ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಜಿಲ್ಲೆಯಾದ್ಯಂತ ಫೆ. 28ರಿಂದ ಮಾರ್ಚ್‌ 17ರವರೆಗೆ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳು ನಡೆಯಲಿದ್ದು, ಪರೀಕ್ಷೆಗಳನ್ನು ಪಾರದರ್ಶಕವಾಗಿ ನಡೆಸುವಂತೆ ಅಪರ ಜಿಲ್ಲಾಧಿಕಾರಿ ಅಶೋಕ ತೇಲಿ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಡಳಿತ ಭವನದಲ್ಲಿರುವ ಆಡಿಟೋರಿಯಂ ಹಾಲ್‌ನಲ್ಲಿ ಸೋಮವಾರ ಜರುಗಿದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಿಲ್ಲೆಯಲ್ಲಿ ಒಟ್ಟು 27009 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು, ಜಿಲ್ಲೆಯಾದ್ಯಂತ 165 ಕಾಲೇಜುಗಳಲ್ಲಿ 39 ಪರೀಕ್ಷಾ ಕೇಂದ್ರ ಸ್ಥಾಪಿಸಲಾಗಿದೆ. ಪರೀಕ್ಷೆಯಲ್ಲಿ ಯಾವುದೇ ರೀತಿಯ ಅಕ್ರಮ ಚಟುವಟಿಕೆ ನಡೆಯದಂತೆ ಮುಂಜಾಗ್ರತಾ ಕ್ರಮವಹಿಸಿ ಪಾರದರ್ಶಕವಾಗಿ ಪರೀಕ್ಷೆ ನಡೆಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಅಪರ ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪರೀಕ್ಷಾ ಕೇಂದ್ರಕ್ಕೆ ನೇಮಕಗೊಂಡ ಮುಖ್ಯ ಅಧೀಕ್ಷಕರು, ಕೊಠಡಿ ಮೇಲ್ವಿಚಾರಕರು, ಪ್ರಶ್ನೆಪತ್ರಿಕೆ ವಿತರಕರ ತಂಡ, ಸಿಟಿಂಗ್ ಸ್ಕ್ವಾಡ್, ಜಿಲ್ಲಾ ಜಾಗೃತ ದಳದವರು ತಮ್ಮ ತಮ್ಮ ಕರ್ತವ್ಯಗಳನ್ನು ಅರಿತು ಜವಾಬ್ದಾರಿಯಿಂದ ಕೆಲಸ ನಿರ್ವಹಿಸಬೇಕು. ಪರೀಕ್ಷಾ ಕಾರ್ಯಕ್ಕೆ ನಿಯೋಜನೆಗೊಂಡ ಸಿಬ್ಬಂದಿ ಇಲಾಖೆಯಿಂದ ನೀಡಿದ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ಬಳಸಬೇಕು. ಪರೀಕ್ಷಾ ಕಾರ್ಯಕ್ಕೆ ನಿಯೋಜನೆಗೊಂಡ ಸಿಬ್ಬಂದಿ ಹೊರತುಪಡಿಸಿ ಪರೀಕ್ಷಾ ಕೇಂದ್ರದಲ್ಲಿ ಪ್ರವೇಶ ನಿಷೇಧಿಸಲಾಗಿದೆ ಎಂದರು.

