ಕಂಡು ಬಂದಿವೆ. ಪ್ರತಿಯೊಂದು ಜಿಲ್ಲೆಯ ಬರದ ಮಾಹಿತಿಯನ್ನು ಸರ್ಕಾರಕ್ಕೆ ಸಲ್ಲಿಸಿದ ನಂತರ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಲು ಮುಖ್ಯಮಂತ್ರಿಗಳ ಸೂಚನೆಯಂತೆ ಬರದ ಪ್ರದೇಶಗಳನ್ನು ವೀಕ್ಷಿಸಿ ವರದಿ ಮಾಡಲಾಗುತ್ತಿದೆ. ಸಚಿವ ಸಂಪುಟದಲ್ಲಿ ಚರ್ಚೆ ಮಾಡಿದ ನಂತರ ಕೇಂದ್ರ ಸರ್ಕಾರಕ್ಕೆ ವರದಿ ನೀಡಲಾಗುವುದು ಎಂದರು.

ಸಚಿವ ಎನ್.ಚಲುವರಾಯಸ್ವಾಮಿ ಮಾತನಾಡಿ, ಜಿಲ್ಲೆಯಲ್ಲಿ ಕಾವೇರಿ ಅಚ್ಟುಕಟ್ಟು ಪ್ರದೇಶಗಳಿಗೆ ನೀರು ನೀಡುವ ಬಗ್ಗೆ ಈ ವಾರದಲ್ಲಿ ಸಚಿವ ಪಿ.ಎಂ.ನರೇಂದ್ರಸ್ವಾಮಿ ಹಾಗೂ ಜಿಲ್ಲೆಯ ಶಾಸಕರೊಂದಿಗೆ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು. ಬರಗಾಲ ಘೋಷಣೆಗೆ ಸೆಂಪ್ಟಬರ್ ಕೊನೆವರೆಗೆ ಅವಕಾಶವಿದೆ. ಕೇಂದ್ರ ಸರ್ಕಾರದ ನಿಯಮದಂತೆ ಕ್ರಮ ಕೈಗೊಂಡು ತುರ್ತು ಸಂದರ್ಭದಲ್ಲಿ ಕೆಲ ಬೇಡಿಕೆಗಳನ್ನು ಕೇಂದ್ರಕ್ಕೆ ಸಲ್ಲಿಸಲಾಗುವುದು ಎಂದರು.


ರಾಜ್ಯದಲ್ಲಿ ಪೂರ್ವ ಮುಂಗಾರು ಕೈಕೊಟ್ಟ ಹಿನ್ನೆಲೆಯಲ್ಲಿ ಚಾಮರಾಜನಗರ, ಮಂಡ್ಯ ಭಾಗದಲ್ಲಿಯೇ ಆಲಸಂದೆ, ಎಳ್ಳು, ಹುರುಳಿ ಮತ್ತು ಉದ್ದಿನ ಬೆಳೆ ನಷ್ಟವಾಗಿದೆ.ಮುಂದಿನ ದಿನಗಳಲ್ಲಿ ಮಳೆಬಂದರೂ ಬಿತ್ತನೆ ಮಾಡಿದರೂ ಯಾವುದೇ ಪ್ರಯೋಜನವಿಲ್ಲ ಎಂದರು.

ಇದೇ ವೇಳೆ ಸಚಿವರಾದ ಎನ್.ಚಲುವರಾಯಸ್ವಾಮಿ, ಪಿ.ಎಂ.ನರೇಂದ್ರಸ್ವಾಮಿ ಹಾಗೂ ವಿಧಾನ ಪರಿಷತ್ ಸದಸ್ಯ ಬಿ.ಎಸ್.ಶಿವಣ್ಣ ಅವರು ತಾಲೂಕಿನ ಮಾಗನೂರು ಕಾಲೋನಿಯ ಬಸವೇಶ್ವರ ಹೋಟೇಲ್‌ನಲ್ಲಿ ರೈತರು, ಕಾಂಗ್ರೆಸ್ ಕಾರ್ಯಕರ್ತರ ಜೊತೆಗೂಡಿ ಬೆಳಗಿನ ಉಪಹಾರ ಸೇವಿಸಿದ ನಂತರ ತಾಲೂಕಿನ ರಾಗಿಬೊಮ್ಮನಹಳ್ಳಿಯ ಲತಾರೆಡ್ಡಿ, ಶಿವಣ್ಣ ಹಾಗೂ ಬಂಡೂರಿನ ಗೌರಮ್ಮ ಮತ್ತು ಶಿವಮಲ್ಲಯ್ಯ ಅವರ ಜಮೀನಿನಲ್ಲಿ ಮಳೆ ಇಲ್ಲದೇ ಒಣಗಿರುವ ಆಲಸಂದೆ, ಎಳ್ಳು, ಹುರುಳಿ ಮತ್ತು ಉದ್ದಿನ ಬೆಳೆಗಳನ್ನು ಪರಿಶೀಲಿಸಿ ರೈತರೊಂದಿಗೆ ಚರ್ಚೆ ನಡೆಸಿ ಸಮಸ್ಯೆಗಳನ್ನು ಆಲಿಸಿದರು.

ಇದೇ ಸಂದರ್ಭದಲ್ಲಿ ಮನ್ಮುಲ್ ನಿರ್ದೇಶಕ ಆರ್.ಎನ್.ವಿಶ್ವಾಸ್, ಕೃಷ್ಣೇಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಪಿ.ರಾಜು, ಮುಖಂಡರಾದ ಕೆ.ಜೆ ದೇವರಾಜು, ಸಿ.ಮಾದು, ಅಂಬರೀಷ್, ಸಂತೋಷ್, ಪ್ರಕಾಶ, ಮಹೇಶ್ ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.