ಪರೀಕ್ಷಾ ಕೇಂದ್ರದಲ್ಲಿ ಮುಖ್ಯ ಅಧೀಕ್ಷಕರನ್ನು ಹೊರತುಪಡಿಸಿ ಇತರೆ ಅಧಿಕಾರಿಗಳು, ಸಿಬ್ಬಂದಿ, ವಿದ್ಯಾರ್ಥಿಗಳಿಗೆ ಮೊಬೈಲ್ ಫೋನ್, ಇ-ಕ್ಯಾಮೆರಾ, ಲ್ಯಾಪಟಾಪ್ ತರುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಪರೀಕ್ಷೆಗಳನ್ನು ಸುಸೂತ್ರವಾಗಿ ಮತ್ತು ಲೋಪದೋಷಗಳಿಲ್ಲದೆ ಜರುಗಿಸಲು ಪರೀಕ್ಷಾ ಕೇಂದ್ರಗಳ ಸುತ್ತಲೂ 200 ಮೀಟರ್‌ ವರೆಗೆ ನಿಷೇಧಿತ ಪ್ರದೇಶವೆಂದು ಘೋಷಿಸಲಾಗಿದೆ. ಈ ಪ್ರದೇಶದಲ್ಲಿ ಪರೀಕ್ಷಾ ಅವಧಿಯಲ್ಲಿ ಝರಾಕ್ಸ್‌ ಅಂಗಡಿಗಳು ಇದ್ದಲ್ಲಿ ಮುಚ್ಚಬೇಕೆಂದರು.


ಸಭೆಯಲ್ಲಿ ಉಪವಿಭಾಗಾಧಿಕಾರಿ ಸಂತೋಷ ಜಗಲಾಸರ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಪುಂಡಲೀಕ ಕಾಂಬಳೆ, ತಹಸೀಲ್ದಾರರಾದ ವಾಸುದೇವ ಸ್ವಾಮಿ, ವಿನೋದ ಹತ್ನಟ್ಟಿ, ಗಿರೀಶ ಸ್ವಾದಿ, ಡಾ.ಚಿಕ್ಕಪ್ಪ ನಾಯಕ, ಅನೀಲ ಮೇತ್ರಿ, ಡಿವೈಎಸ್ಪಿ ಗಜಾನನ ಸುತಾರ ಸೇರಿದಂತೆ ಪರೀಕ್ಷಾ ಕೇಂದ್ರ ಮುಖ್ಯ ಅಧೀಕ್ಷಕರು ಉಪಸ್ಥಿತರಿದ್ದರು.ಬಾಕ್ಸ್-----

ಸಿಸಿಟಿವಿ ಪರೀಕ್ಷೆ ಮೇಲೆ ಕಣ್ಗಾವಲು

ಸಮಯಕ್ಕೆ ಸರಿಯಾಗಿ ಪ್ರಶ್ನೆ ಪತ್ರಿಕೆ ಆಯಾ ಪರೀಕ್ಷಾ ಕೇಂದ್ರಕ್ಕೆ ತಲುಪಿಸುವ ಕೆಲಸವಾಗಬೇಕು. ಪರೀಕ್ಷಾ ಕಾರ್ಯಕ್ಕೆ ನೀಡಲಾದ ನಿರ್ದೇಶನಗಳನ್ನು ಚಾಚೂ ತಪ್ಪದೇ ಪಾಲಿಸಬೇಕು. ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಉತ್ತಮವಾದ ಡೆಸ್ಕ್‌ ವ್ಯವಸ್ಥೆ, ಕುಡಿಯುವ ನೀರು ಹಾಗೂ ಶೌಚಾಲಯ ವ್ಯವಸ್ಥೆ ಮಾಡಬೇಕು. ಪರೀಕ್ಷಾ ಕೇಂದ್ರದಲ್ಲಿ ಮಾಡಲಾದ ಆಸನಗಳ ವ್ಯವಸ್ಥೆ ಬಗ್ಗೆ ಸೂಚನಾ ಫಲಕದಲ್ಲಿ ಅಂಟಿಸಬೇಕು. ಪ್ರಶ್ನೆ ಪತ್ರಿಕೆ ಬಂಡಲ್ ತೆರೆಯುವಾಗ, ಉತ್ತರ ಪತ್ರಿಕೆ ಸ್ವೀಕರಿಸುವ, ಬಂಡಲ್ ಮಾಡುವುದು ಸೇರಿದಂತೆ ಇತರೆ ಪ್ರಕ್ರಿಯೆಗಳನ್ನು ಸಿಸಿಟಿವಿ ಕಣ್ಗಾವಲು ಮೂಲಕ ನಡೆಸಲು ತಿಳಿಸಿದರು.